ತುಮಕೂರು: ನಗರದ ರೈಲ್ವೆ ನಿಲ್ದಾಣದಲ್ಲಿ “ಒಂದು ನಿಲ್ದಾಣ ಒಂದು ಉತ್ಪನ್ನ” ಮಳಿಗೆಯನ್ನು ಶಾಸಕ ಜ್ಯೋತಿ ಗಣೇಶ್ ಉದ್ಘಾಟಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ ವರ್ಚುಯಲ್ ಮೂಲಕ ಜನೌಷಧಿ ಕೇಂದ್ರ, ಗತಿಶಕ್ತಿ ಕಾರ್ಗೋ ಟರ್ಮಿನಲ್, ಗೂಡ್ಸ್ ಶೆಡ್, ಒಂದು ನಿಲ್ದಾಣ ಒಂದು ಉತ್ಪನ್ನ ಮಳಿಗೆಗಳು ಮತ್ತು ಇತರೆ ಮೂಲ ಸೌಕರ್ಯ ಯೋಜನೆಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ 2 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರುವ ಕಾರ್ಯಕ್ರಮದ ಪ್ರಯುಕ್ತ ನಗರದ ರೈಲ್ವೇ ನಿಲ್ದಾಣದಲ್ಲಿ ಆಯೋಜಿಸಿಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾ ಡಿದ ಶಾಸಕ ಜ್ಯೋತಿಗಣೇಶ್, ಭಾರತೀಯ ರೈಲ್ವೆಯನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯಲು “ಒಂದು ನಿಲ್ದಾಣ ಒಂದು ಉತ್ಪನ್ನ” ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ‘ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆಯನ್ನು 2022ರ ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಸ್ಥಳೀಯ ಕುಶಲಕರ್ಮಿ ಗಳು, ಕುಂಬಾರರು, ನೇಕಾರರು, ಕೈಮಗ್ಗ ನೇಕಾರರು, ಕುಶಲಕರ್ಮಿಗಳು, ಬುಡಕಟ್ಟು ಜನಾಂಗದವರ ಜೀವನೋಪಾಯ ಮತ್ತು ಕೌಶಲ್ಯಾಭಿವೃದ್ಧಿಗೆ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ “ಒಂದು ನಿಲ್ದಾಣ ಒಂದು ಉತ್ಪನ್ನ ಯೋಜನೆ”ಯನ್ನು ಜಾರಿಗೆ ತರಲಾಗಿದೆ. ಕುಶಲಕರ್ಮಿಗಳು ತಯಾರಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡಲು ಈ ಮಳಿಗೆಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಯೋಜನೆಯಡಿ ಎಲ್ಲಾ ಪ್ರಮುಖ ರೈಲ್ವೇ ನಿಲ್ದಾಣಗಳಲ್ಲಿ ಈ ಮಳಿಗೆಗಳನ್ನು ತೆರೆಯಲಾಗಿದ್ದು, ದಕ್ಷಿಣ ಬೆಂಗಳೂರು ನಗರ ವಿಭಾಗದ ಒಟ್ಟು 80 ರೈಲು ನಿಲ್ದಾಣಗಳಲ್ಲಿ ಮಾರಾಟ ಮಳಿಗೆಗಳನ್ನು ತೆರೆಯಲು ಗುರುತಿಸಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ, ರೈಲ್ವೇ ವಿಭಾಗೀಯ ಮ್ಯಾನೇಜರ್ ನೀತಿನ್ ಗೋಯಲ್, ನಿಲ್ದಾಣ ಮ್ಯಾನೇಜರ್ ನಾಗರಾಜು, ಬೆಂಗಳೂರು ವಿಭಾಗ ಸಂಯೋಜಕ ಹೆಚ್.ಶ್ರೀನಿವಾಸ್ ಸೇರಿದಂತೆ ರೈಲ್ವೇ ಅಧಿಕಾರಿಗಳು, ಸಾರ್ವಜನಿಕರು, ಉಪಸ್ಥಿತರಿದ್ದರು.