ಉಡುಪಿ: ಭಾರತೀಯ ಭೂಸೇನೆಯ ಹಿರಿಯ ನಿವೃತ್ತ ಯೋಧ, ಉಡುಪಿ ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷ ಆರ್ ಎಲ್ ಡಯಾಸ್ (88) ಅವರು ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.
ಕಳೆದ ಎರಡು ದಶಕಗಳಿಂದ ಡಯಾಸ್ ರವರು ಉಡುಪಿ ರೈಲ್ವೆ ಯಾತ್ರಿ ಸಂಘದ ಪದಾಧಿಕಾರಿ ಹಾಗೂ ಅಧ್ಯಕ್ಷರಾಗಿದ್ದು ಉಡುಪಿ ಭಾಗದ ರೈಲ್ವೆ ಸೇರಿದಂತೆ ನೈಋತ್ಯ ರೈಲ್ವೆ, ದಕ್ಷಿಣ ರೈಲ್ವೆ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸಿ ಕೆಲಸ ಮಾಡಿಸುವಲ್ಲಿ ಯಶಸ್ಸು ಕಂಡಿದ್ದರು.
ಸಂಘದ ನೇತೃತ್ವದಲ್ಲಿ ಸಂಘಟಿತ ಹೋರಾಟದಿಂದ ಉಡುಪಿ ಭಾಗದಲ್ಲಿ ಹಲವಾರು ರೈಲ್ವೆ ಯೋಜನೆಗಳು ಜಾರಿಗೊಳ್ಳಲು ಮಹತ್ವದ ಪಾತ್ರ ವಹಿಸಿದ್ದರು. ಇತರ ಕ್ಷೇತ್ರಗಳಲ್ಲೂ ಡಯಾಸ್ ರವರ ಸಾಮಾಜಿಕ ಕಳಕಳಿ ನಿರಂತರವಾಗಿದ್ದು ಪರ್ಕಳ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಸ್ಪಂದನೆ, ಉಡುಪಿಯಲ್ಲಿ ನರ್ಮ್ ಬಸ್ ಓಡಾಟದ ಹಿಂದೆ ಅವರ ಪಾತ್ರ, ಈಗ ಚಾಲನೆಯಲ್ಲಿ ರುವ ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗೆ ಅವರು ನಡೆಸಿದ ಹೋರಾಟಗಳು ನೆನಪಿನಲ್ಲಿ ಉಳಿಯುವಂಥದ್ದು.
ಡಯಾಸ್ ಅವರು ಪತ್ನಿ, ನಾಲ್ವರು ಪುತ್ರಿ, ಓರ್ವ ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಭಾನುವಾರ ಮಧ್ಯಾಹ್ನ ಅಂತಿಮ ಸಂಸ್ಕಾರ ಮಣಿಪಾಲ ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿದೆ.