Friday, 13th December 2024

Ramalinga Reddy: ಸಾರಿಗೆ ಸಿಬ್ಬಂದಿಗೆ ವೇತನ ಬಾಕಿ; ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿರುಗೇಟು

ಕೊಪ್ಪಳ: ಅಧಿಕಾರಾವಧಿ ಮುಗಿಯುವಾಗ ಸಾರಿಗೆ ನಿಗಮಗಳಿಗೆ ಕೊಡಬೇಕಿದ್ದ 2023ರಲ್ಲಿ 5900 ಕೋಟಿ ರೂ. ಬಾಕಿ ಉಳಿಸಿರುವ ಬಿಜೆಪಿಗೆ ನಮ್ಮ ಸರಕಾರ‌ದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalingareddy) ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿ, ಸಾರಿಗೆ ನಿಗಮಗಳ ಹಣ ಬಾಕಿ ವಿಚಾರ ಕುರಿತು ಬಿಜೆಪಿಯ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿದರು. ಸಾರಿಗೆ ನಿಗಮಗಳಿಗೆ ಸರಕಾರದಿಂದ 7625 ಕೋಟಿ ಹಣ ಬಾಕಿ ಬಗ್ಗೆ ಬಿಜೆಪಿ ಟ್ವೀಟ್ ಮಾಡಿರಬಹುದು. ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ. ಅವರಿಗೆ ಏನು ತಿಳುವಳಿಕೆಯೂ ಇಲ್ಲ ಈ‌ ಕಾರಣಕ್ಕೆ ಇಂಥ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಳೆದ ಸರಕಾರದ ಅವಧಿಯಲ್ಲಿ ಬಿಎಂಟಿಸಿ (BMTC) ಹೊರತುಪಡಿಸಿ ಬೇರೆ ನಿಗಮದಲ್ಲಿ ಒಂದು ಬಸ್ ಕೂಡಾ ಖರೀದಿ ಮಾಡಿರಲಿಲ್ಲ.‌ ನಮ್ಮ ಸರಕಾರದ ಬಂದ ನಂತರ 6300 ಬಸ್ ಖರೀದಿಸುವ ಪ್ರಕ್ರಿಯೆ ಆರಂಭವಾಗಿದೆ.‌ ಖಾಲಿ ಇರುವ 9 ಸಾವಿರ ನೇಮಕಾತಿ ನಡೆಯುತ್ತಿವೆ.‌ ಈ ಹಿನ್ನೆಲೆ ಬಿಜೆಪಿಯಿಂದ ಹೇಳಿಸಿಕೊಳ್ಳುವ ಅವಶ್ಯಕತೆ ನಮಗೆ ಇಲ್ಲ. ಸಾರಿಗೆ ನಿಗಮಗಳ ಕಾರ್ಮಿಕರಿಗೆ ನೀಡಬೇಕಿದ್ದ ಹಣ ಬಾಕಿ ಇರುವುದು ಸತ್ಯ. ಆದರೆ, ಅದನ್ನು ಉಳಿಸಿ ಹೋಗಿದ್ದು ಹಿಂದಿನ ಸರಕಾರ. ಈಗ ಆರೋಪ ಮಾಡುವವರೇ ಆರೋಪಿಗಳು ಎಂದು ತಿರುಗೇಟು ನೀಡಿದರು.

ಸಾರಿಗೆ ನಿಗಮಗಳಿಗೆ 1600 ಕೋಟಿ ರೂ. ಶಕ್ತಿ ಯೋಜನೆಯ ಹಣ ಬರಬೇಕಿದೆ. ಶೀಘ್ರವೇ ಪಾವತಿ ಮಾಡುವುದಾಗಿ ಸಿಎಂ ಹೇಳಿದ್ದಾರೆ. ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆದಾಯ ಹೆಚ್ಚಾಗಿದೆ. ಬಿಜೆಪಿಗರಂತೆ ನಾವು ಸುಳ್ಳು- ನಕಲಿ ಮಾತನಾಡುವುದಿಲ್ಲ. ಸಾರಿಗೆ ನಿಗಮಗಳ ಯೂನಿಯನ್ ಲೀಡರ್ ಜೊತೆ ಮಾತನಾಡಿದ್ದೇನೆ. ಕಾರ್ಮಿಕರಿಗೆ ಕೊಡುವುದನ್ನು ಕೊಡಲೇಬೇಕು. ಬಿಜೆಪಿಗರಿಗೆ ನನ್ನ ಮುಂದೆ ಬಂದು ಮಾತನಾಡಲು ಹೇಳಿ. ಟ್ವಿಟ್ ಮಾಡುವು ದನ್ನು ಬಿಟ್ಟು ನನ್ನ ಮುಂದೆ ಚರ್ಚಿಸಲಿ ಎಂದು ಪಂಥಾಹ್ವಾನ ನೀಡಿದರು. ಸಂಸದ ರಾಜಶೇಖರ ಹಿಟ್ನಾಳ ಇದ್ದರು.

ಇದನ್ನೂ ಓದಿ: DK Shivakumar: ಸಿಎಂ ಯಾವುದೇ ತಪ್ಪು ಮಾಡಿಲ್ಲ, ನಾವೆಲ್ಲಾ ಅವರ ಜತೆ ನಿಲ್ಲುತ್ತೇವೆ: ಡಿಕೆಶಿ