Wednesday, 11th December 2024

ಸೆ.12ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಒಳಮೀಸಲು ಜಾರಿಗೆ ಆಗ್ರಹಿಸಿ ತಮಟೆ ಚಳವಳಿ

ಚಿಕ್ಕಬಳ್ಳಾಪುರ: ಸುಪ್ರೀಂಕೋರ್ಟ್ ಆದೇಶದ ಅನ್ವಯ ಕೂಡಲೇ ರಾಜ್ಯ ಸರ್ಕಾರ ಪರಿಶಿಷ್ಟ ಜಾತಿಯೊಳಗಿನ ಉಪ ಜಾತಿಗಳಿಗೆ ಒಳ ಮೀಸಲು ಜಾರಿಗೊಳಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಸೆ.12 ರಂದು ಜಿಲ್ಲಾ ಕೇಂದ್ರಗಳಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಬೃಹತ್ ತಮಟೆ ಚಳವಳಿ ಹಮ್ಮಿಕೊಂಡಿದೆ ಎಂದು ರಾಜ್ಯ ಸಂಘಟನಾ ಸಂಚಾಲಕ ಬಾಲಕುಂಟಹಳ್ಳಿ ಗಂಗಾಧರ್ ತಿಳಿಸಿದರು.



ನಗರದ ಪತ್ರಕರ್ತರ ಭವನದಲ್ಲಿ ಒಳಮೀಸಲು ಜಾರಿ ಸಂಬAಧ ಹಮ್ಮಿಕೊಂಡಿರುವ ತಮಟೆ ಚಳವಳಿ ಕುರಿತ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರಕಾರ ಯಾವುದೇ ಮುಲಾಜಿಗೆ ಒಳಗಾಗದೆ,ಹಿಡನ್ ಅಜೆಂಡಾ ಇಟ್ಟುಕೊಳ್ಳದೆ ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಹಾಕಿರುವಂತೆ ಸಾಮಾಜಿಕ ನ್ಯಾಯಕ್ಕೆ ಒತ್ತು ಕೊಟ್ಟು ಈ ಕೂಡಲೇ ಒಳಮೀಸಲು ಜಾರಿ ಮಾಡ ಬೇಕು ಎಂದು ಆಗ್ರಹಿಸಿದರು.

ಸತತ 30 ವರ್ಷಗಳಿಂದ ಕೂಡ ಪರಿಶಿಷ್ಟರಲ್ಲಿರುವ ಸಮುದಾಯಗಳಿಗೆ ಒಳಮೀಸಲು ನೀಡಿ ಎಂದು ಆಗ್ರಹಿಸುತ್ತಾ ಬರಲಾಗಿದೆ. ಮುಂದುವರೆದು ಒಳ ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ದೇಶಾದ್ಯಂತ ಕೂಡ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬರಲಾಗಿತ್ತು. ಕೊನೆಗೂ ಸುಪ್ರೀಂಕೋರ್ಟ್ನ 7 ಮಂದಿ ನ್ಯಾಯಾಧೀಶ ರನ್ನೊಳ ಗೊಂಡ ಸಂವಿಧಾನಿಕ ಪೀಠ ಒಳ ಮೀಸಲಾತಿ ಜಾರಿ ಸಂವಿಧಾನಕ್ಕೆ ಪೂರಕವಾಗಿಯೇ ಇರುವುದರಿಂದ ಇದನ್ನು ಒದಗಿಸುವ ಅವಕಾಶ ರಾಜ್ಯಸರಕಾರಗಳ ವಿವೇಚನೆಗೆ ಬಿಟ್ಟಿದೆ ಎಂದು ತೀರ್ಪು ನೀಡಿದೆ.ಈಗ ಒದಗಿರುವ ಅವಕಾಶ ವನ್ನು ಬಳಸಿಕೊಂಡು ಸಾಮಾಜಿಕ ನ್ಯಾಯದ ಹರಿಕಾರ ಎಂದು ಕರೆಸಿಕೊಳ್ಳುವ ಸಿದ್ಧರಾಮಯ್ಯ ರಾಜ್ಯದಲ್ಲಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಈಗಾಗಲೇ ಹಲವು ರಾಜ್ಯಗಳು ಸುಪ್ರಿಂಕೋರ್ಟ್ ತೀರ್ಪಿನನ್ವಯ ಒಳ ಮೀಸಲಾತಿ ಕಲ್ಪಿಸಲು ಘೋಷಣೆ ಮಾಡಿವೆ.ಕರ್ನಾಟಕದಲ್ಲಿ ಕೂಡ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಳ ಮೀಸಲು ಜಾರಿಗೆ ಕೂಡಲೇ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮೇಲೆ ಒತ್ತಡ ತರಲು ಸೆ.೧೨ ರಂದು ಗುರುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಏಕಕಾಲದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ತಮಟೆ ಚಳವಳಿ ನಡೆಸಲಾಗುವುದೆಂದು ಬಿ.ಎನ್.ಗಂಗಾಧರಪ್ಪ ತಿಳಿಸಿದರು.

ಇದರ ಜತೆಗೆ ಕದಸಂಸ ಸ್ಥಾಪಿತ ಪ್ರೊ.ಬಿ.ಕೃಷ್ಣಪ್ಪ ಅವರಿಗೆ ಕರ್ನಾಟಕ ರತ್ನ  ಪ್ರಶಸ್ತಿ ಘೋಷಿಸಬೇಕು, ರಾಜ್ಯದಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಬೇಕು, ಬಗರ್ ಹುಕ್ಕುಂ ಸಾಗುವಳಿಯನ್ನು ಸಕ್ರಮ ಗೊಳಿಸಬೇಕು. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯ ಹಾಗೂ ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಡಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಬೇಕೆಂದು ತಮಟೆ ಚಳವಳಿ ನಡೆಯಲಿದೆ ಎಂದರು.    

ಈ ಸಂದರ್ಭದಲ್ಲಿ ಕದಸಂಸ ಜಿಲ್ಲಾ ಸಂಚಾಲಕ ಗಂಗಪ್ಪ, ಜಿಲ್ಲಾ ಸಂಘಟನಾ ಸಂಚಾಲಕರಾದ ಎಚ್.ಎನ್. ವೆಂಕಟೇಶ್, ಶ್ರೀನಿವಾಸ್, ಕೃಷ್ಣಮೂರ್ತಿ, ಮಹಿಳಾ ಸಂಘಟಕದ ಜಿಲ್ಲಾ ಸಂಚಾಲಕಿ ಮಂಜು ತುಳಸಿ, ತಾಲೂಕು ಸಂಚಾಲಕಿ ಗಾಯಿತ್ರಿ, ಕದಸಂಸ ಚಿಕ್ಕಬಳ್ಳಾಪುರ ತಾಲೂಕು ಸಂಚಾಲಕ ಮುನಿರಾಜು, ಗುಡಿಬಂಡೆ ನಾಗರಾಜ್, ಗೌರಿಬಿದನೂರು ಶಿವಶಂಕರ್, ಬಾಗೇಪಲ್ಲಿ ಆದಿ ಸೇರಿದಂತೆ ಮತ್ತಿತರರು ಇದ್ದರು.