Wednesday, 11th December 2024

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳಿಂದ ಬೆಂಬಲ ವ್ಯಕ್ತ

ಮಧುಗಿರಿ : ಇದೇ ಮೊದಲ ಬಾರಿಗೆ ತಾಲೂಕಿನ ಗಡಿ ಭಾಗದ ಕೊಡಿಗೇನಹಳ್ಳಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳಿಂದ ಭರ್ಜರಿ ಬೆಂಬಲ ವ್ಯಕ್ತವಾಗಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ತಗ್ಗಿಹಳ್ಳಿ ರಾಮಕೃಷ್ಣ ಆಶ್ರಮದ ಶ್ರೀ ರಮಾನಂದ ಚೈತನ್ಯ ಸ್ವಾಮಿ ಮಾತನಾಡಿ ಗಡಿ ಭಾಗದಲ್ಲಿ ಕನ್ನಡ ಮೆರವಣಿಗೆ ಹಮ್ಮಿಕೊಂಡಿರುವುದು ಸಂತಸದ ವಿಚಾರ. ತೆಲುಗು ಭಾಷಿಕರೇ ಹೆಚ್ಚಾಗಿರುವ ಇಂತಹ ಗಡಿ ನಾಡ ಪ್ರದೇಶದಲ್ಲಿ ಕನ್ನಡ ಕಾರ್ಯಕ್ರಮ ನಡೆಸುವುದು ಸಾಮಾನ್ಯದ ವಿಷಯವಲ್ಲ. ಗ್ರಾಮೀಣ ಪ್ರದೇಶದಲ್ಲಿ ಇರುವ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕೆಲಸವಾಗಬೇಕು. ಕನ್ನಡಿಗರಿಗೆ ಹೊರಗಿನವರು ಸಮಸ್ಯೆಯಲ್ಲ. ನಮ್ಮವರೇ ಕನ್ನಡ ಬಾಷೆಗೆ ಸಮಸ್ಯೆಯಾಗಿದ್ದಾರೆ.

ಮಾತೃ ಬಾಷೆ ಅಚ್ಚುಕಟ್ಟಾಗಿರಬೇಕು. ಕಿವಿಗೆ ಇಂಪೆನಿಸಬೇಕು. ಕನ್ನಡ ಸಹಜ, ಸರಳ, ಸುಂದರ ಬಾಷೆಯಾಗಿದ್ದು, ನಮ್ಮವರೇ ನಮ್ಮ ಮಾತೃ ಬಾಷೆಯನ್ನು ಸಹಜವಾಗಿ ಆಡುತ್ತಿಲ್ಲ. ಬ್ರಿಟೀಷ್ ಆಳ್ವಿಕೆಯ ಕೆಲವು ಪದಗಳೂ ಇಂದಿಗೂ ಅಸ್ತಿತ್ವ ದಲ್ಲಿರುವುದು ಬೇಸರದ ಸಂಗತಿ. ದಿನ ನಿತ್ಯದ ವ್ಯವಹಾರದಲ್ಲಿ ಪದೇ ಪದೇ ಆಂಗ್ಲಭಾಷೆ ಬಳಸುವುದು ತರವಲ್ಲ. ರಾಜಕಾರಣಿಗಳು, ಅಧಿಕಾರಿಗಳು ಸಹ ಇಂಗ್ಲೀಷ್ ದಾರಾಳವಾಗಿ ಬಳಸುತ್ತಿರು ವುದು ವಿಷಾದನೀಯ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಎಂ ವಿ ವೀರಭದ್ರಯ್ಯ ಮಾತನಾಡಿ ಕನ್ನಡ ಸಂಪದ್ಬರಿತ ಬಾಷೆ. ಕನ್ನಡಕ್ಕೆ ಯಾವುದೇ ಭಾಷೆ ಸಾಟಿಯಲ್ಲ. ಕನ್ನಡಕ್ಕೆ ಕುತ್ತು ಬಂದಿರುವುದು ಗ್ರಾಮಾಂತರ ಪ್ರದೇಶದಲ್ಲಿ ಅಲ್ಲ. ಬೆಂಗಳೂರಿನಲ್ಲಿ… ಅಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗುತ್ತಿದ್ದಾರೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಎಚ್ಚರಿಸಿದರು.

ಹೋಬಳಿ ಮಟ್ಟದ ಗಡಿ ಭಾಗದಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುವ ಅನಿವಾರ್ಯಯಿದ್ದು, ಪ್ರತೀ ಬೀದಿಯಲ್ಲೂ ಕನ್ನಡ ತೇರು ಎಳೆಯು ವಂತಾಗಬೇಕು ಎಂದರು.

ಕಸಾಪ ಜಿಲ್ಲಾಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾತನಾಡಿ ಸಾಹಿತ್ಯಕ್ಕೆ ದೊಡ್ಡರಂಗೇಗೌಡರ0ತಹ ಮಹನೀಯರನ್ನು ಕೊಡುಗೆಯಾಗಿ ನೀಡಿದ ಕೀರ್ತಿ ತಾಲೂಕಿಗೆ ಸಲ್ಲುತ್ತದೆ. ಇಂತಹ ತಾಲೂಕಿನ ಕೊಡಿಗೇನಹಳ್ಳಿಯಂತಹ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಮಹತ್ವ ಪೂರ್ಣ. ಗಡಿ ನಾಡಿನಲ್ಲಿ ಕನ್ನಡದ ತೇರು ಎಳೆಯುವ ಕ್ರಮ ಶ್ಲಾಘನೀಯ. ಗಡಿ ಗ್ರಾಮದಲ್ಲಿ ತೆಲುಗಿನ ಮೇಲಾಟದಲ್ಲೂ ಕನ್ನಡ ಉಳಿದುಕೊಂಡು ಬಂದಿದೆ. ಕನ್ನಡಕ್ಕಿರುವ ಜೀರ್ಣ ಶಕ್ತಿ ಅಂತದ್ದು, ಇತರೆ ಬಾಷೆಗಳ ಪದಗಳನ್ನು ಕನ್ನಡಕ್ಕೆ ಎರವಲು ಪಡೆದುಕೊಂಡಿದ್ದರೂ ಕನ್ನಡ ಮೇರು ಬಾಷೆಯಾಗಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದ್ದು, ಇಂಗ್ಲಿಷ್ ಬಾಷೆಯನ್ನು ಕನ್ನಡದಷ್ಟೇ ಎತ್ತರಕ್ಕೇರಿಸಿ, ಬೆಳೆಸಿದ ಕೀರ್ತಿ ಕನ್ನಡಿಗರಿಗೆ ಸಲ್ಲುತ್ತದೆ.

ಕನ್ನಡ ಕಲೆಯನ್ನು ಇಂದಿಗೂ ಜೀವಂತವಾಗಿರಿಸಿದರವರು ಗ್ರಾಮಾಂತರ ಪ್ರದೇಶದ ಜನತೆ, ಕೊಡಿಗೇನಹಳ್ಳಿ ಭಾಗದ ಜನತೆ ಎತ್ತರಕ್ಕೆ ನಿಲ್ಲುತ್ತಾರೆ ಎಂದರು.

