Wednesday, 11th December 2024

ರಾಜ್ಯದಲ್ಲಿ 150 ಕ್ರೈಸ್ತ ಸಮುದಾಯ ಭವನ ನಿರ್ಮಾಣ: ಜೆ.ಕೆನಡಿ 

ತುಮಕೂರು: ಕ್ರೈಸ್ತ ಸಮುದಾಯದ ದುರ್ಬಲ ವರ್ಗದವರು ಮದುವೆ, ಮತ್ತಿತರ ಶುಭ ಸಮಾರಂಭಗಳನ್ನು ಆಯೋಜಿಸಲು ಅನುವಾಗುವಂತೆ ರಾಜ್ಯದಲ್ಲಿ 2011 ರಿಂದ ಈವರೆಗೂ ಸುಮಾರು 150 ಹೊಸ ಸಮುದಾಯ ಭವನಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಕರ್ನಾಟಕ ಕ್ರೈಸ್ತ ಅಭಿವೃದ್ದಿ ಸಮಿತಿ ಅಧ್ಯಕ್ಷ ಜೆ.ಕೆನಡಿ ಶಾಂತಕುಮಾರ್  ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಹೈದ್ರಾಬಾದ್-ಕರ್ನಾಟಕ ಪ್ರದೇಶದಲ್ಲೇ ಸುಮಾರು 85 ಸಮುದಾಯ ಭವನ ಸೇರಿದಂತೆ ರಾಜ್ಯದಲ್ಲಿ 150 ಭವನ ಗಳನ್ನು ನಿರ್ಮಾಣ ಮಾಡಲಾಗಿದೆ. ಕ್ರೈಸ್ತ ಸಮುದಾಯದ ಬಡವರ್ಗದವರಿಗೆ ಕಡಿಮೆ ಬಾಡಿಗೆ ದರವನ್ನು ನಿಗಧಿಪಡಿಸಿ ಸಮುದಾಯ ಭವನವನ್ನು ಬಳಕೆಗೆ ಅವಕಾಶ ಮಾಡಿಕೊಡಲಾಗುತ್ತಿದೆ ಎಂದರಲ್ಲದೆ, ಸಮುದಾಯ ಭವನ ನಿರ್ಮಾಣಕ್ಕಾಗಿ ನಗರ ಪ್ರದೇಶದಲ್ಲಿ 1 ಕೋಟಿ ರು. ಹಾಗೂ ಗ್ರಾಮೀಣ ಪ್ರದೇಶದಲ್ಲಿ 50ಲಕ್ಷ ರೂ.ಗಳ ಅನುದಾನವನ್ನು ಒದಗಿಸಲಾಗಿದೆ ಎಂದು ತಿಳಿಸಿದರು.
 ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯದ 25 ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಫಲಾನುಭವಿಗಳ ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಮಾಹಿತಿ ಕೊರತೆಯಿಂದ ಕೆಲ ಫಲಾನುಭವಿ ಗಳಿಗೆ ಯೋಜನೆಗಳ ಸೌಲಭ್ಯ ದೊರೆತಿರುವುದಿಲ್ಲ ಎಂಬುದು ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಯೋಜನೆಗಳ ಬಗ್ಗೆ ಅರಿವು ಮೂಡಿಸಲು ಜಾಗೃತಿ ಶಿಬಿರಗಳನ್ನು ಸಮಿತಿಯಿಂದ ಏರ್ಪಡಿಸಲಾಗುತ್ತಿದೆ ಎಂದು ತಿಳಿಸಿದರು.
