Saturday, 14th December 2024

ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸಮಾವೇಶ – ತಿಪಟೂರಿನಲ್ಲಿ

ಬೆಂಗಳೂರು : ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ (ನವದೆಹಲಿ) ಇದರ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶವನ್ನು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸೆಪ್ಟೆಂಬರ್ 2, 2024ರಂದು ನಡೆಸಲು ನಿರ್ಧರಿಸಲಾಗಿದೆ.
ಈ ಸಮಾವೇಶಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಘಟಕ, ತುಮಕೂರು ಜಿಲ್ಲಾ ಘಟಕ ಹಾಗೂ ತಿಪಟೂರು ತಾಲ್ಲೂಕು ಘಟಕಗಳು ಸಹಕಾರ ನೀಡುತ್ತಿವೆ.
ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ರಾಷ್ಟ್ರದ ಎಲ್ಲಾ ರಾಜ್ಯಗಳಲ್ಲೂ ತನ್ನ ಘಟಕಗಳನ್ನು ಹೊಂದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ 400ಕ್ಕೂ ಹೆಚ್ಚಿನ ಪತ್ರಕರ್ತರು ಹಾಗೂ ರೈತರು ವಿಚಾರ ಸಂಕಿರಣ ದಲ್ಲಿ ಭಾಗವಹಿಸಲಿದ್ದಾರೆ. ಕರೋನದಿಂದ ಒಕ್ಕೂಟ ಕೂಡ ತನ್ನ ಕಾರ್ಯ ಚಟುವಟಿಕೆಗಳನ್ನು ಸಮಪರ್ಕವಾಗಿ ನಡೆಸಲು ಸಾಧ್ಯವಾಗಲಿಲ್ಲ. ಈಗ ಮತ್ತೆ ನವ ಚೈತನ್ಯದೊಂದಿಗೆ ಕಾರ್ಯಾರಂಭಗೊಂಡಿದೆ.
ಒಕ್ಕೂಟ ತಿಪಟೂರಿನಲ್ಲಿ ಹಮ್ಮಿಕೊಂಡಿರುವ 78ನೇ ರಾಷ್ಟ್ರೀಯ ಮಂಡಳಿ ಸಮಾವೇಶಕ್ಕೆ ವಿವಿಧ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಮಾವೇಶ ಹಾಗೂ ಇದರ ಅಂಗವಾಗಿ ಏರ್ಪಡಿಸಿರುವ ವಿಚಾರ ಸಂಕಿರಣವನ್ನು ರಾಜ್ಯದ ಗೃಹ ಸಚಿವರಾದ ಡಾ|| ಜಿ. ಪರಮೇಶ್ವರ್ ಅವರು ಅಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ. ತಿಪಟೂರಿನ ಶಾಸಕರಾದ ಕೆ. ಷಡಕ್ಷರಿ ಅವರ ಘನ ಉಪಸ್ಥಿತಿಯಲ್ಲಿ ಅಂಚೆ ಚೀಟಿ ಪ್ರದರ್ಶನ ಹಾಗೂ ತೆಂಗು ಉತ್ಪನ್ನಗಳ ವಸ್ತುಪ್ರದರ್ಶನ ಉದ್ಘಾಟಿಸಲಿದ್ದಾರೆ.
ಸಮಾರಂಭ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಬಿ.ವಿ. ಮಲ್ಲಿಕಾರ್ಜುನಯ್ಯರವರು ವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರಅವರು ಕಲ್ಪಶ್ರೀ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಈ ಸಭೆಯಲ್ಲಿ ಚಿಕ್ಕನಾಯಕನಹಳ್ಳಿ ಶಾಸಕ ಸಿ.ಎನ್. ಸುರೇಶ್‌ ಬಾಬು, ತುರುವೇಕೆರೆ ಶಾಸಕ ಎಂ.ಟಿ. ಕೃಷ್ಣಪ್ಪ, ಜನಪ್ರಿಯ ವೈದ್ಯರು ಹಾಗೂ ಸಮಾಜ ಸೇವಕರಾದ ಡಾ।। ಜಿ.ಎಸ್. ಶ್ರೀಧರ್, ಒಕ್ಕೂಟದ ಉಪಾಧ್ಯಕ್ಷ ಹೇಮಂತ್ವಾರಿ, ಮಹಾಪ್ರಧಾನ ಕಾರ್ಯದರ್ಶಿ ಪರಮಾನಂದ ಪಾಂಡೆ, ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಮದನಗೌಡ, ಸಂಘಟನಾ ಕಾರ್ಯದರ್ಶಿ ಡಿ.ಎಂ. ಸತೀಶ್, ಕ.ಕಾ.ನಿ.ಪ. ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ. ಪುರುಷೋತ್ತಮ್, ತಾಲ್ಲೂಕು ಸಂಘದ ಅಧ್ಯಕ್ಷ ಪ್ರಶಾಂತ್ ಕರೀಕೆರೆ ಅವರು ಮುಖ್ಯ ಅತಿಥಿಗಳಾಗಿರುತ್ತಾರೆ.
ಮಧ್ಯಾಹ್ನ 12 ಗಂಟೆಗೆ ರಾಷ್ಟ್ರೀಯ ಮಂಡಳಿ ಸಮಾವೇಶ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುತ್ತದೆ. ಮಧ್ಯಾಹ್ನ 2.30ಕ್ಕೆ ಕೃತಕ ಬುದ್ಧಿಮತ್ತೆ ಮತ್ತು ಸಣ್ಣ, ಮಧ್ಯಮ ಪತ್ರಿಕೆಗಳ ಮೇಲೆ ಅದರ ಪರಿಣಾಮ ಕುರಿತು ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್‌ನ ಪ್ರಧಾನ ಸಂಪಾದಕರಾದ ಶ್ರೀ ರವಿ ಹೆಗಡೆಯವರು ಉಪನ್ಯಾಸ ನೀಡಲಿದ್ದಾರೆ. ಈ ಗೋಷ್ಠಿಯನ್ನು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಶ್ರೀಮತಿ ಆಯೆಶಾ ಖಾನಂಅವರು ವಹಿಸಲಿದ್ದಾರೆ.
ರೈತರ ಸಂಕಷ್ಟಗಳ ಬಗ್ಗೆ ಬೆಳಕು ಚೆಲ್ಲಬೇಕೆಂಬ ಉದ್ದೇಶದಿಂದ ಒಕ್ಕೂಟ ನಮ್ಮ ಸಂಕಷ್ಟಗಳ ಜತೆಗೆ ರೈತರ ಸಂಕಷ್ಟವನ್ನು ದೇಶದ ಪತ್ರ ಕರ್ತರಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ ತಿಪಟೂರು ಉಂಡೆ ಕೊಬ್ಬರಿ ಮಾರುಕಟ್ಟೆ ಸಮಸ್ಯೆ ಮತ್ತು ಪರಿಹಾರ ಮಾರ್ಗಗಳ ಬಗ್ಗೆ ವಿಚಾರ ಸಂಕಿರಣವನ್ನು ಏರ್ಪಡಿಸಿದ್ದೇವೆ. ಇದನ್ನು ತೋಟಗಾರಿಕೆ ಇಲಾಖೆಯ ನಿರ್ದೇಶಕರಾದ ಡಿ.ಎಸ್. ರಮೇಶ್ ಅವರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ರೈತ ಮುಖಂಡ ಕೆ.ಟಿ. ಗಂಗಾಧರ ಅವರು ವಹಿಸಲಿದ್ದಾರೆ. ಜತೆಗೆ ಅನೇಕ ರೈತ ಮುಖಂಡರು ಭಾಗವಹಿಸಿ ತಮ್ಮ ಸಲಹೆ ನೀಡಲಿದ್ದಾರೆ.
ಸಂಜೆ 5.30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ರಾಜ್ಯದ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಸಹಕಾರ ಸಚಿವರಾದ ಕೆ.ಎನ್. ರಾಜಣ್ಣ, ಶಾಸಕ ಕೆ. ಷಡಕ್ಷರಿ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ನಮ್ಮೊಡನೆ ತಿಪಟೂರಿನ ಕಲಾಕೃತಿ (ರಿ.) ಕೌಸ್ತುಭ ವೆಂಚರ್, ಅಕ್ಷಯ ಕಲ್ಪ ಪ್ರೈ.ಲಿ., ನರ್ಮತಾ ಆಯಿಲ್ ರೆಫನೈರೀಸ್, ಎಸ್.ಎನ್.ಎಸ್. ಕನ್ವೆಷನ್ ಹಾಲ್ ಮತ್ತು ರೆಜೆನ್ಸಿ ಅವರು ಸಹಕಾರ ನೀಡಿದ್ದಾರೆ. ಈ ಕಾರ್ಯಕ್ರಮದ ಪ್ರಧಾನ ಸಂಚಾಲಕರಾಗಿ ತಿಪಟೂರು ಕೃಷ್ಣ ಹಾಗೂ ಸಹ ಸಂಚಾಲಕರಾಗಿ ಅಲ್ಬರೂ ಶಿವರಾಜ್ ಅವರು ಕಾರ್ಯನಿರ್ವಹಿಸುತ್ತಿದ್ದಾರೆ.