ತುಮಕೂರು: ಜನರಲ್ಲಿ ವೈಜ್ಞಾನಿಕ ಮನೋಧರ್ಮ ಬೆಳೆಸುವುದು ಶಿಕ್ಷಣದ ಗುರಿಯಾಗಬೇಕು ಎಂದು ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಕರೆ ನೀಡಿದರು.
ನಗರದ ಶ್ರೀಸಿದ್ದಾರ್ಥ ಮೆಡಿಕಲ್ ಕಾಲೇಜು ಆವರಣದಲ್ಲಿ ಕರ್ನಾಟಕ ರಾಜ್ಯವೈಜ್ಞಾನಿಕ ಸಂಶೋಧನಾ ಪರಿಷತ್ ಆಯೋಜಿಸಿದ್ದ ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಅತಿ ಹೆಚ್ಚು ವಿದ್ಯಾವಂತರೇ ಮೂಢನಂಬಿಕೆ ಗಳನ್ನು ಪ್ರತಿಪಾದಿಸುತಿದ್ದು,ಹಾಗಾಗಿಯೇ ವಿದ್ಯಾವಂತರೆಲ್ಲಾ ವಿವೇಕವಂತರಲ್ಲ. ಅವಿದ್ಯಾವಂತರಲ್ಲ, ಅವಿವೇಕಿಗಳಲ್ಲ ಎಂಬ ಮಾತು ಪ್ರಚಲಿತದಲ್ಲಿದೆ ಎಂದರು.
1ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾದ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ, ,ವೈಜ್ಞಾನಿಕ ಮನೋಧರ್ಮವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಿದೆ.ಇದರ ಜೊತೆಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯ ದುಷ್ಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಂಡು ಎಚ್ಚರಿಸುವ ಕೆಲಸ ಮಾಡಬೇಕಾಗಿದೆ ಎಂದರು.
ರಾಜ್ಯಮಟ್ಟದ 2ನೇ ವೈಜ್ಞಾನಿಕ ಸಮ್ಮೇಳನದ ಅಧ್ಯಕ್ಷರಾದ ಜಸ್ಟಿಸ್ ನಾಗಮೋಹನ್‌ದಾಸ್ ಮಾತನಾಡಿ, ಅಭಿವ್ಯಕ್ತಿ ಸ್ವಾತಂತ್ರದ ರಕ್ಷಣೆ ಇಲ್ಲದೆ,ವೈಜ್ಞಾನಿಕ ಮನೋಧರ್ಮವನ್ನು ಬೆಳೆಸಲು ಸಾಧ್ಯವಿಲ್ಲ. ಪ್ರಶ್ನಿಸುವವರ ಮೊಬೈಲ್‌ಗಳಿಗೆ ದೇಶವಿರೋಧಿ ದಾಖಲೆಗಳನ್ನು ತುಂಬಿ,ಅಪರಾಧಿಗಳನ್ನಾಗಿಸಿ, ಕಾರಾ ಗೃಹದಲ್ಲಿ ಕೊಳೆಯುವಂತೆ ಮಾಡಲಾಗುತ್ತಿದೆ ಎಂದರು.
ಮೌಢ್ಯಕ್ಕೆ ಹೆಚ್ಚು ಬಲಿಯಾಗುತ್ತಿರುವುದು ಮಹಿಳೆಯರು.ಮೂಢನಂಬಿಕೆ ವಿರುದ್ದ ಹೋರಾಟ ನಡೆಸುವಂತಹ ವೈಜ್ಞಾರಿಕ ಮನೋಧರ್ಮವನ್ನು ಈ ವೈಜ್ಞಾನಿಕ ಸಮ್ಮೇಳನ ಹುಟ್ಟು ಹಾಕಿ, ಆ ಮೂಲಕ ನೆಮ್ಮದಿ, ಶಾಂತಿಯ ಸಮ ಸಮಾಜ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀರಾಮಕೃಷ್ಣ ಮಠದ ಶ್ರೀ ವೀರೇಶಾನಂದಸರಸ್ವತಿ ಸ್ವಾಮೀಜಿ ಮಾತನಾಡಿ, ಯಶಸ್ಸನ್ನು ಗಳಿಸಲು ಅನ್ಯ ಮಾರ್ಗಗಳಿವೆ.ಆದರೆ ಬದುಕನ್ನು ಮೌಲ್ಯಯುತಗೊಳಿಸಿಕೊಳ್ಳಲು ಕಳ್ಳದಾರಿಗಳಿಲ್ಲ. ಕೇವಲ ಫಲಿತಾಂಶದ ಆಧಾರ ಮೇಲಿರುವ ಇಂದಿನ ಶಿಕ್ಷಣ ಪದ್ದತಿಯಿಂದ ಮಕ್ಕಳಲ್ಲಿ ಮಾನವೀಯತೆ, ಅಂತಃಕರಣ ಕಡಿಮೆಯಾಗು ತ್ತಿದು. ನೈತಿಕ ಪ್ರಜ್ಞೆ ಮರೆಯಾಗುತ್ತಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಜಿ.ಎಸ್.ಶ್ರೀಧರ್,ವೈಜ್ಞಾನಿಕ ಮನೋಧರ್ಮ ಎಂಬುದು ದೇಶ ಭಕ್ತಿಯ ಒಂದು ಅಂಗ.ದೇಶವೆಂದರೆ ಕೇವಲ ಕಟ್ಟಡಗಳು, ರಸ್ತೆಗಳಲ್ಲ.ಅದಕ್ಕೂ ಮೀಗಿಲಾದ ಮಾನವೀಯ, ಸಮಸಮಾಜದ ಕನಸು. ಮೂಢನಂಬಿಕೆಯ ಹೆಸರಿನಲ್ಲಿ ಜನರ ಅಲೋಚನೆಗಳಿಗೆ ವಿಷ ತುಂಬು ಕೆಲಸ ನಡೆಯುತ್ತಿದೆ. ಕರ್ನಾಟಕ ರಾಜ್ಯ ವೈಜ್ಞಾ ನಿಕ ಸಂಶೋಧನಾ ಪರಿಷತ್ತಿನ ವಿಜ್ಞಾನ ಗ್ರಾಮದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಹುಟ್ಟು ಹಾಕುವ ಪ್ರಕ್ರಿಯೆ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ಹುಲಿಕಲ್ ನಟರಾಜ್ ವಹಿಸಿದ್ದರು.ವೇದಿಕೆಯಲ್ಲಿ ಚಿಂತಕ ಕೆ.ದೊರೈರಾಜು, ರಾ.ವೈ.ಸಂ.ಪರಿಷತ್ತಿನ ತುಮಕೂರು ಜಿಲ್ಲಾಧ್ಯಕ್ಷ ಡಾ.ಸಿ.ಎಸ್.ಮೋಹನ್‌ಕುಮಾರ್,ಡಾ.ಕೆ. ಜಿ.ರಾವ್, ಹಂಪಿನ ಕೆರೆ ರಾಜೇಂದ್ರ, ಎಸ್.ರೇಣುಕಾ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Read E-Paper click here