ಬೆಂಗಳೂರು: ತೆರಿಗೆ ಬಾಕಿ ಉಳಿಸಿಕೊಂಡಿರುವ ಕಾರಣಕ್ಕೆ ರಾಕ್‌ಲೈನ್ ವೆಂಕಟೇಶ್ ಒಡೆತನದ ರಾಕ್‌ಲೈನ್ ಮಾಲ್‌ಗೆ ಬೀಗ ಬಿದ್ದಿದೆ. ಬುಧವಾರ ಬಿಬಿಎಂಪಿ ಅಧಿಕಾರಿಗಳಿಂದ ದಾಳಿ ನಡೆಸಿ ತೆರಿಗೆ ಪಾವತಿ ಮಾಡದ ಹಿನ್ನೆಲೆ ಮಾಲ್ ಸೀಜ್ ಮಾಡಲಾಗಿದೆ.
ಬಿಬಿಎಂಪಿ ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ಸಮ್ಮಖದಲ್ಲಿ ಅಧಿಕಾರಿಗಳು ರೇಡ್ ನಡೆಸಿದ್ದಾರೆ.
2011 ರಿಂದ 2022-23 ರವರೆಗೆ ಮಾಲ್ ಆಡಳಿತ ಮಂಡಳಿ ತೆರಿಗೆ ಬಾಕಿ ಉಳಿಸಿಕೊಂಡಿದೆ. 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸ ಬೇಕಿದೆ. ತೆರಿಗೆ ಪಾವತಿ ಮಾಡುವಂತೆ ಡಿಮಾಂಡ್ ನೋಟೀಸ್ ನೀಡಿದ್ದರೂ ತೆರಿಗೆ ಪಾವತಿಸದ ಕಾರಣ ಕ್ರಮ ಕೈಗೊಳ್ಳಲಾಗಿದೆ.
3 ವರ್ಷಗಳ ಹಿಂದೆ ರಾಕ್‌ಲೈನ್ ವೆಂಕಟೇಶ್ ವಿರುದ್ಧ ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್ ರಮೇಶ್ ತೆರಿಗೆ ವಂಚನೆ ಆರೋಪ ಮಾಡಿದ್ದರು. ಇದಕ್ಕೆ ಒಂದಷ್ಟು ದಾಖಲೆಗಳನ್ನು ನೀಡಿದ್ದರು. ಬಿಬಿಎಂಪಿಗೆ ರಾಕ್‌ಲೈನ್ ವೆಂಕಟೇಶ್ ಅಂದಾಜು 8.50 ಕೋಟಿ ರೂ.ಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ ಎನ್ನುವ ಗುರುತರ ಆರೋಪ ಮಾಡಿದ್ದರು.
ನಾವು ನೀಡಿದ ದೂರಿನ ಆಧಾರದ ಮೇಲೆ ಬಿಬಿಎಂಪಿ ಅಧಿಕಾರಿಗಳು ಅಳತೆ ಮಾಡಿದ ಸಂದರ್ಭದಲ್ಲಿ ರಾಕ್‌ಲೈನ್ ಮಾಲ್ ಆಸ್ತಿ ಬರೋಬ್ಬರಿ 1,22,743 ಚದರ ಅಡಿ ಇದೆಯೆಂದು ಗೊತ್ತಾಗಿತ್ತು. ಅಂದರೆ ಸುಮಾರು 73000 ಚದರ ಅಡಿಯ ಕಟ್ಟಡವನ್ನು ದಾಖಲೆಗೆ ತರದೇ ತೆರಿಗೆ ವಂಚನೆ ಮಾಡಿದ್ದಾರೆ ಎಂದು ರಮೇಶ್ ದೂರಿದ್ದರು.
ಪಾಲಿಕೆ ನೀಡಿದ್ದ ನೋಟಿಸ್ ಪ್ರಶ್ನಿಸಿ ರಾಕ್‌ಲೈನ್ ವೆಂಕಟೇಶ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರು. ಆದರೆ ನ್ಯಾಯಾಲಯ ಅರ್ಜಿ ವಜಾಗೊಳಿಸಿತ್ತು.