Thursday, 19th September 2024

ಸಾಂತ್ವನ ಕೇಂದ್ರಗಳು  24 ಗಂಟೆ ಕಾರ್ಯ ನಿರ್ವಹಿಸಲು ಸೂಚನೆ 

ತುಮಕೂರು: ಸಾಂತ್ವನ ಕೇಂದ್ರಗಳಲ್ಲಿ ಸಿಬ್ಬಂದಿಗಳು ಕಡ್ಡಾಯವಾಗಿ ದಿನದ 24 ಗಂಟೆ ಕಾರ್ಯನಿರ್ವಹಿಸುವಂತೆ ಹಾಗೂ ಸಾಂತ್ವನ ಕೇಂದ್ರಗಳ ದೂರವಾಣಿ ಸಂಖ್ಯೆಯನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ವ್ಯಾಪಕ ಪ್ರಚಾರ ಮಾಡಲು ಅಗತ್ಯ ಕ್ರಮವಹಿಸುವಂತೆ ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚಿಸಿದರು.
ಸಾಂತ್ವನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲಾ ಬಾಲಭವನದ ಅಭಿವೃದ್ಧಿಗೆ ಪೂರಕವಾದ ಹಲವು ಕಾಮಗಾರಿಗಳನ್ನು ಕೈಗೊಳ್ಳು ವಂತೆ ತಿಳಿಸಿದರಲ್ಲದೆ, ಜಿಲ್ಲಾ ಬಾಲಭವನದಿಂದ ಜಿಲ್ಲೆಯ ತಾಲ್ಲೂಕುಗಳ ನಗರ ಮತ್ತು ಗ್ರಾಮೀಣಾ ಮಕ್ಕಳಿಗೆ ಪ್ರತ್ಯೇಕವಾಗಿ ಕಾರ್ಯಕ್ರಮ, ಚಟುವಟಿಕೆ ಗಳನ್ನು ಆಯೋಜಿಸುವ ಸಂಬಂಧ ಕ್ರಿಯಾ ಯೋಜನೆಯನ್ನು ಸಿದ್ದಪಡಿಸಲು ಸೂಚಿಸಿದರು.
ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಕಾಯ್ದೆಯಡಿ ಮಕ್ಕಳ ಗ್ರಾಮಸಭೆಗಳಲ್ಲಿ ಕಡ್ಡಾಯವಾಗಿ ಮಕ್ಕಳು ಹಾಜರಿರಲು ಅಗತ್ಯ ಕ್ರಮ ವಹಿಸು ವಂತೆ ತಿಳಿಸಿದರು. ಈ ಸಂದರ್ಭಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಟದ ಬಗ್ಗೆ ಅರಿವು ಮೂಡಿಸುವಂತೆ ಹಾಗೂ ಇಂತಹ ಸಭೆಗಳಲ್ಲಿ ಮಕ್ಕಳ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು, ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಪೂರಕ ಪೌಷ್ಠಿಕ ಆಹಾರ ವಿತರಣೆಗೆ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ಅಗತ್ಯ ಕ್ರಮವಹಿಸಲು ಸೂಚಿಸಿದರು.
ಅಂಗನವಾಡಿ ಕೇಂದ್ರಗಳ ಮೂಲಭೂತ ಸೌಕರ್ಯಗಳು ಕುರಿತು ಚರ್ಚಿಸಿದ ಅವರು, ಜಿಲ್ಲೆಯಲ್ಲಿ ಅತೀ ಶೀಘ್ರವಾಗಿ ಬಾಡಿಗೆ ಕಟ್ಟಡದಲ್ಲಿ ನಡೆಯುವ ಕೇಂದ್ರಗಳನ್ನು ಎಲ್ಲಾ ಮೂಲಭೂತ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಸ್ವಂತ ಅಂಗನವಾಡಿ ಕಟ್ಟಡಗಳಲ್ಲಿ ನಡೆಸಲು ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದರು.
ಈ ಸಂದರ್ಭ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಸೇರಿದಂತೆ ವಿವಿಧ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಸಮಿತಿ ಸದಸ್ಯರುಗಳು ಹಾಜರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಪವಿತ್ರ ವಂದನಾರ್ಪಣೆ ನೆರವೇರಿಸಿದರು.

Leave a Reply

Your email address will not be published. Required fields are marked *