Wednesday, 11th December 2024

ತೊಗರಿ ಬೆಳೆಗೆ ನೆಟೆ ರೋಗ,ಟೈಕೋಡರ್ಮಾ ಪುಡಿ ಸಿಂಪಡಿಸಲು ಸಲಹೆ

ಕಲಬುರಗಿ: ಪ್ರಸಕ್ತ 2022-23 ಮುಂಗಾರು ಹಂಗಾಮಿನಲ್ಲಿ ಸುರಿದ ಅವ್ಯಾಹತ ಮಳೆಯಿಂದ ಜಿಲ್ಲೆಯಲ್ಲಿ ಕಾಯಿ ಬಲಿಯುವ ಹಂತದಲ್ಲಿದ್ದ ತೊಗರಿ ಬೆಳೆಗೆ ನೆಟೆ ರೋಗ ಕಂಡುಬಂದ ಹಿನ್ನೆಲೆಯಲ್ಲಿ ಪ್ರತಿ ಲೀ. ನೀರಿಗೆ 5 ಗ್ರಾಂ ಟ್ರೈಕೋ ಡರ್ಮಾ ಪುಡಿ ಬೆರಿಸಿ ಸಿಂಪರಣೆಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯಬೇಕೆಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಅವರು ರೈತರಿಗೆ ಸಲಹೆ ನೀಡಿದ್ದಾರೆ.

ಕೃಷಿ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು ಹಾಗೂ ಕೃಷಿ ಸಂಶೋಧನಾ ಕೇಂದ್ರದ ಕೃಷಿ ವಿಜ್ಞಾನಿಗಳ ತಂಡದೊಂದಿಗೆ ಜಿಲ್ಲೆಯ ಕೆರೆ ಭೋಸಗಾ, ಭೀಮಳ್ಳಿ, ಲಾಡ ಚಿಂಚೋಳಿ, ಆಳಂದ, ಸಾತನೂರ ಗ್ರಾಮಗಳಲ್ಲಿನ ತೊಗರೆ ಬೆಳೆ‌ಗೆ ಪ್ರದೇಶಕ್ಕೆ ವೈಜ್ಞಾ ನಿಕ ಸಮೀಕ್ಷೆ ಮಾಡಿರುವ ಅವರು, ಈ ರೋಗವನ್ನು ಸಿಡಿ ರೋಗ ಅಥವಾ ಸೊರಗು ರೋಗ ಎಂತಲು ಕರೆಯಲಾಗುತ್ತಿದೆ ಎಂದಿದ್ದಾರೆ.

ಟೈಕೋಡರ್ಮಾ‌ ಅಲ್ಲದೆ ಪ್ರತಿ ಲೀ. ನೀರಿಗೆ 5 ಗ್ರಾಂ. ಸಾಫ್ ಬೆರಿಸಿ ಸಿಂಪರಣೆಯನ್ನು ಕಾಂಡದ ಬುಡಕ್ಕೆ ಹಸಿಯಾಗುವವರೆಗೆ ಸುರಿಯುವುದು. ಸಾಧ್ಯವಾದರೆ ನೀರಾವರಿ ಸೌಲಭ್ಯವಿರುವ ಕಡೆ ಬೆಳೆಗಳಿಗೆ ನೀರು ಹರಿಸುವುದು, ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶ ಮಾಡಬೇಕು. ಜೋಳ ಅಥವಾ ಮುಸುಕಿನ ಜೋಳ ಮತ್ತು ತೊಗರಿ ಮಿಶ್ರ/ ಅಂತರ ಬೆಳೆಯಲ್ಲಿ ಸೊರಗು ರೋಗದ ಬಾಧೆ ಕಡಿಮೆ ಇರುತ್ತದೆ ಎಂದಿದ್ದಾರೆ.

ರೋಗಕ್ಕೆ ತುತ್ತಾದ ತಾಕುಗಳಲ್ಲಿ ಗಿಡದ ಎಲೆಗಳು ಹಳದಿಯಾಗಿ, ಬಾಡಿ ಜೋತುಬಿದ್ದು, ಒಣಗಿ ಕೆಳಗೆ ಉದರದೆ ಗಿಡಕ್ಕೆ ಅಂಟಿ ಕೊಂಡಿರುತ್ತವೆ. ಗಿಡದ ಬೇರುಗಳು ಪೂರ್ತಿಯಾಗಿ ಬಾಡಿರುತ್ತವೆ. ಕಾಂಡವನ್ನು ಸೀಳಿ ನೋಡಿದಾಗ ನೀರು ಸಾಗಾಣಿಕೆಯ ಅಂಗಾಂಶವು ಕಪ್ಪಾಗಿರುವುದು ಕಂಡು ಬರುತ್ತದೆ. ತಂಪಾದ ವಾತಾವರಣದಲ್ಲಿ ಒಣಗಿದ ಗಿಡದ ಕಾಂಡದ ಮೇಲೆ ಗುಲಾಬಿ ಬಣ್ಣದ ಶೀಲಿಂದ್ರದ ಬೆಳವಣಿಗೆ ಕಾಣಿಸುವುದು. ಅರ್ಧ ಸಿಡಿಯಾದ ಗಿಡದ ಕಾಂಡದ ಮೇಲೆ ಕಂದು ಅಥವಾ ಕಡು ನೇರಳೆ ಬಣ್ಣದ ಪಟ್ಟಿಗಳು ಭೂಮಿಯ ಮಟ್ಟನಿಂದ ಮೇಲಕ್ಕೆ ಹಬ್ಬಿರುವುದು ಕಂಡುಬರುತ್ತಿವೆ ಎಂದಿದ್ದಾರೆ.