Saturday, 14th December 2024

ಸುಸ್ಥಿರ ಮತ್ತು ಸಮತೋಲನದ ಬೆಳವಣಿಗೆ ಕೇಂದ್ರೀತ ಸಮಾವೇಶ

ಜಾಗತಿಕ ಹೂಡಿಕೆದಾರರ ಸಮಾವೇಶ- 2025ಕ್ಕೆ ಚಾಲನೆ ನೀಡಿದ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್

• 2025ರ ಫೆಬ್ರುವರಿ 12ರಿಂದ 14ರವರೆಗೆ 3 ದಿನಗಳ ಸಮಾವೇಶ
• ಬೆಳವಣಿಗೆಯ ಹೊಸಪರಿಕಲ್ಪನೆ; ಸಮಾವೇಶದ ಮುಖ್ಯ ಧ್ಯೇಯ
• ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವಹಿವಾಟು ವಿಸ್ತರಣೆಗೆ ಪ್ರತ್ಯೇಕ ಪ್ರದರ್ಶನ
• ಜಾಗತಿಕ ನವೋದ್ಯಮ ಸವಾಲು-ವೆಂಚುರೈಸ್‌ನ ದ್ವಿತೀಯ ಆವೃತ್ತಿ
• ರಾಜ್ಯ ಸರ್ಕಾರ ಹಾಗೂ ಉದ್ಯಮದ ಜೊತೆಗಿನ ಅರ್ಥಪೂರ್ಣ ಸಹಯೋಗದ ವೇದಿಕೆ
• ಕರ್ನಾಟಕವನ್ನು ಆವಿಷ್ಕಾರ ಹಾಗೂ ಹೂಡಿಕೆಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿನ ಮಹತ್ವದ ಹೆಜ್ಜೆ
• ವಿವಿಧ ವಲಯಗಳಲ್ಲಿ ಆವಿಷ್ಕಾರ ಹಾಗೂ ಪಾಲುದಾರಿಕೆಗೆ ಅವಕಾಶ
• ಸಮಾರಂಭದಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಶ್ರೀ ಎಂ. ಬಿ. ಪಾಟೀಲ ಅವರು ಉಪಸ್ಥಿತರಿದ್ದರು

ಬೆಂಗಳೂರು: ʼಮುಂದಿನ ವರ್ಷದ ಫೆಬ್ರುವರಿ 12 ರಿಂದ ಮೂರು ದಿನಗಳ ಕಾಲ ನಗರದ ಅರಮನೆ ಮೈದಾನದಲ್ಲಿ ʼಜಾಗತಿಕ ಹೂಡಿಕೆದಾರರ ಸಮಾವೇಶ -2025ʼ ಆಯೋಜಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆʼ ಎಂದು ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಇಂದು ಇಲ್ಲಿ ಪ್ರಕಟಿಸಿದರು.

ʼ2025ರ ಫೆಬ್ರುವರಿ 12 ರಿಂದ 14ರವರೆಗೆ ನಡೆಯಲಿರುವ ಈ ಸಮಾವೇಶದ ಮುಖ್ಯ ಧ್ಯೇಯವು ʼಬೆಳವಣಿಗೆಯ ಹೊಸಪರಿಕಲ್ಪನೆʼ (Reimagining Growth) ಆಗಿದೆ. ಈ ಥೀಮ್‌- ತಂತ್ರಜ್ಞಾನ ಆಧಾರಿತ, ಪರಿಸರ ಸ್ನೇಹಿ, ಸುಸ್ಥಿರ ಹಾಗೂ ಸಮತೋಲನದ ಬೆಳವಣಿಗೆಯನ್ನು ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆʼ ಎಂದು ಅವರು ಹೇಳಿದರು.

ಸಮಾವೇಶದಲ್ಲಿ 100ಕ್ಕೂ ಹೆಚ್ಚು ಪರಿಣತರು ವೈವಿಧ್ಯಮಯ ವಿಷಯಗಳನ್ನು ಮಂಡಿಸಲಿದ್ದಾರೆ. 30ಕ್ಕೂ ಹೆಚ್ಚು ತಾಂತ್ರಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 5,000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಸಮಾರಂಭದಲ್ಲಿ ಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಶ್ರೀ ಎಂ. ಬಿ. ಪಾಟೀಲ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಸಚಿವ ಶ್ರೀ ಶರಣಬಸಪ್ಪ ದರ್ಶನಾಪುರ, ಆರೋಗ್ಯ ಸಚಿವ ಶ್ರೀ ದಿನೇಶ ಗುಂಡೂರಾವ್, ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಎಂ.ಸಿ.ಸುಧಾಕರ, ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ, ಜವಳಿ ಇಲಾಖೆ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಮತ್ತು ಕೃಷಿ ಮಾರುಕಟ್ಟೆ ಇಲಾಖೆ ಸಚಿವ ಶ್ರೀ ಶಿವಾನಂದ ಪಾಟೀಲ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಸೆಲ್ವಕುಮಾರ್ ಎಸ್, ಅವರು ಸ್ವಾಗತ ಭಾಷಣ ಮಾಡಿದರು. ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತರಾದ ಶ್ರೀಮತಿ ಗುಂಜನ್ ಕೃಷ್ಣ ಅವರು ʼಇನ್ವೆಸ್ಟ್ ಕರ್ನಾಟಕ-2025ʼರ ಅವಲೋಕನ ವರದಿ ಮಂಡಿಸಿದರು.
ಈ ಸಮಾವೇಶವನ್ನು ಹೊಸ ಚಿಂತನೆಯ ನಾಯಕತ್ವದ ವೇದಿಕೆಯಾಗಿ, ಉದ್ಯಮ ಮತ್ತು ರಾಜ್ಯ ಸರ್ಕಾರದ ಮಧ್ಯೆ ಪಾಲುದಾರಿಕೆ ಹೆಚ್ಚಿಸುವ ವೇದಿಕೆಯಾಗಿ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿದೆ.

ʼಎಸ್‌ಎಂಇ ಸಂಪರ್ಕ- 25ʼ; ಸಮಾವೇಶದ ಪ್ರಮುಖ ಆಕರ್ಷಣೆ
ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ (ಎಸ್‌ಎಂಇ) ವಹಿವಾಟಿನ ಅವಕಾಶಗಳನ್ನು ಕಾರ್ಯಗತಗೊಳಿಸುವ ಮತ್ತು ವಿಸ್ತರಿಸುವ ಉದ್ದೇಶದ ʼಎಸ್‌ಎಂಇ ಸಂಪರ್ಕ- 25ʼ (SME Connect 25) ಕಾರ್ಯಕ್ರಮವು ಹೂಡಿಕೆದಾರರ ಸಮಾವೇಶದ ಈ ಆವೃತ್ತಿಯ ಪ್ರಮುಖ ಆಕರ್ಷಣೆ ಆಗಿರಲಿದೆ. ʼಎಸ್‌ಎಂಇ ಸಂಪರ್ಕ-25 ಉಪಕ್ರಮಕ್ಕೆ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಶ್ರೀ ಎಂ. ಬಿ. ಪಾಟೀಲ ಅವರು ಚಾಲನೆ ನೀಡಿದರು. ಡಿಜಿಟಲ್ ಸಾಧನದಿಂದ ಸುಲಲಿತಗೊಳಿಸಿದ ಖರೀದಿದಾರರು ಹಾಗೂ ಮಾರಾಟಗಾರರ ಸಭೆಗಳನ್ನು ಇದು ಒಳಗೊಂಡಿರಲಿದೆ. ಜೊತೆಗೆ ಸರ್ಕಾರಿ ಇ-ಮಾರುಕಟ್ಟೆತಾಣ (ಜಿಇಎಂ) ಸೇರ್ಪಡೆಗೆ ತಾಂತ್ರಿಕ ಕಾರ್ಯಾಗಾರ, ಡಿಜಿಟಲ್‌ ವಾಣಿಜ್ಯ ಹಾಗೂ ಅಮೆಜಾನ್‌, ಫ್ಲಿಕ್‌ಕಾರ್ಟ್‌ನಂತಹ ಪ್ರಮುಖ ಇ-ಕಾಮರ್ಸ್ ಅಂತರ್ಜಾಲ ತಾಣಗಳಿಗೆ ಮುಕ್ತ ಸಂಪರ್ಕಜಾಲ (ಒಎನ್‌ಡಿಸಿ) ಸೌಲಭ್ಯಗಳನ್ನು ಒಳಗೊಂಡಿರಲಿದೆ. ಖರೀದಿದಾರರಿಗೆ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲು ʼಎಸ್‌ಎಂಇʼಗಳಿಗೆ ಪ್ರತ್ಯೇಕ ಪ್ರದರ್ಶನ ಸ್ಥಳ ಇರಲಿದೆ.

