Friday, 13th December 2024

ಸಿದ್ದಗಂಗಾ ಮಠದಲ್ಲಿ ಗುರುಭವನ ಲೋಕಾರ್ಪಣೆ 

ತುಮಕೂರು:  ಸಿದ್ಧಗಂಗಾ ಮಠದ ಅಭಿವೃದ್ಧಿಗಾಗಿ ಮಾಜಿ ಸಚಿವ ಸೋಮಣ್ಣನವರು ಮಾಡಿರುವ ಸೇವೆಗಳು ಮಠದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಲಿವೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್  ಹೇಳಿದರು.
ಸಿದ್ಧಗಂಗಾ ಮಠದಲ್ಲಿ ಶೈಲಜಾ ಮತ್ತು ವಿ.ಸೋಮಣ್ಣ ದಂಪತಿ ನಿರ್ಮಿಸಿರುವ ‘ಗುರುಭವನ’ ನೂತನ ಕಟ್ಟಡದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ  ಮಾತನಾಡಿದರು.
ಶಿವಕುಮಾರ ಮಹಾಸ್ವಾಮೀಜಿ ಅವರು ದೇಶಕ್ಕೆ ಮಹತ್ವದ ಆದರ್ಶವನ್ನು ನೀಡಿದ್ದಾರೆ. ಶ್ರೀಗಳ ಸಾನಿಧ್ಯದಲ್ಲಿ ಅಕ್ಷರ ಕಲಿತವರು ವಿಶ್ವದೆಲ್ಲೆಡೆ, ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ದೇಶದ ಉನ್ನತ ಹುದ್ದೆಗಳಾದ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ.
ಲಕ್ಷಾಂತರ ಮಕ್ಕಳಿಗೆ  ಅನ್ನ, ಅಕ್ಷರ, ಆಶ್ರಯ ನೀಡಿದ ಶ್ರೀಗಳ ಶೈಕ್ಷಣಿಕ ಕಾರ್ಯಗಳು ವಿಸ್ಮಯವಾಗಿ ಉಳಿದಿವೆ. ಇಂತಹ ಪವಿತ್ರ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿರುವ ಸೋಮಣ್ಣ ದಂಪತಿಗಳಿಗೆ ಗುರುಗಳ ಆಶಿರ್ವಾದ ಸದಾ ಇರಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಸಿದ್ದಲಿಂಗ ಸ್ವಾಮೀಜಿ,  ಮಾಜಿಸಚಿವ ವಿ.ಸೋಮಣ್ಣ, ಶೈಲಜಾ ಸೋಮಣ್ಣ, ಸಂಸದ ಜಿ.ಎಸ್.ಬಸವರಾಜ್, ಸಚಿವರಾದ ಕೆ.ಎನ್.ರಾಜಣ್ಣ, ಶಾಸಕರಾದ ಸುರೇಶ್‌ಗೌಡ, ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶ್ರೀನಿವಾಸ್, ಎಸ್ಪಿ ಅಶೋಕ್  ಉಪಸ್ಥಿತರಿದ್ದರು.