ನಗರದೊಳಗಿನ ಹಸಿರು ಸಮೂಹ ಸಾರಿಗೆಗಾಗಿ ಹೊಚ್ಚ ಹೊಸ ಟಾಟಾ ಅಲ್ಟ್ರಾ ಇವಿ 7ಎಂ ಅನಾವರಣಗೊಳಿಸಿದ ಟಾಟಾ ಮೋಟಾರ್ಸ್
ಬೆಂಗಳೂರು: ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್ ಇಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿರುವ ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ಸಮಗ್ರ ಸಮೂಹ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶಿಸುವ 3 ದಿನಗಳ ದ್ವೈವಾರ್ಷಿಕ ಕಾರ್ಯಕ್ರಮವಾದ ಪ್ರವಾಸ್ 4.0 ಕಾರ್ಯಕ್ರಮದಲ್ಲಿ ತನ್ನ ಅತ್ಯಾಧುನಿಕ ಸಮೂಹ ಸಾರಿಗೆ ಉತ್ಪನ್ನಗಳ ಆಕರ್ಷಕ ಶ್ರೇಣಿಯನ್ನು ಪ್ರದರ್ಶಿಸಿತು.
ಕಂಪನಿಯು ನಗರದ ಸಮೂಹ ಸಾರಿಗೆ ಅಗತ್ಯಗಳಿಗೆ ಸೂಕ್ತವಾಗಿ ಹೊಂದಿಕೊಳ್ಳುವಂತಹ ಎಂಜಿನಿಯರಿಂಗ್ ಸಾಮರ್ಥ್ಯ ಹೊಂದಿರುವ ಮತ್ತು ಅದಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾಗಿರುವ, ಝೀರೋ ಎಮಿಷನ್ ವೈಶಿಷ್ಟ್ಯ ಹೊಂದಿರುವ ಅಂತರ್ ನಗರ ವಾಹನ ಉತ್ಪನ್ನವಾದ ಹೊಚ್ಚ ಹೊಸ ಎಲೆಕ್ಟ್ರಿಕ್ ಬಸ್ ಟಾಟಾ ಅಲ್ಟ್ರಾ ಇವಿ 7ಎಂ ಅನ್ನು ಬಿಡುಗಡೆ ಮಾಡಿದ್ದು, ಈ ಕಾರ್ಯಕ್ರಮದಲ್ಲಿ ಆ ವಾಹನವನ್ನು ಪ್ರದರ್ಶಿಸಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ಕಂಪನಿಯು ಟಾಟಾ ಮ್ಯಾಗ್ನಾ ಇವಿ, ಟಾಟಾ ಮ್ಯಾಜಿಕ್ ಬೈ-ಫ್ಯುಯಲ್, ಟಾಟಾ ಅಲ್ಟ್ರಾ ಪ್ರೈಮ್ ಸಿಎನ್‌ಜಿ, ಟಾಟಾ ವಿಂಗರ್ 9 ಎಸ್, ಟಾಟಾ ಸಿಟಿರೈಡ್ ಪ್ರೈಮ್ ಮತ್ತು ಟಾಟಾ ಎಲ್‌ಪಿಓ 1822 ಸೇರಿದಂತೆ ವಿವಿಧ ಶ್ರೇಣಿಯ ಪ್ರಯಾಣಿಕ ಸಾರಿಗೆ ಉತ್ಪನ್ನಗಳನ್ನು ಪ್ರದರ್ಶನ ಮಾಡಿತು. ಈ ಎಲ್ಲಾ ವಾಹನಗಳು ವಿವಿಧ ರೀತಿಯ ವೈಯಕ್ತೀಕರಿಸಿದ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ತಯಾರಾಗಿವೆ.
ಹೊಚ್ಚ ಹೊಸ ಟಾಟಾ ಅಲ್ಟ್ರಾ ಇವಿ 7ಎಂ ಎಲೆಕ್ಟ್ರಿಕ್ ಬಸ್ ನಲ್ಲಿ 21 ಮಂದಿ ಪ್ರಯಾಣಿಕರು ಆರಾಮವಾಗಿ ಕೂರಬಹುದಾದ ಆಸನ ವ್ಯವಸ್ಥೆ ಇದೆ. ಜೊತೆಗೆ ಅದರ ಅತ್ಯುತ್ತಮ ವಿನ್ಯಾಸ ಮತ್ತು ಸೂಕ್ತ ರೀತಿಯ ಗಾತ್ರದಿಂದಾಗಿ ಈ ಬಸ್ ಕಿರಿದಾದ ರಸ್ತೆಗಳು ಮತ್ತು ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಕೂಡ ಸುಲಭವಾಗಿ ಮುನ್ನುಗ್ಗಬಲ್ಲ ಸಾಮರ್ಥ್ಯ ಹೊಂದಿದೆ. ಈ ಬಸ್ 213kW ಎಲೆಕ್ಟ್ರಿಕ್ ಮೋಟಾರ್ ಮತ್ತು ಐಪಿ67-ರೇಟಿಂಗ್ ಪಡೆದಿರುವ 200kWh Li-ion ಬ್ಯಾಟರಿಯಿಂದ ಕಾರ್ಯ ನಿರ್ವಹಿಸುತ್ತದೆ.