ವೆಂಚುರೈಸ್‌- ಜಾಗತಿಕ ನವೋದ್ಯಮ ಸವಾಲು: ಇನ್ನೊಂದು ವಿಶೇಷತೆ
ವೆಂಚುರೈಸ್‌- ಜಾಗತಿಕ ನವೋದ್ಯಮ ಸವಾಲಿನ (VentuRISE – the Global Startup Challenge) ಎರಡನೇ ಆವೃತ್ತಿಯು ಈ ಹೂಡಿಕೆದಾರರ ಸಮಾವೇಶದ ಇನ್ನೊಂದು ವೈಶಿಷ್ಟವಾಗಿರಲಿದೆ.

ಇದು ತಯಾರಿಕೆ ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳನ್ನು ಗುರುತಿಸಲು, ಪುರಸ್ಕರಿಸಲು ಮತ್ತು ಬೆಂಬಲಿಸುವ ಉದ್ದೇಶ ಒಳಗೊಂಡಿದೆ. ನವೋದ್ಯಮಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಬಂಡವಾಳ ಹೂಡಿಕೆಯ ನೆರವು ಪಡೆಯಲು ವೇದಿಕೆ ಒದಗಿಸಲಿದೆ. ʼವೆಂಚುರೈಸ್-25ʼ ನ ಆದ್ಯತಾ ವಲಯಗಳಲ್ಲಿ ಎಲೆಕ್ಟ್ರಾನಿಕ್ ಸಿಸ್ಟಮ್ ಡಿಸೈನ್ ಮತ್ತು ತಯಾರಿಕೆ (ಇಎಸ್‌ಡಿಎಂ), ಶುದ್ಧ ಇಂಧನ ಸಂಚಾರ, ವೈಮಾಂತರಿಕ್ಷ ಹಾಗೂ ರಕ್ಷಣಾ ವಲಯಗಳು ಸೇರಿವೆ. ಪ್ರಮುಖ ಉದ್ಯಮಿಗಳಾದ ಅಂಕಿತ್ ಫತೇಪುರಿಯಾ (ಸಹ-ಸಂಸ್ಥಾಪಕ- ಝೆಟ್‌ವರ್ಕ್), ಅವೈಸ್ ಅಹ್ಮದ್ (ಸ್ಥಾಪಕ ಮತ್ತು ಸಿಇಒ- ಪಿಕ್ಸೆಲ್), ಮಿನು ಮಾರ್ಗರೇಟ್ (ಸ್ಥಾಪಕಿ ಮತ್ತು ಸಿಇಒ- ಬ್ಲಿಸ್ ಕ್ಲಬ್), ಕೌಶಿಕ್ ಮುಡ್ಡಾ (ಸಹ ಸಂಸ್ಥಾಪಕ ಮತ್ತು ಸಿಇಒ- ಇಥೆರಿಯಲ್‌ ಮಷಿನ್ಸ್‌ ), ರೋಹನ್ ಗಣಪತಿ (ಸಿಇಒ ಮತ್ತು ಸಿಟಿಒ- ಬೆಲಾಟ್ರಿಕ್ಸ್‌ ಏರೋಸ್ಪೇಸ್) ಮತ್ತು ಗಧಾಧರ್ ರೆಡ್ಡಿ (ನೊಪೊ ನ್ಯಾನೊಟೆಕ್ನಾಲಜೀಸ್‌ನ ಸ್ಥಾಪಕ ಮತ್ತು ಸಿಇಒ). ಅವರು ಭಾಗವಹಿಸಲಿದ್ದಾರೆ. ಇದರಲ್ಲಿ ಭಾಗಿಯಾಗುವವರು ಉದ್ಯಮದ ಲೋಕದ ದಿಗ್ಗಜರು ಮತ್ತು ಬಂಡವಾಳ ಹೂಡಿಕೆದಾರರ ಜೊತೆ ಸಮಾಲೋಚನೆ ನಡೆಸಲು ಅಪೂರ್ವ ಅವಕಾಶವನ್ನು ಹೊಂದಿರುತ್ತಾರೆ. ಜೊತೆಗೆ ಉದ್ಯಮ – ವಹಿವಾಟು ವಿಸ್ತರಣೆಗೆ ಸದವಕಾಶದ ಪ್ರಯೋಜನ ಪಡೆಯಲಿದ್ದಾರೆ.

