Saturday, 14th December 2024

CM Siddaramaiah: ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣ; ಖುದ್ದು ಪರಿಶೀಲಿಸಲು ರಾಯಚೂರು ಎಸ್‌ಪಿಗೆ ಸಿಎಂ ಸೂಚನೆ

CM Siddaramaiah

ಕಲಬುರಗಿ: ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಆಗಸ್ಟ್ 22 ರಂದು ನಡೆದಿದ್ದ ಸಂಜಯ್ ಕುರ್ಡೀಕರ್ ಕೊಲೆ ಪ್ರಕರಣದ (Murder Case) ತನಿಖೆಯನ್ನು ಖುದ್ದು ಪರಿಶೀಲನೆ ನಡೆಸುವಂತೆ ರಾಯಚೂರು ಎಸ್‌ಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಸೂಚನೆ ನೀಡಿದ್ದಾರೆ. ಕಲಬುರಗಿಯಲ್ಲಿ (Kalaburagi) ವಿಶೇಷ ಸಚಿವ ಸಂಪುಟ ಸಭೆಗೆ ಮುಖ್ಯಮಂತ್ರಿಗಳು ಮತ್ತು ಸಂಪುಟ ಸದಸ್ಯರು ಬಸ್‌ನಲ್ಲಿ ತೆರಳುವ ವೇಳೆ ಸಾರ್ವಜನಿಕ ಅಹವಾಲು ಸ್ವೀಕರಿಸಿದರು. ಈ ವೇಳೆ ಕೊಲೆಯಾದ ಸಂಜಯ್ ಪತ್ನಿ ಶಾಂತಮ್ಮ ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಶಾಂತಮ್ಮ ಅವರ ಗೋಳಾಟ ನೋಡಿ ಮರುಗಿದ ಸಿಎಂ, ಸ್ಥಳದಲ್ಲೇ ದೂರವಾಣಿ ಮೂಲಕ ರಾಯಚೂರು ಎಸ್‌ಪಿ ಅವರನ್ನು ಸಂಪರ್ಕಿಸಿ ಕೊಲೆ ಪ್ರಕರಣದ ವಿವರಣೆ ಕೇಳಿದರು.

ಈ ಸುದ್ದಿಯನ್ನೂ ಓದಿ | DK Shivakumar: ಆರೋಪ ಮಾಡುವುದೇ ಬಿಜೆಪಿ ಕೆಲಸ; ಡಿ.ಕೆ. ಶಿವಕುಮಾರ್

ಬಳಿಕ ಕೊಲೆ ಪ್ರಕರಣದ ತನಿಖೆಯನ್ನು ಖುದ್ದಾಗಿ ಪರಿಶೀಲನೆ ನಡೆಸಬೇಕು. ಈ ವರೆಗೂ ನಡೆದಿರುವ ತನಿಖೆ ಸಮರ್ಪಕವಾಗಿದೆಯೇ? ಕೊಲೆಯಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದು ಅವರು ತಪ್ಪಿಸಿಕೊಂಡಿದ್ದಾರಾ? ನಿಜವಾದ ಆರೋಪಿಗಳು ಹೊರಗೆ ಇದ್ದರೆ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಲು ಸಾಧ್ಯವಿಲ್ಲ. ಆದ್ದರಿಂದ ಖುದ್ದಾಗಿ ಕೊಲೆ ಪ್ರಕರಣದ ತನಿಖೆಯ ಮೇಲೆ ನಿಗಾ ವಹಿಸಬೇಕು, ಬಳಿಕ ಈ ಬಗ್ಗೆ ನನಗೆ ವರದಿ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸೂಚನೆಯನ್ನು ನೀಡಿದರು.