ಮೈಸೂರು: ಈ ಬಾರಿ ಕರೋನಾ ಸೋಂಕಿನ ಭೀತಿಯಿಂದ ಸರಳ ದಸರೆಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಶನಿವಾರ ತಿಳಿಸಿದರು.
ದಸರೆಯ ರೂಪುರೇಷೆಗಳನ್ನು ಸಿದ್ದಪಡಿಸುವಂತೆ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ರೂಪರೇಷೆ ಸಿದ್ದವಾದ ನಂತರ ಮುಖ್ಯಮಂತ್ರಿ ಗಮನಕ್ಕೆ ತಂದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕಿನ ಬಾವಲಿ ಚೆಕ್ ಪೋಸ್ಟ್ ನ್ನು ಸುರಿಯುತ್ತಿದ್ದ ಮಳೆಯ ನಡುವೆ ಸಚಿವರು ಪರಿಶೀಲನೆ ನಡೆಸಿದರು.
ಕೇರಳದಿಂದ ಬರುವವರು 72 ಗಂಟೆಗಳಿಗೆ ಮೀರದ ಕೋವಿಡ್ ಆರ್ ಟಿ ಪಿ ಸಿ ಆರ್ ಪರೀಕ್ಷೆ ನೆಗೆಟೀವ್ ವರದಿ ಕಡ್ಡಾಯಗಿ ಹೊಂದಿರಬೇಕು. ಈ ವರದಿ ಇಲ್ಲದವ ರನ್ನು ನಿರ್ದಾಕ್ಷಿಣ್ಯವಾಗಿ ವಾಪಸ್ ಕಳುಹಿಸಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.
ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ, ಪೊಲೀಸ್ ಹಾಗೂ ಅರಣ್ಯ ಇಲಾಖೆ ತಂಡಗಳು ವಾಹನಗಳನ್ನು ತಡೆದು ಪರಿಶೀಲನೆ ನಡೆಸುತ್ತಿವೆ. ವಾರಾಂತ್ಯ ಲಾಕ್ ಡೌನ್ ಇರುವುದರಿಂದ ಸರಕು ಸಾಗಣೆ ವಾಹನಗಳಿಗೆ ಆರ್’ಟಿಪಿಸಿಆರ್ ನೆಗೆಟೀವ್ ವರದಿ ಇದ್ದರೆ ಪ್ರವೇಶ ನೀಡಲಾಗುತ್ತಿದ್ದು, ಪ್ರಯಾಣಿಕರ ವಾಹನಗಳನ್ನು ವಾಪಸ್ ಕಳುಹಿಸಲಾಗುತ್ತಿದೆ ಎಂದು ಸಿಬ್ಬಂದಿ ಮಾಹಿತಿ ನೀಡಿದರು.