ಮುಖ್ಯಮಂತ್ರಿ ಆಶಾವಾದ
ಸಮಾವೇಶವು ಸಂಪೂರ್ಣವಾಗಿ ಯಶಸ್ವಿಯಾಗುವ ಬಗ್ಗೆ ಗೌರವಾನ್ವಿತ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಮ್ಮ ಆಶಾವಾದ ವ್ಯಕ್ತಪಡಿಸಿದರು, ʼಜಾಗತಿಕ ಹೂಡಿಕೆದಾರರ ಸಮಾವೇಶ- 2025ʼ- ಸುಸ್ಥಿರ ಮತ್ತು ಸಮತೋಲನದ ಬೆಳವಣಿಗೆಯನ್ನು ಉತ್ತೇಜಿಸಲು ರಾಜ್ಯ ಸರ್ಕಾರದ ಅಚಲ ಬದ್ಧತೆಗೆ ಸಾಕ್ಷಿಯಾಗಿದೆ. ಜಾಗತಿಕ ಉದ್ಯಮದ ದಿಗ್ಗಜರು, ಆವಿಷ್ಕಾರರು ಮತ್ತು ನೀತಿ ನಿರೂಪಕರನ್ನು ಒಂದೆಡೆ ಸೇರಿಸುವ ಮೂಲಕ, ನಾವು ತಾಂತ್ರಿಕ ಪ್ರಗತಿ ಮುನ್ನಡೆಸುವ, ಪರಿಸರ ಸ್ನೇಹಿ ಉಪಕ್ರಮಗಳು ಮತ್ತು ಪುಟಿದೇಳುವ ಆರ್ಥಿಕ ಅಭಿವೃದ್ಧಿ ಉತ್ತೇಜಿಸುವ ಚಲನಶೀಲ ಪೂರಕ ವ್ಯವಸ್ಥೆಯನ್ನು ರೂಪಿಸುವ ಗುರಿ ಹೊಂದಿದ್ದೇವೆ. ಜಾಗತಿಕ ಉದ್ಯಮ ಲೋಕವನ್ನು ಬೆಂಗಳೂರಿಗೆ ಸ್ವಾಗತಿಸಲು ಮತ್ತು ಜಾಗತಿಕ ಬಂಡವಾಳ ಹೂಡಿಕೆಯ ತಾಣವಾಗಿ ಕರ್ನಾಟಕದ ಸಾಮರ್ಥ್ಯವನ್ನು ಇಡೀ ವಿಶ್ವಕ್ಕೆ ಪ್ರದರ್ಶಿಸಲು ನಾವು ಉತ್ಸುಕರಾಗಿದ್ದೇವೆʼ ಎಂದು ಹೇಳಿದ್ದಾರೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಶ್ರೀ ಎಂ.ಬಿ.ಪಾಟೀಲ ಅವರು ಮಾತನಾಡಿ, ́ʼತಂತ್ರಜ್ಞಾನ, ಸುಸ್ಥಿರತೆ ಮತ್ತು ಸಮತೋಲನ ಆಧರಿಸಿದ ಆರ್ಥಿಕ ಬೆಳವಣಿಗೆಯನ್ನು ಮರುರೂಪಿಸುವುದು ʼಹೂಡಿಕೆ ಕರ್ನಾಟಕ-2025ʼರ ಮುಖ್ಯ ಉದ್ದೇಶವಾಗಿದೆ. ಈ ಸಮಾವೇಶವು ಕೇವಲ ಬಂಡವಾಳ ಹೂಡಿಕೆಗೆ ವೇದಿಕೆಯಾಗಿರುವುದಿಲ್ಲ. ಸರ್ಕಾರ ಮತ್ತು ಉದ್ಯಮ ವಲಯದ ನಡುವಣ ಅರ್ಥಪೂರ್ಣ ಸಹಯೋಗದ ವೇದಿಕೆಯಾಗಿರಲಿದೆ. ʼಎಸ್‌ಎಂಇʼಗಳು, ನವೋದ್ಯಮಗಳು ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಮೇಲಿನ ನಮ್ಮ ಗಮನವು ನಮ್ಮ ಅರ್ಥ ವ್ಯವಸ್ಥೆಯ ಎಲ್ಲಾ ವಲಯಗಳಲ್ಲಿ ಸಮಗ್ರ ಸ್ವರೂಪದ ಹಾಗೂ ಸಮತೋಲನದ ಅಭಿವೃದ್ಧಿ ಮುನ್ನಡೆಸುವ ರಾಜ್ಯ ಸರ್ಕಾರದ ಸಮರ್ಪಣಾಭಾವವನ್ನು ಒತ್ತಿಹೇಳುತ್ತದೆʼ ಎಂದು ಹೇಳಿದರು.
ಸಣ್ಣ ಕೈಗಾರಿಕೆಗಳು ಮತ್ತು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳ ಸಚಿವ ಶ್ರೀ ಶರಣಬಸಪ್ಪ ದರ್ಶನಾಪುರ ಅವರು ಮಾತನಾಡಿ, ʼಜಾಗತಿಕ ಹೂಡಿಕೆದಾರರ ಸಮಾವೇಶ- 2025ʼ- ರಾಜ್ಯದ ಸಣ್ಣ ಕೈಗಾರಿಕೆಗಳಿಗೆ ಪ್ರಮುಖ ತಿರುವು ನೀಡುವ ಸಮಾವೇಶವಾಗಿರಲಿದೆ. ಖರೀದಿದಾರರು, ಉದ್ಯಮದ ನಾಯಕರು ಮತ್ತು ನೀತಿ ನಿರೂಪಕರೊಂದಿಗೆ ಸಂಪರ್ಕ ಸಾಧಿಸಲು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ವೇದಿಕೆ ಒದಗಿಸುವ ಮೂಲಕ, ನಾವು ಈ ಉದ್ಯಮಗಳು ಹೊಸ ಎತ್ತರಕ್ಕೆ ಏರಲು ಅವುಗಳನ್ನು ಸಬಲೀಕರಣಗೊಳಿಸುತ್ತಿದ್ದೇವೆ. ಉದ್ಯಮ 4.0 ಸಿದ್ಧತೆ ಮತ್ತು ಆವಿಷ್ಕಾರಕ್ಕೆ ಸಂಬಂಧಿಸಿದ ನಮ್ಮ ಬದ್ಧತೆಯ ಫಲವಾಗಿ ರಾಜ್ಯದಲ್ಲಿನ ʼಎಸ್‌ಎಂಇʼಗಳು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಲು ಸಜ್ಜುಗೊಂಡಿರುವುದನ್ನು ಖಚಿತಪಡಿಸುತ್ತದೆʼ ಎಂದು ಹೇಳಿದರು.

ʼಭವಿಷ್ಯದ ಆವಿಷ್ಕಾರʼ ಪ್ರದರ್ಶನ
ಸಮಾವೇಶದಲ್ಲಿ ಸಂಚಾರ, ವಿಮಾನಯಾನ, ರಕ್ಷಣೆ, ಆರೋಗ್ಯ, ನಿಖರ ತಯಾರಿಕೆ, ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸೇರಿದಂತೆ ವಿವಿಧ ವಲಯಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸುವ ʼಭವಿಷ್ಯದ ಆವಿಷ್ಕಾರʼ ಪ್ರದರ್ಶನವನ್ನು ಸಹ ಒಳಗೊಂಡಿರಲಿದೆ. ಈ ಪ್ರದರ್ಶನವು ಆವಿಷ್ಕಾರ ಮತ್ತು ತಾಂತ್ರಿಕ ಪ್ರಗತಿಯಲ್ಲಿ ಕರ್ನಾಟಕದ ನಾಯಕತ್ವವನ್ನು ಎತ್ತಿ ಹಿಡಿಯುವ ಗುರಿ ಹೊಂದಿದೆ.

ತಯಾರಿಕಾ ವಲಯದ ಸಮಗ್ರ ಅಭಿವೃದ್ಧಿಗೆ ಬದ್ಧತೆ
ʼಜಾಗತಿಕ ಹೂಡಿಕೆದಾರರ ಸಮಾವೇಶ-2025ʼವು ರಾಜ್ಯದ ತಯಾರಿಕಾ ವಲಯವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಬದ್ಧವಾಗಿದೆ, ಬೃಹತ್‌ ಕೈಗಾರಿಕೆಗಳು, ನವೋದ್ಯಮಗಳು ಮತ್ತು ʼಎಸ್‌ಎಂಇʼಗಳನ್ನು ಒಳಗೊಂಡಿರಲಿದೆ. ಬಂಡವಾಳ ಹೂಡಿಕೆಯ ಒಟ್ಟಾರೆ ಬದ್ಧತೆಗಳು, ಕಾರ್ಯಗತಗೊಂಡ ಶೇಕಡಾವಾರು ಹೂಡಿಕೆಗಳು, ಒಟ್ಟಾರೆ ಉದ್ಯೋಗ ಸೃಷ್ಟಿ, ನವೋದ್ಯಮಗಳಲ್ಲಿ ಬಂಡವಾಳ ತೊಡಗಿಸಿದವರ ಸಂಖ್ಯೆ, ಉದ್ಯಮ 4.0 ಗಾಗಿ ಸಜ್ಜುಗೊಂಡ ಎಸ್‌ಎಂಇಗಳ ಸಂಖ್ಯೆ ಮತ್ತು ಖರೀದಿದಾರರು ಹಾಗೂ ಮಾರಾಟಗಾರರ ಮಧ್ಯೆ ಏರ್ಪಟ್ಟ ಸಂವಹನಗಳ ಸಂಖ್ಯೆ ಮುಂತಾದವು ಈ ಸಮಾವೇಶದ ಯಶಸ್ಸಿನ ಪ್ರಮುಖ ಮಾನದಂಡಗಳಾಗಿರಲಿವೆ.
ಈ ಪರಿವರ್ತನೆ ತರುವ ಸಮಾವೇಶದಲ್ಲಿ ಭಾಗವಹಿಸಲು, ರಾಜ್ಯದ ಆರ್ಥಿಕ ಬೆಳವಣಿಗೆಗೆ ಹೊಸ ಪರಿಕಲ್ಪನೆ ಒದಗಿಸಲು ಮತ್ತು ಸುಸ್ಥಿರ ಅಭಿವೃದ್ಧಿಗೆ ಚಾಲನೆ ನೀಡಲು ಕೈಜೋಡಿಸಲು ಜಾಗತಿಕ ಹೂಡಿಕೆದಾರರು, ಉದ್ಯಮದ ದಿಗ್ಗಜರು ಮತ್ತು ಉದ್ಯಮಿಗಳನ್ನು ಕರ್ನಾಟಕ ರಾಜ್ಯ ಸರ್ಕಾರವು ಆಹ್ವಾನಿಸಲಿದೆ.