Saturday, 23rd November 2024

4 ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ಇಂದು

ಬೆಂಗಳೂರು: ರಾಜ್ಯಸಭೆ ಚುನಾವಣೆಗೆ ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ಬೆಳಗ್ಗೆ 10 ಗಂಟೆ ಯಿಂದ ಸಂಜೆ 4 ಗಂಟೆವರೆಗೂ ಮತದಾನ ನಡೆಯಲಿದೆ. ಒಟ್ಟು 4 ರಾಜ್ಯ ಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಟ್ಟು 223 ಶಾಸಕರು ಮತ ಚಲಾಯಿಸಲಿದ್ದಾರೆ. ಶಾಸಕರ ಸಂಖ್ಯಾಬಲದಂತೆ ನಾಲ್ಕು ಸ್ಥಾನದ ಪೈಕಿ ಕಾಂಗ್ರೆಸ್‌ಗೆ 3, ಬಿಜೆಪಿಗೆ 1 ಸ್ಥಾನದ ಗೆಲುವು ಸಲೀಸಾಗಲಿದೆ.

ಕಾಂಗ್ರೆಸ್‌ನಿಂದ ಅಜಯ್ ಮಕೇನ್, ಜಿ.ಸಿ ಚಂದ್ರಶೇಖರ್, ಡಾ. ಸೈಯದ್ ನಾಸೀರ್ ಹುಸೇನ್ ಕಣದಲ್ಲಿದ್ದಾರೆ.

ಬಿಜೆಪಿಯಿಂದ ನಾರಾಯಣಸಾ ಭಾಂಡಗೆ ಸ್ಪರ್ಧೆಗಿಳಿದಿದ್ದಾರೆ. ಬಿಜೆಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.

ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ ಕಣಕ್ಕಿಳಿದಿರುವುದರಿಂದಲೇ ಪೈಪೋಟಿ ಜೋರಾಗಿದೆ. ಸೋಮವಾರ ರಾತ್ರಿವರೆಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳು ಪಕ್ಷಗಳ ಶಾಸಕಾಂಗ ಪಕ್ಷದ ಸಭೆ ನಡೆಸಿ ಭರ್ಜರಿ ರಣತಂತ್ರ ರೂಪಿಸಿವೆ. ಅದರಲ್ಲೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಮತದಾನ ಹೇಗೆ ಮಾಡಬೇಕು ಎಂಬ ತರಬೇತಿಯನ್ನೂ ನೀಡಲಾಗಿದೆ. ಡಿಸಿಎಂ ಡಿಕೆ ಚುನಾವಣಾ ಏಜೆಂಟ್ ಆಗಿದ್ದು, ಅಡ್ಡ ಮತದಾನ ಆಗುವ ಆತಂಕ ನಮಗಿಲ್ಲ ಎಂದಿದ್ದಾರೆ.

ಇತ್ತ ದೋಸ್ತಿಗಳು ಸಹ ಪ್ರತಿ ತಂತ್ರ ಮಾಡುತ್ತಿದ್ದಾರೆ. ಬೆಂಗಳೂರಿನ ಎಂ.ಜಿ ರಸ್ತೆಯಲ್ಲಿರೋ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ ರಣತಂತ್ರ ರೂಪಿಸಿದ್ದಾರೆ. ಜೆಡಿಎಸ್​ ಸಿಎಲ್​ಪಿ ಸಭೆಗೆ, ಯಾದಗಿರಿ ಜಿಲ್ಲೆ ಗುರುಮಠಕಲ್ ಕ್ಷೇತ್ರದ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಗೈರಾಗಿದ್ದರು. ಮೊನ್ನೆಯಷ್ಟೇ ಕುಮಾರಸ್ವಾಮಿ ಬಗ್ಗೆ ಅಸಮಾಧಾನ ಹೊರಹಾಕಿದ್ದೂ ಅಲ್ಲದೆ, ತಾವು ಸಿದ್ದರಾಮಯ್ಯನವರ ಋಣದಲ್ಲಿ ಇದ್ದೀನಿ ಎಂದು ಹೇಳಿದ್ದರು. ಹೀಗಾಗಿ ಮತದಾನಕ್ಕೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದ್ರೆ, ಹೆಚ್​.ಡಿ.ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಇಬ್ಬರೂ ಶರಣಗೌಡ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.