ಒಂದು ಸಲ ಪೂರ್ತಿ ಚಾರ್ಜ್ ಮಾಡಿದರೆ ಈ ಬಸ್ 160 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ಬಸ್ ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಕೂಡ ಹೊಂದಿದ್ದು, ಕೇವಲ 2.5 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಮಾಡಬಹು ದಾಗಿದೆ. ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್ ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಸೇರಿದಂತೆ ಅತ್ಯಾಧುನಿಕ ಸುರಕ್ಷತಾ ಫೀಚರ್ ಗಳನ್ನು ಹೊಂದಿರುವ ಈ ಬಸ್ ಸಂಪೂರ್ಣ ಎಲೆಕ್ಟ್ರಿಕ್ ಡ್ರೈವ್‌ಟ್ರೇನ್ ಹೊಂದಿದೆ. ಬಸ್ ಅಟೋಮ್ಯಾಟಿಕ್ ಪ್ಯಾಸೆಂಜರ್ ಕೌಂಟರ್ ಅನ್ನು ಹೊಂದಿದೆ ಮತ್ತು ಈ ಬಸ್ ನ ಇಂಟೆಲಿಜೆಂಟ್ ಟ್ರಾನ್ಸ್ ಪೋರ್ಟ್ ಸಿಸ್ಟಮ್ (ಐಟಿಎಸ್) ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ ಮತ್ತು ಆ ಮೂಲಕ ಅತ್ಯುತ್ತಮ ಭದ್ರತಾ ಮಾನದಂಡಗಳನ್ನು ಸ್ಥಾಪಿಸಲಾಗಿದೆ. ಎಲ್ಲದರ ಜೊತೆಗೆ ಅಲ್ಟ್ರಾ ಇವಿ7ಎಂ ರೀಜನರೇಟಿವ್ ಬ್ರೇಕಿಂಗ್ ತಂತ್ರಜ್ಞಾನವನ್ನು ಹೊಂದಿದ್ದು, ಆ ತಂತ್ರಜ್ಞಾನವು ಬಸ್ ನ ದಕ್ಷತೆ ಮತ್ತು ರೇಂಜ್ ಅನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹೊಸ ಬಸ್ ಬಿಡುಗಡೆ ಕುರಿತು ಪ್ರತಿಕ್ರಿಯಿಸಿದ ಟಾಟಾ ಮೋಟಾರ್ಸ್‌ನ ಉಪಾಧ್ಯಕ್ಷ ಮತ್ತು ಕಮರ್ಷಿಯಲ್ ಪ್ಯಾಸೆಂಜರ್ ವೆಹಿಕಲ್ ಬಿಸಿನೆಸ್ ಮುಖ್ಯಸ್ಥ ಆನಂದ್ ಎಸ್ ಅವರು, “ಸುರಕ್ಷಿತ, ಸ್ಮಾರ್ಟ್ ಮತ್ತು ಸುಸ್ಥಿರ ಸಾರಿಗೆ ಎಂಬ ಥೀಮ್ ಹೊಂದಿರುವ ಪ್ರವಾಸ್ 4.0 ಕಾರ್ಯಕ್ರಮವು ನಮ್ಮ ದೂರದೃಷ್ಟಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಈ ಕಾರ್ಯಕ್ರಮವು ಪಾಲುದಾರರ ಜೊತೆ ಮಾತುಕತೆಯಲ್ಲಿ ತೊಡಗಿಕೊಳ್ಳಲು ಮತ್ತು ನಮ್ಮ ಅತ್ಯಾಧುನಿಕ ಉತ್ಪನ್ನಗಳನ್ನು ಪ್ರದರ್ಶಿಸಲು ನಮಗೆ ವಿಶಿಷ್ಟ ಅವಕಾಶ ಒದಗಿಸಿ ಕೊಟ್ಟಿದೆ. ನಾವು ಹೆಮ್ಮೆಯಿಂದ ನಮ್ಮ ವಿವಿಧ ರೀತಿಯ ಉತ್ಪನ್ನಗಳನ್ನು ಪ್ರದರ್ಶಿಸುತ್ತಿದ್ದೇವೆ. ಎಲೆಕ್ಟ್ರಿಕ್ ಬಸ್ ವಿಭಾಗದಲ್ಲಿ ನಮ್ಮ ಹೊಸ ಉತ್ಪನ್ನವಾದ ಅಲ್ಟ್ರಾ ಇವಿ 7ಎಂ ಒಳಗೊಂಡಂತೆ ವಿವಿಧ ವಿಭಾಗಗಳಲ್ಲಿ ವಿವಿಧ ರೀತಿಯ ಉತ್ಪನ್ನಗಳನ್ನು ಪ್ರದರ್ಶಿಸಲು ನಾವು ಸಂತೋಷ ಪಡುತ್ತೇವೆ. ನಮ್ಮ ಹೊಸ ಉತ್ಪನ್ನವು ಮಹಾನಗರಗಳು ಮತ್ತು ಸಣ್ಣ ನಗರಗಳು ಎರಡಕ್ಕೂ ಸೂಕ್ತವಾಗಿ ಹೊಂದಿಕೊಳ್ಳುತ್ತವೆ ಮತ್ತು ನಮ್ಮ ಗ್ರಾಹಕರ ವಿಶಿಷ್ಟ ಅಗತ್ಯಗಳನ್ನು ಪೂರೈಸುತ್ತವೆ. ಪ್ರವಾಸ್ 4.0 ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ನಾವು ನಮ್ಮ ಗ್ರಾಹಕರಿಗೆ ಹೆಚ್ಚಿನ ಆದಾಯ ಗಳಿಕೆಯ ಸಾಮರ್ಥ್ಯ ಹೊಂದಿರುವ ಮತ್ತು ಲಾಭ ಒದಗಿಸುವ ಹೊಸ ರೀತಿಯ, ಸಮರ್ಥ ಮತ್ತು ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಬದ್ಧತೆಯನ್ನು ಸಾರಿದ್ದೇವೆ” ಎಂದು ಹೇಳಿದರು.
