Friday, 13th December 2024

ಸೋಮಣ್ಣ ಸೋತರೆ ಶಿಕಾರಿಪುರಕ್ಕೆ ಹೋಗ್ತಾನೆ: ಪರಮೇಶ್ವರ್ ವ್ಯಂಗ್ಯ 

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಆಡಳಿತ ನೀಡಿ ಇಡೀ ದೇಶದಲ್ಲಿ ಹೆಸರುವಾಸಿಯಾಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಮಣ್ಣ ಹೋಗಿಹೋಗಿ ಸಿದ್ದರಾಮಯ್ಯ ಅವರ ವಿರುದ್ಧ ನಿಲ್ಲುವುದೇ. ಮೈಸೂರಿ ನಲ್ಲಿ ಸೋತು, ತಿರುಗಿ ಇಲ್ಲಿಗೆ ಬಂದಿದ್ದಾನೆ. ಇಲ್ಲಿ ಸೋತು ಮುಂದೆ ಶಿಕಾರಿಪುರದಲ್ಲಿ ಬಿ.ವೈ.ವಿಜಯೇಂದ್ರ  ವಿರುದ್ಧ ನಿಲ್ಲುತ್ತಾನೆ. ಅಲ್ಲಿಗೆ ಕಳಿಸಿಕೊಡೋಣ ಎಂದು ಗೃಹ ಸಚಿವ ಪರಮೇಶ್ವರ್ ವ್ಯಂಗ್ಯವಾಡಿದರು.
ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿ, ಹೊರ ಜಿಲ್ಲೆಯವರು ತುಮಕೂರಿನಲ್ಲಿ ಈವರೆಗು ಯಶಸ್ಸು ಕಂಡಿಲ್ಲ. ಅದು ಸಾಧ್ಯವೂ ಇಲ್ಲ. ನಮ್ಮ ಅಭ್ಯರ್ಥಿ ಮುದ್ದಹನುಮೇಗೌಡ ಅವರ ಗೆಲುವಿಗೆ ಶ್ರಮಿಸಬೇಕು. ಮನೆಮನೆಗೆ ಹೋಗಿ ಪ್ರಣಾಳಿಕೆಯ ಅಂಶಗಳನ್ನು ತಿಳಿಸಬೇಕು ಎಂದು ಹೇಳಿದರು.
ಹಿಂದುಳಿದ ವರ್ಗದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವುದು ಮತ್ತು ಅವರ ಜನಪರ ಆಡಳಿತ ವೈಖರಿಯನ್ನು ಬಹುತೇಕರಿಗೆ ಸಹಿಸಲಾಗುತ್ತಿಲ್ಲ. ಹೀಗಾಗಿ, ಸಮಾದಾನವಿಲ್ಲದೇ ಅವರ ವಿರುದ್ಧ ಅನವಶ್ಯಕ ಟೀಕೆಗಳನ್ನು ಮಾಡುತ್ತಿದ್ದಾರೆ ಎಂದು  ಹೇಳಿದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಉಳಿದುಕೊಳ್ಳಬೇಕೇ ಅಥವಾ ಬೇಡವೇ ಎಂಬ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಮುಂದಿನ ನಾಲ್ಕು ವರ್ಷಗಳವರೆಗೆ, ನಿರ್ಭಿತವಾಗಿ ಅವರೇ ಆಡಳಿತ ನಡೆಸಲಿದ್ದಾರೆ‌. ದೆಹಲಿಗೆ ಸಂದೇಶ ಕೊಡಬೇಕೆಂದರೆ ರಾಜ್ಯದಿಂದ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಕಳುಹಿಸಬೇಕು. ತುಮಕೂರಿನಿಂದ ಮುದ್ದಹನುಮೇಗೌಡ ಅವರನ್ನು ಗೆಲ್ಲಿಸಿಕೊಳ್ಳ ಬೇಕಿದೆ ಎಂದು ತಿಳಿಸಿದರು‌.
ಈ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ, ಶಾಸಕ ಎಸ್.ಆರ್.ಶ್ರೀನಿವಾಸ್, ಮಾಜಿ ಶಾಸಕರಾದ ರಫೀಕ್ ಅಹ್ಮದ್, ಕೆಪಿಸಿಸಿ ಉಪಾಧ್ಯಕ್ಷ ಮುರಳಿಧರ್ ಹಾಲಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕೆಪಿಸಿಸಿ ಸಾಮಾಜಿಕ ಜಾಲತಾಣ ಘಟಕದ ಮುಖ್ಯಸ್ಥ ನಿಕೇತ್ ರಾಜ್ ಮೌರ್ಯ, ರಾಜ್ಯ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ, ಪ್ರಜಾಪ್ರಗತಿ ಸಂಪಾದಕರಾದ ಎಸ್‌.ನಾಗಣ್ಣ, ಕುರುಬ ಸಂಘದ ಜಿಲ್ಲಾಧ್ಯಕ್ಷ ಸುರೇಶ್, ಕಾಂಗ್ರೆಸ್ ಮುಖಂಡರಾದ ಇಕ್ಬಾಲ್ ಅಹ್ಮದ್, ಸೋಮಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.