Wednesday, 18th September 2024

ಮದ್ಯದ ಅಮಲಿನಲ್ಲಿ ಹಾವನ್ನು ಸುತ್ತಿಕೊಂಡ ಯುವಕ

ತುಮಕೂರು: ನಗರದ ಶಿರಾಗೇಟ್‌ನಲ್ಲಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ನಾಗರಹಾವನ್ನು ಹಿಡಿದು ಹುಚ್ಚಾಟ ಮೆರೆದಿದ್ದಾನೆ.
ಹಾವನ್ನು ಹಿಡಿದು ಹುಚ್ಚಾಟ ಮೆರದ ಸಲೀಂ ಸದ್ಯ ಆಸ್ಪತ್ರೆಯಲ್ಲಿದ್ದಾನೆ.

ಹಾವನ್ನು ಕೈಗೆ ಸುತ್ತಿಕೊಂಡು ಅರ್ಧ ಕಿಲೋ ಮೀಟರ್ ದೂರದವರೆಗೂ ನಡೆದುಕೊಂಡೇ ಹೋಗಿದ್ದಾನೆ. ಕೈಗೆ ಹಾವು ಕಚ್ಚಿದರೂ ಬಿಡದೆ ಮೊಂಡಾಟ ತೋರಿದ್ದಾನೆ. ಈ ದೃಶ್ಯ ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.

ವೆಲ್ಡಿಂಗ್ ಕೆಲಸ ಮಾಡಿಕೊಂಡಿರುವ ಸಲೀಂ, ಶಿರಾಗೇಟ್ ಬಳಿ ಹೋಗುತ್ತಿದ್ದ. ಈ ವೇಳೆ ನಾಗರಹಾವು ರಸ್ತೆ ದಾಟುತ್ತಿತ್ತು . ಅದರ ಹಿಂದೆ ಹೋಗಿದ್ದಾನೆ. ಹಾವು ಚರಂಡಿಯತ್ತ ಹೋದರೂ ಅದನ್ನು ಸಲೀಂ ಹಿಂಬಾಲಿಸಿಕೊಂಡೇ ಹೋಗಿ ಹಿಡಿದುಕೊಂಡು ಕೈಗೆ ಸುತ್ತಿ ಕೊಂಡು ತಿರುಗಾಡುತ್ತಿದ್ದ. ಈತನ ಕೈಗೆ ಕಚ್ಚಿದರೂ ಹಾವನ್ನ ಬಿಟ್ಟಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಉರಗ ರಕ್ಷಕ ದಿಲೀಪ್, ಸಲೀಂನ ಕೈಯಿಂದ ಹಾವನ್ನು ಬಿಡಿಸಿ, ಈತನನ್ನು ಆಸ್ಪತ್ರೆಗೆ ಕಳುಹಿಸಿ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.