 ಸರಕಾರದಿಂದ ಈಗಾಗಲೇ ವಿದೇಶಿ ವ್ಯಾಸಂಗಕ್ಕಾಗಿ ಗುರುತಿಸಲಾಗಿರುವ 500 ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡಲು ಬಯಸುವ ಕ್ರೈಸ್ತ ಸಮುದಾಯದ ವಿದ್ಯಾರ್ಥಿಗಳಿಗೆ ತಲಾ 20ಲಕ್ಷ ರೂ.ಗಳ ವಿದ್ಯಾರ್ಥಿವೇತನ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
 ಕ್ರೈಸ್ತ ಅಭಿವೃದ್ಧಿ ಸಮಿತಿಯ ಅನುದಾನವನ್ನು ಬಳಸಿಕೊಂಡು ಚರ್ಚ್, ವೃದ್ಧಾಶ್ರಮ, ಅನಾಥಾಶ್ರಮ, ಸಮುದಾಯ ಭವನಗಳು, ಅಭಿವೃದ್ಧಿ ಹೊಂದಿವೆ ಎಂದು ತಿಳಿಸಿದರಲ್ಲದೆ, 2013 ರಿಂದ 2022ರವರೆಗೆ ಜಿಲ್ಲೆಯ ತುಮಕೂರು ತಾಲ್ಲೂಕು ಕ್ಯಾತ್ಸಂದ್ರದ ನ್ಯೂ ಲೈಫ್ ಫಿಲೋಶಿಪ್ ಚರ್ಚ್, ಗಾಂಧಿ ನಗರದ ಅವರ್ ಲೇಡಿ ಆಫ್ ರೋಸರಿ ಕಾನ್ವೆಂಟ್, ಹೊರಪೇಟೆಯ ಸಂತ ಲೂರ್ದು ಮಾತೆ ದೇವಾಲಯ, ತಿಪಟೂರು ತಾಲ್ಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ಚರ್ಚ್ಗಳ ನವೀಕರಣಕ್ಕಾಗಿ 80ಲಕ್ಷ ರೂ.; ತಿಪಟೂರು ತಾಲ್ಲೂಕು ಸಣ್ಣೇನಹಳ್ಳಿ ಸಂತ ಜೋಸೆಫ್ ದೇವಾಲಯ ವ್ಯಾಪ್ತಿಯ ಸ್ಮಶಾನ ಗೋಡೆ ನಿರ್ಮಾಣಕ್ಕಾಗಿ 9ಲಕ್ಷ ರು.; ತುಮಕೂರು ತಾಲ್ಲೂಕು ಗೆದ್ದಲಹಳ್ಳಿಯಲ್ಲಿ ಹೆಚ್‌ಐವಿ/ಏಡ್ಸ್ ಬಾಧಿತರ ಆರೈಕೆ ಮಾಡುತ್ತಿರುವ ಸಂತ ಗ್ರಿಗೋರಿಯಸ್ ದಯಾಭವನ ಸಂಸ್ಥೆಯ ನಿರ್ವಹಣೆಗಾಗಿ 4.84ಲಕ್ಷ ರು.; ಕುಣಿಗಲ್ ತಾಲ್ಲೂಕು ವಾಣಿಗೆರೆಯಲ್ಲಿ ಅನಾಥ ಮಕ್ಕಳ ಆರೈಕೆ ಮಾಡುತ್ತಿರುವ ಸಂತ ಗ್ರಿಗೋರಿ ಯಸ್ ದಯಾಭವನ ಸಂಸ್ಥೆಗೆ 10.97ಲಕ್ಷ ರು ಹಾಗೂ ನಗರದ ಸಿ.ಎಸ್.ಐ. ವೆಸ್ಲಿ ಚರ್ಚ್ ದೇವಾಲಯ ವ್ಯಾಪ್ತಿಯ ಸ್ಮಶಾನ ಆವರಣ ಗೋಡೆ ಅಭಿವೃದ್ಧಿ ಕಾಮಗಾರಿಗಾಗಿ 20ಲಕ್ಷ ರೂ. ಸೇರಿದಂತೆ 1.24ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ ಎಂದು ತಿಳಿಸಿದರು.
 ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಾವೇರ್ ಕರಂಗಿ ಮಾತನಾಡಿ, ಶೀಘ್ರದಲ್ಲೇ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ನೂತನ ಕಟ್ಟಡವನ್ನು ಮುಖ್ಯಮಂತ್ರಿಗಳು ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿಯನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗುವುದು. ಈ ಸಂದರ್ಭದಲ್ಲಿ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಮಹಮ್ಮದ್ ಅಲೀಮುಲ್ಲಾ ಹಾಜರಿದ್ದರು.