ಜಿಲ್ಲಾಡಳಿತದಿಂದ ಸರಳವಾಗಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಿಸಿ ಹೇಳಿಕೆ
ಚಿಕ್ಕಬಳ್ಳಾಪುರ: ಕಿತ್ತೂರು ರಾಣಿ ಚೆನ್ನಮ್ಮ ಅವರು ಭಾರತದ ಸ್ವಾತಂತ್ರ‍್ಯ ಚಳುವಳಿಯ ಮಹಿಳಾ ಹೋರಾಟ ಗಾರರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಇವರ ಹೆಸರು ಭಾರತ ಹಾಗೂ ಕರ್ನಾಟಕದ ಇತಿಹಾಸ ಪುಟಗಳಲ್ಲಿ ಸದಾ ಕಾಲ ಚಿರಸ್ಥಾಯಿಯಾಗಿರಲಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ ತಿಳಿಸಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಬಳ್ಳಾಪುರ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರಕ್ಕಾಗಿ ಬ್ರಿಟೀಷರ ವಿರುದ್ದ ಹೋರಾಡಿದ ಕೆಳದಿಯ ರಾಣಿ ಅಬ್ಬಕ್ಕ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ಕಿತ್ತೂರು ರಾಣಿ ಚೆನ್ನಮ್ಮ ಪ್ರಮುಖರು. ದೈವ ಭಕ್ತಿ, ಶಕ್ತಿ ಧೈರ್ಯ,ಸ್ಪೂರ್ತಿ ಹಾಗೂ ಸಾಹಸವು ಮೇಳೈಸಿರುವ ರಾಣಿ ಎಂದರೆ ಚೆನ್ನಮ್ಮ ಎಂದು ಬಣ್ಣಿಸಿದರು.
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ಬ್ರಿಟೀಷರ ನೀತಿಯನ್ನು ವಿರೋಧಿಸಿ ಯುದ್ದದಲ್ಲಿ ಹೋರಾಡಿ ಒಮ್ಮೆ ಜಯಶೀಲ ರಾಗುತ್ತಾರೆ ನಂತರ ೨ನೇ ಯುದ್ದದಲ್ಲಿ ಹೋರಾಡಿ ಬಂಧನಕ್ಕೆ ಒಳಪಟ್ಟು ಜೈಲಿನಲ್ಲೆ ಪ್ರಾಣ ತ್ಯಾಗ ಮಾಡಿದ ವೀರಾಗ್ರಣಿ ಚೆನ್ನಮ್ಮ .ಇಂತಹ ಮಹಿಳಾ ಕ್ರಾಂತಿಕಾರಿ ಸಾಹಸಿಯ ಸಾಧನೆಯನ್ನು ಸರ್ವರಿಗೂ ಸರ್ವಕಾಲಕ್ಕೂ ತಲುಪಿಸಲು ಕರ್ನಾಟಕ
ಸರ್ಕಾರ ಕಿತ್ತೂರು ಉತ್ಸವವನ್ನು ಪ್ರತಿ ವರ್ಷ ಆಚರಿಸುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅನಿಲ್ ಅವರು ಕಿತ್ತೂರು ರಾಣಿ ಚೆನ್ನಮ್ಮ ಅವರ ಸ್ವಾತಂತ್ರ‍್ಯ ಹೋರಾಟದ ಗತ ವೈಭವದ ಬಗ್ಗೆ ಉಪನ್ಯಾಸ ನೀಡಿದರು. ಈ ವೇಳೆ ಸಮುದಾಯದ ಮುಖಂಡರಾದ ಉಮಸುರೇಶ್, ಗೀತಾರಾಜು, ಅವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವಿ ಕುಮಾರ್, ಅಖಿಲ ಭಾರತ ವೀರ ಶೈವ ಲಿಂಗಾಯತ ಸಮುದಾಯದ ಜಿಲ್ಲಾಧ್ಯಕ್ಷ ಮಹೇಶ್ ಬಸವಾಪುರ, ರಾಜೇಂದ್ರ ಬಾಬು, ಸಮುದಾಯದ ಮುಖಂಡರು ಹಾಗೂ ಪದಾಧಿಕಾರಿಗಳು , ಸಿಬ್ಬಂದಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Raja Rani Reloaded Winner: ಸಂಜಯ್ – ಮೇಘಾ ಜೋಡಿಗೆ ರಾಜಾ ರಾಣಿ ಚಾಂಪಿಯನ್ ಪಟ್ಟ