Wednesday, 11th December 2024

ಶಿವಮೊಗ್ಗ-ರೇಣಿಗುಂಟ-ಚೆನ್ನೈ ರೈಲನ್ನು ಪುನಃ ಆರಂಭಿಸಬೇಕು: ಸಂಸದ ಬಿ.ವೈ.ರಾಘವೇಂದ್ರ ಮನವಿ

ಶಿವಮೊಗ್ಗ: ಮಲೆನಾಡಿನ ಜನರು ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ತೆರಳಲು ಇದ್ದ ರೈಲು ಸೇವೆ ನಿಂತು ಹೋಗಿದ್ದು, ತೊಂದರೆ ಉಂಟಾಗಿದೆ.

ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭೇಟಿಯಾಗಿ ಲೋಕಸಭಾ ಕ್ಷೇತ್ರದ ಹಲವು ರೈಲು ಯೋಜನೆಗಳ ಕುರಿತು ಅವರು ಮನವಿಗಳನ್ನು ಸಲ್ಲಿಸಿದ್ದಾರೆ. ಆಗ ತಿರುಪತಿ ರೈಲಿನ ಬಗ್ಗೆ ಸಹ ಗಮನ ಸೆಳೆದಿದ್ದಾರೆ.

ಭಾರತೀಯ ರೈಲ್ವೆ ಶಿವಮೊಗ್ಗ-ರೇಣಿಗುಂಟ (ತಿರುಪತಿ ಸಮೀಪ)-ಚೆನ್ನೈ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ವಿಶೇಷ ರೈಲು ಓಡಿಸುತ್ತಿತ್ತು. ಕೋವಿಡ್ ಸಂದರ್ಭದಲ್ಲಿ ರದ್ದುಗೊಂಡಿದ್ದ ರೈಲನ್ನು ಮತ್ತೆ ಆರಂಭಿಸಲಾಗಿತ್ತು.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳಿಂದ ತಿರುಪತಿಗೆ ತೆರಳುವ ಭಕ್ತರು ಈ ರೈಲನ್ನು ಅವಲಂಬಿಸಿದ್ದರು. ರೈಲು ವೇಳಾ ಪಟ್ಟಿಯೂ ಭಕ್ತರಿಗೆ ಅನುಕೂಲಕರವಾಗಿತ್ತು. ಆದರೆ ಅಕ್ಟೋಬರ್ 1ರಿಂದ ರೈಲು ಸೇವೆ ಸ್ಥಗಿತಗೊಳಿಸಲಾಗಿದೆ.

ಶಿವಮೊಗ್ಗ-ರೇಣಿಗುಂಟ-ಚೆನ್ನೈ ನಡುವೆ ವಾರಕ್ಕೆ ಎರಡು ಬಾರಿ ಸಂಚಾರ ನಡೆಸುವ ರೈಲು ಸ್ಥಗಿತಗೊಂಡಿರುವ ಕಾರಣ ಜನರಿಗೆ ತೊಂದರೆಯಾಗಿದೆ. ಅದರಲ್ಲೂ ತಿರುಪತಿಗೆ ಪ್ರಯಾಣಿಸುವ ಸಾವಿರಾರು ಭಕ್ತರಿಗೆ ತೊಂದರೆಯಾಗಿದೆ. ಆದ್ದರಿಂದ ರೈಲನ್ನು ಪುನಃ ಆರಂಭಿಸಬೇಕು ಎಂದು ಸಂಸದ ಬಿ. ವೈ. ರಾಘವೇಂದ್ರ ಮನವಿ ಮಾಡಿದ್ದಾರೆ.

ಸಂಸದ ಬಿ.ವೈ.ರಾಘವೇಂದ್ರ ಪ್ರಯತ್ನದ ಫಲವಾಗಿಯೇ 2019-20ರಲ್ಲಿ ರೈಲ್ವೆ ಇಲಾಖೆ ಮಲೆನಾಡು ಮತ್ತು ತಿರುಪತಿಗೆ ಸಂಪರ್ಕ ಕಲ್ಪಿಸುವ ಶಿವಮೊಗ್ಗ-ರೇಣಿಗುಂಟ-ಚೆನ್ನೈ ನಡುವಿನ ರೈಲನ್ನು ಆರಂಭಿಸಿತ್ತು. ಆದರೆ ಕೋವಿಡ್ ಸಂದರ್ಭದಲ್ಲಿ ರೈಲು ಸೇವೆ ಸ್ಥಗಿತಗೊಳಿಸಲಾಯಿತು.