Saturday, 14th December 2024

Dr S Ramesh: ರೈಲ್ವೇ ನಿಲ್ದಾಣಕ್ಕೆ ಸಿದ್ಧಗಂಗಾ ಮಾದರಿ ಶ್ಲಾಘನೀಯ: ಡಾ.ಎಸ್.ಪರಮೇಶ್‌

ತುಮಕೂರು: ಕೇಂದ್ರ ರೈಲ್ವೇ ಖಾತೆಯ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಕಾರ್ಯಕ್ಷಮತೆಯ ಕಾರಣದಿಂದ ತುಮಕೂರು ರೈಲ್ವೇ ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಮಾದರಿ ಸ್ಪರ್ಶ ನೀಡುತ್ತಿರುವುದು ಕೋಟ್ಯಂತರ ಭಕ್ತರಿಗೆ ಸಂತಸ ತಂದಿದೆ ಎಂದು ಎಂದು ಬಿಜೆಪಿ ಜಿಲ್ಲಾ ಕೋಶಾಧ್ಯಕ್ಷ ಡಾ.ಎಸ್.ಪರಮೇಶ್‌ ತಿಳಿಸಿದ್ದಾರೆ.

ಡಾ.ಶಿವಕುಮಾರ ಸ್ವಾಮೀಜಿ ಅವರ ಅನನ್ಯ ಭಕ್ತರಾದ ವಿ.ಸೋಮಣ್ಣ ರೈಲ್ವೇ ನಿಲ್ದಾಣಕ್ಕೆ ಮರುಸ್ಪರ್ಶ ನೀಡುವ ಮೂಲಕ ಸಿದ್ಧಗಂಗಾ ಮಠದ ಪರಂಪರೆಯನ್ನು ಪ್ರಪಂಚಕ್ಕೆ ಸಾರಲು ಮುಂದಾಗಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.

ರೈಲ್ವೆ ಯೋಜನೆಗೆ ವೇಗ

ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ತುಮಕೂರು- ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ಯೋಜನೆಗೆ ವೇಗ ನೀಡಿದ್ದಾರೆ. ಅಂದಾಜು 440 ಕೋಟಿ ವೆಚ್ಚದಲ್ಲಿ 7 ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಚಾಲನೆ ನೀಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಿದ್ದಾರೆ. ಧಾರವಾಡ-ಬೆಂಗಳೂರು ಮಾರ್ಗದ ವಂದೇ ಭಾರತ್, ಚನ್ನೈ-ಶಿವಮೊಗ್ಗ ರೈಲುಗಳನ್ನು ತುಮಕೂರಲ್ಲಿ ನಿಲುಗಡೆ ಮಾಡಿಸುವ ಮೂಲಕ ಪ್ರಾದೇಶಿಕ ಸಂಪರ್ಕಕ್ಕೆ ಅನುಕೂಲ ಮಾಡಿಕೊಟ್ಟು ಮಾದರಿ ಸಚಿವರಾಗಿದ್ದಾರೆ ಎಂದರು.

ತೆಂಗು ಬೆಳೆಗಾರರ ಬಗ್ಗೆ ಕಾಳಜಿ

15 ಸಾವಿರ ಕೋಟಿ ವೆಚ್ಚದಲ್ಲಿ ಬೆಂಗಳೂರು ಮೆಟ್ರೋ ಮೂರನೇ ಹಂತದ ಎರಡು ಪಥಗಳ ಯೋಜನೆಗೆ ಅನುಮೋದನೆ ನೀಡಿ ಬೆಂಗಳೂರಿಗೆ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಸಂಕಷ್ಟ ದಲ್ಲಿದ್ದ ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ನೆರವಾಗಿ ಬೆಂಬಲ ಬೆಲೆ ಯಲ್ಲಿ ನಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ಅವಕಾಶ, ಬಾಕಿ ಮೊತ್ತದ ಬಿಡುಗಡೆ ಗೆ ಕ್ರಮ ವಹಿಸಿರುವುದು ತೆಂಗು ಬೆಳೆಗಾರರ ಪರವಾದ ಕಾಳಜಿಗೆ ಸಾಕ್ಷಿ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.