ಮಾ.5ಕ್ಕೆ ಸ್ಮಾರ್ಟ್ ಸಿಟಿ ಕಾಮಗಾರಿ ಲೋಕಾರ್ಪಣೆ
ತುಮಕೂರು: ತುಮಕೂರು ನಗರ ವಿಧಾನಸಭಾ ಕ್ಷೇತ್ರಕ್ಕೆ ನಾನೇ ಅಭ್ಯರ್ಥಿಯಾಗಿದ್ದು ನನಗೆ ಟಿಕೆಟ್ ಸಿಗುತ್ತದೆ ಎಂದು ಹಾಲಿ ಶಾಸಕ ಜಿ.ಬಿ.ಜ್ಯೋತಿ ಗಣೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಟಿಯಲ್ಲಿ ಮಾತನಾಡಿ, ನನಗೆ ಈ ಬಾರಿ ಬಿಜೆಪಿಯಿಂದ ಟಿಕೆಟ್ ಸಿಗುವುದಿಲ್ಲ. ನಾನು ಎಂಪಿ ಚುನಾ ವಣೆಗೆ ನಿಲ್ಲುತ್ತೇನೆ, ಬಿಜೆಪಿಯಲ್ಲಿ ಟಿಕೆಟ್ ಸಿಗದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತೇನೆ ಎಂದು ಸುದ್ದಿ ಹಬ್ಬಿದ್ದು ನಾನು ಯಾವು ಪಕ್ಷಕ್ಕೂ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಚುನಾವಣೆಯಲ್ಲಿ ಸಾಕಷ್ಟು ಗೊಂದಲ, ವಿರೋಧಗಳಿದ್ದರೂ ನಾನು ಗೆದ್ದು ಬಂದಿದ್ದೆ. ಈ ಬಾರಿಯೂ ಸಹ ಗೆಲುವು ಸಾಧಿಸಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು. ನನಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆರ್ಶೀವಾದವಿದೆ ಎಂದರು.
ತುಮಕೂರು ಅಮಾನಿಕೆರೆ ಅಭಿವೃದ್ಧಿಗೆ ಸ್ಮಾರ್ಟ್ ಸಿಟಿ ಯೋಜನೆಯಡಿ ೬೦ ರಿಂದ ೭೦ ಲಕ್ಷ ರು. ಖರ್ಚು ಮಾಡಿದ್ದು , ಸುಮಾರು ೭ ಕಿ.ಮೀ. ಉದ್ದದ ವಾಕಿಂಗ್ ಪಾರ್ಕ್, ಐಲ್ಯಾಂಡ್, ಸೈಕಲ್ ಟ್ರ್ಯಾಕ್ , ಪಾದಚಾರಿ ರಸ್ತೆ ಸೇರಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ನಾನು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಈ ಬಾರಿ ನನ್ನನ್ನು ಆಯ್ಕೆ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
೫ ವರ್ಷದಲ್ಲಿ ನಗರದ ಚಿತ್ರಣ ಬದಲಾಗಿದೆ ಆದರೂ ಸಹ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಎಲ್ಲದಕ್ಕೂ ನನ್ನನ್ನು ಹೊಣೆ ಮಾಡಿ ಗೊಂದಲ ಸೃಷ್ಟಿಸುತ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ೭ ಪಿಹೆಚ್‌ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು ತಾಲೂಕಿನಲ್ಲಿ ಹೆಚ್ಚುವರಿಯಾಗಿ ೭ ನಮ್ಮ ಕ್ಲಿನಿಕ್‌ಗಳನ್ನು ಸ್ಥಾಪನೆ ಮಾಡುವುದಾಗಿ ತಿಳಿಸಿದರು. ಖಾಸಗಿ ಶಾಲೆಗಳಿಗಿಂತ ಉತ್ತಮ ರೀತಿಯಲ್ಲಿ ಸರಕಾರಿ ಶಾಲೆಗಳನ್ನು ನವೀಕರಣಗೊಳಿಸಲಾಗಿದೆ. ಮಹಾತ್ಮ ಗಾಂಧಿ ಕ್ರೀಡಾಂಗಣವನ್ನು ನವೀಕರಣಗೊಳಿಸಿದ್ದು ೨೩ ಕ್ರೀಡಾ ಚಟುವಟಿಕೆಗಳನ್ನು ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸುಮಾರು ೩೦೦ ರಿಂದ ೪೦೦ ಮಂದಿ ಕ್ರೀಡಾಪಟುಗಳು ಉಳೀದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ವಾಲಿಬಾಲ್, ಕ್ರಿಕೆಟ್, ಬ್ಯಾಟ್‌ಮಿಂಟನ್, ಕುಸ್ತಿ, ಜೆಮ್ನಾಸ್ಟಿಕ್ ಕೋರ್ಟ್ಗಳನ್ನು ಸ್ಥಾಪಿಸಿ ಆಧುನಿಕ ಕ್ರೀಡೋಪಕರಣಗಳನ್ನು ಅಳವಡಿಸಲಾಗಿದೆ. ಇಲ್ಲಿ ಎಲ್ಲ ರೀತಿಯ ಕ್ರೀಡಾಪಟುಗಳು ಭಾಗವಹಿಸಬಹುದಾಗಿದ್ದು ಸಂಘ ಸಂಸ್ಥೆಗಳು , ಕ್ರೀಡಾಪಟುಗಳು ಆತಂಕಪಡುವ ಅಗತ್ಯವಿಲ್ಲ ಎಂದರು.
ಮಾ.೫ ರಂದು ಜಿಲ್ಲೆಗೆ ಸಿಎಂ: ಸ್ಮಾಟ್೯ ಸಿಟಿ ಕಾಮಗಾರಿ ಲೋಕಾರ್ಪಣೆ
ಮಾ. ೫ ರಂದು ನಗರಕ್ಕೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಆಗಮಿಸಲಿದ್ದು ಕೇಂದ್ರ ಸರಕಾರದ ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಸುಮಾರು ೩೦೦ ಕೋಟಿ ರು. ಗಳಿಗೂ ಹೆಚ್ಚು ಅನುಷ್ಠಾನಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮಹಾತ್ಮಗಾಂಧಿ ಕ್ರೀಡಾಂಗಣ, ಇನ್‌ಕ್ಯುಬೇಷನ್ ಸೆಂಟರ್, ತಾಯಿ ಮಗುವಿನ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆ,, ಟ್ರಾಮ ಸೆಂಟರ್, ನರ್ಸಿಂಗ್ ಕಾಲೇಜು ಇತ್ಯಾದಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಆರೋಗ್ಯ, ಶಿಕ್ಷಣ, ಕುಡಿಯುವ ನೀರಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿದ್ದು ಪ್ರಗತಿಯ ಹಂತದಲ್ಲಿವೆ ಎಂದರು.