Wednesday, 11th December 2024

ಬಿಜೆಪಿಗೆ 40 ಸೀಟುಗಳನ್ನು ಮಾತ್ರ ನೀಡಿ: ರಾಹುಲ್ ಗಾಂಧಿ

150 ಸೀಟು ಪಡೆದು ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ
ತುಮಕೂರು/ತುರುವೇಕೆರೆ: ಬಿಜೆಪಿಗೆ 40 ಎನ್ನುವ ನಂಬರ್ ಮೇಲೆ ಬಹಳ ಪ್ರೀತಿ. ಹಾಗಾಗಿ ಈ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸೀಟುಗಳನ್ನು ಮಾತ್ರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ಕರೆ ನೀಡಿದರು.
ತುರುವೇಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ  ಸಾರ್ವಜನಿಕ ಸಮಾವೇಶ ದಲ್ಲಿ ಮಾತನಾಡಿದ ಅವರು, ಪ್ರತಿ ಕಾಮಗಾರಿ, ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀ ಷನ್ ಪಡೆದಿರುವ ಬಿಜೆಪಿಯನ್ನು ಈ ಬಾರಿಯ ಚುನಾವಣೆಯಲ್ಲಿ ಕೇವಲ 40 ಸೀಟುಗಳಿಗೆ ಮಾತ್ರ ಸೀಮಿತಗೊಳಿಸಬೇಕು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ 150 ಸ್ಥಾನ ನೀಡಿದರೆ ಬಿಜೆಪಿಯವರು ನಮ್ಮ ಶಾಸಕರನ್ನು ಕದಿಯಲು ಆಗುವುದಿಲ್ಲ. ಆದ್ದರಿಂದ ಬಹುಮತದೊಂದಿಗೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು. ಬಿಜೆಪಿ ಕಾಂಗ್ರೆಸ್ ಶಾಸಕರಿಗೆ ಹಣ ಕೊಟ್ಟು ಖರೀದಿ ಮಾಡಿ ಸರಕಾರವನ್ನು ರಚನೆ ಮಾಡಿದೆ. ಕಳೆದ 3 ವರ್ಷಗಳಿಂದ ಬಿಜೆಪಿ ಕರ್ನಾಟಕದಲ್ಲಿ ಕೇವಲ ಭ್ರಷ್ಟಾಚಾರಕ್ಕೆ ಮಾತ್ರ ಹೆಸರಾಗಿದೆ. ಈ ಬಿಜೆಪಿ ಸರ್ಕಾರವನ್ನು 40 ಪರ್ಸೆಂಟ್ ಸರ್ಕಾರ ಎಂದು ಕರ್ನಾಟಕದ ಜನ ಕರೆಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದ ಗುತ್ತಿಗೆದಾರರಿಂದ 40 ಪರ್ಸೆಂಟ್ ಕಮೀಷನನ್ನು ಬಿಜೆಪಿ ಸರ್ಕಾರ ದೋಚಿದೆ. ಈ ವಿಚಾರ ಪ್ರಧಾನ ಮಂತ್ರಿಯವರಿಗೆ ಗೊತ್ತಿಲ್ಲ ಎಂದೇನಿಲ್ಲ. ಕರ್ನಾಟಕದ ಗುತ್ತಿಗೆದಾರರ ಸಂಘದವರು ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮೀಷನ್ ಕೇಳುತ್ತಿದೆ ಎಂದು ಪ್ರಧಾನಿಗೆ ಪತ್ರ ಬರೆದಿದ್ದಾರೆ. ಮಠಾಧೀಶರೊಬ್ಬರು ಸಹ ನನ್ನ ಹತ್ತಿರವೂ 30 ಪರ್ಸೆಂಟ್ ಕಮೀಷನನ್ನು ಈ ಸರ್ಕಾರ ಪಡೆದು ಕೊಂಡಿದೆ ಎಂದು ಆರೋಪಿಸಿದ್ದಾರೆ ಎಂದು ದೂರಿದರು.
ಕರ್ನಾಟಕದಲ್ಲಿ ಎರಡೂವರೆ ಸಾವಿರ ಕೋಟಿ ಕೊಟ್ಟು ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಾರೆ. ಈ ವಿಚಾರದ ಕರ್ನಾಟಕ ದಲ್ಲಿ ಇರುವಂತಹ ಪ್ರತಿ ಮನೆಗೂ ಗೊತ್ತಿದೆ ಅಂದ ಮೇಲೆ ದೇಶದ ಪ್ರಧಾನಿಗೂ ಇದು ಗೊತ್ತಿರಲೇಬೇಕು. ಇಷ್ಟೆಲ್ಲಾ ಅನ್ಯಾಯ ವಾಗುತ್ತಿರುವುದು ಗೊತ್ತಿದ್ದರೂ ಸಹ ಇದನ್ನು ತಡೆಯಲು ಏನು ಪ್ರಯತ್ನ ಮಾಡಿದ್ದೀರಾ ಎಂದು ಪ್ರಧಾನಿ ನರೇಂದ್ರ ಮೋದಿ ಯವರನ್ನು  ಪ್ರಶ್ನಿಸಿದರು.
ನೀವು ಕರ್ನಾಟಕದ ಜನರನ್ನು ಮತ ಕೇಳುವುದಕ್ಕಿಂತ ಮುನ್ನ ಭ್ರಷ್ಟಾಚಾರವನ್ನು ನಿಲ್ಲಿಸಲು ಏನು ಕ್ರಮ ಕೈಗೊಂಡಿದ್ದೀರಾ ಎಂಬುದರ ಬಗ್ಗೆ ಮೊದಲು ಜನರಿಗೆ ತಿಳಿಸಬೇಕು ಎಂದು  ಒತ್ತಾಯಿಸಿದರು.
ವಿಧಾನಸಭಾ ಚುನಾವಣೆ ಯಾವೊಬ್ಬ ವ್ಯಕ್ತಿಗೋಸ್ಕರ, ಪ್ರಧಾನ ಮಂತ್ರಿಗೋಸ್ಕರ ನಡೆಯುತ್ತಿರುವ ಚುನಾವಣೆಯಲ್ಲ ಎಂಬು ದನ್ನು ಪ್ರಧಾನಿಗಳು ಅರ್ಥ ಮಾಡಿಕೊಳ್ಳಬೇಕಿದೆ. ಇದು ಕರ್ನಾಟಕದ ಯುವಕರು, ತಾಯಂದರಿಗೋಸ್ಕರ ನಡೆಯುತ್ತಿರುವ ಚುನಾವಣೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಸಿ. ವೇಣುಗೋಪಾಲ್, ಮಯೂರ ಜಯಕುಮಾರ್, ಅಭ್ಯರ್ಥಿ ಬೆಮೆಲ್ ಕಾಂತರಾಜು, ಶಶಿಹುಲಿಕುಂಟೆ, ರಾಯಸಂದ್ರ ರವಿಕುಮಾರ್  ಭಾಗವಹಿಸಿದ್ದರು.