Wednesday, 18th September 2024

ಶಿಕ್ಷಕರಿಗೆ ಸಹ ಪಠ್ಯ ಚಟುವಟಿಕೆಗಳು ಅನುಕೂಲ

ತುಮಕೂರು: ಶಿಕ್ಷಕರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಹ ಪಠ್ಯ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಹೇಳಿದರು.
ಇಲ್ಲಿನ ವಿಜಯನಗರದ ಸರ್ವೋದಯ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಬೆಂಗಳೂರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆಗಳನ್ನು ಉದ್ಘಾಟಿಸಿ  ಮಾತನಾಡಿದರು.
ಪ್ರತಿನಿತ್ಯ ಮಕ್ಕಳಿಗೆ ಪಾಠ ಪ್ರವಚನ ಬೋಧಿಸುತ್ತಿರುವ ಶಿಕ್ಷಕರಿಗೆ ಸಹ ಪಠ್ಯ ಚಟುವಟಿಕೆಗಳು ನವಚೈತನ್ಯ ನೀಡುತ್ತೇವೆ. ಮಕ್ಕಳನ್ನು ಪ್ರತಿಭಾವಂತ ರನ್ನಾಗಿ ಸಿದ್ದಗೊಳಿಸಲು ಶಿಕ್ಷಕರಿಗೆ ಇಂತಹ ಚಟುವಟಿಕೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಕರಲ್ಲಿನ ಪ್ರತಿಭೆಗಳನ್ನು ಕೂಡ ಹೊರ ಹೊಮ್ಮಿಸಲು ಶಾಲಾ ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಇದರಿಂದ ಶಿಕ್ಷಕರು ಮುಕ್ತವಾಗಿ ಸ್ಪರ್ಧೆಗಳಲ್ಲಿ ಭಾಗವಹಿಸಲು ಅನುಕೂಲ ವಾಗುತ್ತದೆ ಎಂದರು.
ಶಿಕ್ಷಕರನ್ನು ಉತ್ತೇಜಿಸಲು ಇಂತಹ ಸ್ಪರ್ಧೆಗಳು ಬಹಳ ಸಹಕಾರಿ. ಇದರಿಂದ ಶಾಲಾ ಶಿಕ್ಷಣದ ಕೆಲಸದಲ್ಲಿ ಮತ್ತಷ್ಟು ಉತ್ಸಾಹಿಗಳಾಗಿ ಶಿಕ್ಷಕರು ತೊಡಗಿ ಕೊಳ್ಳಲು ಅನುವಾಗುತ್ತದೆ ಎಂದು ಅವರು ತಿಳಿಸಿದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಅಭಿವೃದ್ಧಿ) ಮಂಜುನಾಥ್ ಮಾತನಾಡಿ, ಶಿಕ್ಷಕರಲ್ಲಿರುವ ಏಕತಾನತೆಯನ್ನು ಹೋಗಲಾಡಿಸಲು ಈ ರೀತಿಯ ವಿನೂತನ ಕಾರ್ಯಕ್ರಮಗಳು ಹೆಚ್ಚು ಅವಶ್ಯಕತೆ ಇದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಭಾವಗೀತೆ, ಜನಪದಗೀತೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧ ಸೇರಿದಂತೆ ಒಟ್ಟು 7 ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಲೋಕೇಶ್ ರೆಡ್ಡಿ, ಉಪಾಧ್ಯಕ್ಷ ಉಮೇಶ್, ಕಾರ್ಯದರ್ಶಿ ಹನುಮೇಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಿಮ್ಮೇಗೌಡ, ಕಾರ್ಯದರ್ಶಿ ಚಿಕ್ಕಣ್ಣ, ಶಿಕ್ಷಕ ಸೈಯದ್ ಮೆಹಬೂಬ್ ಪಾಷ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *