ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಿರುಕುಳ ಆರೋಪ ಮಾಡಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಶನಿವಾರ ರಾಜೀನಾಮೆ ಹಿಂಪಡೆದಿದ್ದಾರೆ.
ಕೋವಿಡ್ ನಿಯಂತ್ರಣ ವಿಚಾರದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹಾಗೂ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ನಡುವಿನ ಜಟಾಪಟಿ ರಾಜ್ಯಮಟ್ಟದಲ್ಲಿ ಬಹಳ ಚರ್ಚೆಯಾಗುತ್ತಿತ್ತು. ಮನಸ್ಸಿಗೆ ಬೇಸರವಾಗಿ ಆಯುಕ್ತೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಶಿಲ್ಪಾನಾಗ್ ತಿಳಿಸಿದ್ದರು.
ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮೇಲೆ ದೌರ್ಜನ್ಯ, ಕಿರುಕುಳ ಆರೋಪ ಮಾಡಿ ರಾಜೀನಾಮೆ ನೀಡಿದ್ದ ಶಿಲ್ಪಾನಾಗ್, ಇದೀಗ ರಾಜೀನಾಮೆಯನ್ನು ವಾಪಸ್ ಪಡೆದಿದ್ದಾರೆ. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆ ಯಶಸ್ವಿಯಾಗಿದೆ. ಸೋಮವಾರದಿಂದ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಶುಕ್ರವಾರ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸಹ ಮೈಸೂರಿಗೆ ಭೇಟಿ ನೀಡಿ ರೋಹಿಣಿ ಸಿಂಧೂರಿ ಹಾಗೂ ಶಿಲ್ಪಾನಾಗ್ ನಡುವಿನ ಜಟಾಪಟಿಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು.