Friday, 13th December 2024

ಮಕ್ಕಳಿಗೆ ತಿಳುವಳಿಕೆಯ ಶಿಕ್ಷಣ ನೀಡಿ: ರಮೇಶ್ ರಾಜಾಪೂರ

ಕಲಬುರಗಿ: ಮಕ್ಕಳಿಗೆ ಗುಣಮಟ್ಟದ ಜತೆ ತಿಳುವಳಿಕೆಯ ಶಿಕ್ಷಣ ನೀಡಬೇಕು. ನ್ಯಾಯ ಯುತ ಮೌಲ್ಯ ಮತ್ತು ಒಳ್ಳೆಯ ನಡತೆ ಕಲಿಸುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕ ರದ್ದಾಗಿದೆ ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಮೇಶ್ ರಾಜಾಪೂರ ಅಭಿಪ್ರಾಯಪಟ್ಟರು.

ಕಲಬುರಗಿ ತಾಲೂಕಿನ ನಂದೂರ (ಕೆ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಾಲ್ಯದಲ್ಲಿ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾದರೆ ಭವಿಷ್ಯದಲ್ಲಿ ಅವರಿಗೆ ಸಿಗುವ ಸೌಲಭ್ಯಗಳು ಸಿಗುವುದಿಲ್ಲ. ಹಾಗಾಗಿ, ಮನೆಯಲ್ಲಿರುವ ಹಿರಿಯರು ಮಕ್ಕಳನ್ನು ತಿಳಿಪಡಿಸ ಬೇಕು. ಅವರವರ ಜವಾಬ್ದಾರಿ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕು. ಈ ಮೂಲಕ ಮಕ್ಕಳ ವರ್ತಮಾನ ಮತ್ತು ಭವಿಷ್ಯದ ಜೀವನ ಉಳಿಸಬೇಕು ಎಂದರು.

ನಂದೂರ (ಕೆ) ಗ್ರಾಮ ಮುಖಂಡ ನಾಗೇಂದ್ರ ಕಲ್ಲಾ ಮಾತನಾಡಿ, ವಿದ್ಯಾವಂತರ ಜತೆಗೆ ಮಕ್ಕಳನ್ನು ವಿನಯವಂತರನ್ನಾಗಿಸು ವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಕಿವಿಮಾತು ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಮ್. ಜಾನೆ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಚಿಕ್ಕ ವಯಸ್ಸಲ್ಲೇ ಹೆಣ್ಣು ಮಕ್ಕಳಿಗೆ ಮದುವೆ ಮಾಡಲಾಗುತ್ತದೆ. ಮಕ್ಕಳ ಭವಿಷ್ಯ ಹಾಳು ಮಾಡುವ ಬದಲು, ಪೋಷಕರ ಇಂತಹ ದುಡುಕಿನ ನಿರ್ಧಾರಗಳಿಗೆ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಈ ಸಂದರ್ಭದಲ್ಲಿ ನಂದೂರ (ಕೆ) ಗ್ರಾಮ ಪಂಚಾಯತಿ ಅಧ್ಯಕ್ಷ ನಿಂಗಣ್ಣ ದೊಡ್ಮನಿ, ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಹಾನಂದಾ, ಕಾರ್ಯದರ್ಶಿ ಕಲ್ಯಾಣಿ ಎರಿ, ಎಸ್. ಡಿ.ಎಮ್.ಸಿ  ದಸರಥ ಮಾಗಾಂವ, ಮಹಿಳಾ ಸಂಘದ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ಪೋಷಕರು ಮತ್ತು ಮಕ್ಕಳು ಸಭೆಯಲ್ಲಿ ಪಾಲ್ಗೊಂಡಿದ್ದರು.