Friday, 13th December 2024

ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ನೀಡದಿದ್ದರೆ ಪ್ರತಿಭಟನೆ: ರಾಯಸಂದ್ರ

ತುಮಕೂರು: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರ ಹಿತವನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ಕೊಬ್ಬರಿಗೆ 20 ಸಾವಿರ ಬೆಂಬಲ ಬೆಲೆ ಘೋಷಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಾಯಸಂದ್ರ ರವಿಕುಮಾರ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಕೊಬ್ಬರಿ ಬೆಲೆ ನೆಲ ಕಚ್ಚಿದೆ. ಡಬಲ್ ಎಂಜಿನ್ ಸರಕಾರಗಳು ಮೌನ ವಹಿಸಿವೆ. ನಮ್ಮನ್ನು ಆಳುತ್ತಿರುವ ಸರಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಕೇಂದ್ರದ ಬೆಲೆ ಏರಿಕೆ ನೀತಿಯಿಂದಾಗಿ ರೈತರ ಖರ್ಚು ವೆಚ್ಚ ಜಾಸ್ತಿಯಾಗಿದ್ದರೂ ಸಹ ಬಗ್ಗೆ ಡಬಲ್ ಎಂಜಿನ್ ಸರಕಾರಗಳು ಗಮನ ಹರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗಾಯದ ಮೇಲೆ ಬರೆ ಎಳೆದಂತೆ 9 ತಿಂಗಳಿಗೆ ನೈಸರ್ಗಿಕವಾಗಿ ಒಣಗಿ ಕೊಬ್ಬರಿಯಾಗಬೇಕಿದ್ದ ತೆಂಗಿನಕಾಯಿ ಹವಾಮಾನ ವೈಪರೀತ್ಯದ ಕಾರಣ ದಿಂದಾಗಿ ಕೊಬ್ಬರಿಯಾಗಲು ಸದ್ಯ 13 ರಿಂದ 15 ತಿಂಗಳು ಸಮಯ ತೆಗೆದು ಕೊಳ್ಳುತ್ತಿದೆ. ಇದರಿಂದಾಗಿ ರೈತರ ಮೇಲೆ ಆರ್ಥಿಕ ಒತ್ತಡ ಉಂಟಾಗಿ ರೈತರು ಹಸಿ ಕೊಬ್ಬರಿಯನ್ನೇ ಮಾರುಕಟ್ಟೆಗೆ ತರುವಂತಾಗಿದೆ. ರೈತರು ಕೊಬ್ಬರಿಯನ್ನು ಭಾರಿ ನಷ್ಟಕ್ಕೆ ಮಾರಿಕೊಳ್ಳುವ ಪರಿಸ್ಥಿತಿ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ಕೊಬ್ಬರಿ ಬೆಲೆ 9,500 ಕ್ಕೆ ಕುಸಿದಿದೆ. ರೈತರು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪದೇ ಪದೇ ಹೋರಾಟಗಳ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದರೂ ಕೂಡ ಸರ್ಕಾರವು ಯಾವುದೇ ದಿಟ್ಟ ಮತ್ತು ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತಿಲ್ಲ ಕಾರ್ಪೊರೇಟ್ ಕಂಪೆನಿಗಳಿಗೆ ಲಕ್ಷಾಂತರ ಕೋಟಿ ಸಾಲ ಮನ್ನಾ ಮಾಡುವ ಸರ್ಕಾರ, ರೈತರ ಬಗ್ಗೆ ಕಿಂಚಿತ್ತು ಮಾನವೀಯತೆಯನ್ನು ತೋರದೆ, ಕೊಬ್ಬರಿಯ ಬೆಂಬಲ ಬೆಲೆಯನ್ನು ಕೇವಲ ರೂ 11,750 ನಿಗದಿ ಮಾಡಿದೆ. ಆದ್ದರಿಂದ ಈಗ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದರು.

ಪತ್ರಿಕಾಗೋಷ್ಟಿಯಲ್ಲಿ ಚಕ್ರವರ್ತಿ ಪ್ರಕಾಶ್, ಕುಚ್ಚಂಗಿ ರಮೇಶ್ ಮತ್ತಿತರರು ಉಪಸ್ಥಿತರಿದ್ದರು