ಬಹು ಪವರ್‌ಟ್ರೇನ್‌ಗಳು ಮತ್ತು ಎಮಿಷನ್ ತಂತ್ರಜ್ಞಾನಗಳನ್ನು ಹೊಂದಿರುವ ಶುದ್ಧ ಮತ್ತು ಸುಸ್ಥಿರ ಉತ್ಪನ್ನಗಳ ಮೂಲಕ ಸಾರಿಗೆ ಕ್ಷೇತ್ರದ ಭದ್ರ ಭವಿಷ್ಯಕ್ಕೆ ಅಡಿಪಾಯ ಹಾಕುವಲ್ಲಿ ಟಾಟಾ ಮೋಟಾರ್ಸ್ ಮುಂಚೂಣಿಯಲ್ಲಿ ನಿಂತಿದೆ. ಕಂಪನಿಯು ಭಾರತದಾದ್ಯಂತ 2,900ಕ್ಕೂ ಹೆಚ್ಚು ಇ- ಬಸ್‌ಗಳನ್ನು ಹೊಂದಿದ್ದು, ಆ ಮೂಲಕ 16 ಕೋಟಿ ಕಿಲೋಮೀಟರ್‌ಗಳ ಒಟ್ಟು ದೂರವನ್ನು ಕ್ರಮಿಸಲಾಗುತ್ತದೆ. ಈ ನಿಟ್ಟಿನಲ್ಲಿ ಕಂಪನಿಯು ಎಲೆಕ್ಟ್ರಿಕ್ ಬಸ್ ವಿಭಾಗದ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ.
ಎಲ್ಲದರ ಜೊತೆಗೆ ಕಂಪನಿಯು ದೇಶದಲ್ಲಿ ಹೈಡ್ರೋಜನ್ ಇಂಧನ ಕೋಶ ಸಾರಿಗೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಕೊಂಡಿದೆ. ವ್ಯಾಪಕ ಶ್ರೇಣಿಯ ಪರ್ಯಾಯ ಇಂಧನ ಚಾಲಿತ ವಾಹನಗಳನ್ನು ಒದಗಿಸುವ ಮೂಲಕ ಟಾಟಾ ಮೋಟಾರ್ಸ್ ಕಾರ್ಯಾಚರಣೆಯ ವೆಚ್ಚಗಳನ್ನು ಕಡಿಮೆ ಮಾಡುತ್ತದೆ ಮತ್ತು ನಿರ್ವಾಹಕರಿಗೆ ಹೆಚ್ಚಿನ ಲಾಭವನ್ನು ಒದಗಿಸುತ್ತದೆ. ಜೊತೆಗೆ ಟಾಟಾ ಮೋಟಾರ್ಸ್ ಸ್ಮಾರ್ಟ್ ತಂತ್ರಜ್ಞಾನ ಗಳನ್ನು ಹೊಂದಿರುವ ಕನೆಕ್ಟೆಡ್ ವೇದಿಕೆ ಆಗಿರುವ ಫ್ಲೀಟ್ ಎಡ್ಜ್ ಮೂಲಕ ಎಲ್ಲಾ ವಾಹನಗಳ ನಿರ್ವಹಣೆ ಮಾಡುತ್ತಿದ್ದು, ಆ ಮೂಲಕ ವಾಹನದ ಕ್ಷಮತೆ ಮತ್ತು ಸುರಕ್ಷತೆಯನ್ನು ಹೆಚ್ಚಿಸಿ ತನ್ನ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸುತ್ತದೆ.