ಶಾಸಕ ಎಂ.ವಿ. ವೀರಭದ್ರಯ್ಯ ಮಾಜಿ ಶಾಸಕ ಕೆ.ಎನ್. ರಾಜಣ್ಣನವರು ಇಬ್ಬರೂ ಸೇರಿ ತಾಲೂಕಿನಲ್ಲಿ ಕನ್ನಡ ಭವನವನ್ನು ಪೂರ್ಣಗೊಳಿಸಲು ಸಹಕಾರ ನೀಡುವ ಮೂಲಕ ಪ್ರತೀ ದಿನ ಕನ್ನಡದ ಕಾರ್ಯಕ್ರಮಗಳು ನಡೆಯುವ ವಾತಾವರಣ ನಿರ್ಮಾಣವಾಗಬೇಕು ಎಂದು ಮನವಿ ಮಾಡಿದರು.
ಸಮ್ಮೇಳನಾಧ್ಯಕ್ಷ ಕೆ.ಪಿ. ಅಶ್ವತ್ಥ್ ನಾರಾಯಣ್ ಮಾತನಾಡಿ ಆಂದ್ರ ಗಡಿ ಭಾಗಕ್ಕೆ ಹೊಂದಿಕೊ0ಡಿರುವ ಇಂತಹ ಪ್ರದೇಶದಲ್ಲಿ ಕನ್ನಡ ಕಟ್ಟುವ ಕೆಲಸವಾಗಬೇಕು ಸ್ಥಳೀಯವಾಗಿ ಉನ್ನತ ಶಿಕ್ಷಣ ಸಿಗುವಂತಾಗಬೇಕು. ವೃತ್ತಿಪರ ತರಬೇತಿಗಳು ದೊರಕುವಂತಾಗಬೇಕು.

ನೆಲ, ಜಲ ಸಂರಕ್ಷಣೆಯಾಗಬೇಕು. ಜಯಮಂಗಲಿ ನದಿ ನೀರನ್ನು ಬಳಸುವಂತಾಗಬೇಕು. ಯುವ ಸಮುದಾಯಕ್ಕೆ ಸ್ಥಳೀಯವಾಗಿ ಉದ್ಯೋಗ ದೊರಕುವ ಮಾರ್ಗವಾಗಬೇಕು. ರೈತರಿಗೆ, ಮಹಿಳೆಯರಿಗೆ ಇನ್ನೂ ಹೆಚ್ಚು ಸೌಲಭ್ಯಗಳು ಸಿಗುವಂತಾಗಬೇಕು. ಈ ಎಲ್ಲಾ ಸಮಸ್ಯೆಗಳು ಸುಧಾರಣೆ ಕಂಡಾಗ ಇಂತಹ ಸಮಾರಂಭಗಳು ಹೆಚ್ಚು ಅರ್ಥಪೂರ್ಣವಾಗುತ್ತವೆ. ನುಡಿ ಹಬ್ಬಗಳಿಗೆ ಅರ್ಥ ಮತ್ತು ಗೌರವ ಸಿಗುತ್ತದೆ. ಈ ನಿಟ್ಟಿನಲ್ಲಿ ನಮ್ಮನ್ನು ಪ್ರತಿನಿಧಿಸುತ್ತಿರುವ ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ತಾಲೂಕು ಕಸಾಪಾ ಅಧ್ಯಕ್ಷೆ ಸಹನಾ ನಾಗೇಶ್, ಉಪಾಧ್ಯಕ್ಷರಾದ ರಾಮಚಂದ್ರಪ್ಪ, ನಿರ್ದೇಶಕರುಗಳಾದ ಎಂವಿ ಮೂಡ್ಲ ಗಿರೀಶ್, ವೀಣಾ ಶ್ರೀವಾಸ್, ಉಮಾ ಮಲ್ಲೇಶ್, ಲಲಿತಾಂಬಾ ಲಕ್ಷ್ಮೀನರಸಯ್ಯ, ಗಾಯತ್ರಿ ನಾರಾಯಣ್, ನಂಜಮ್ಮ ಸಿದ್ದಪ್ಪ, ಉಮಾ ಮಹೇಶ್, ನಿವೃತ್ತ ಪ್ರಾಂಶುಪಾಲ ಮರಿಬಸಪ್ಪ, ಜಿಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಿಗರಾಮಯ್ಯ, ಅಮರಾವತಿ ದೇಹಾಚಾರ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ರಂಗದಾಮಯ್ಯ. ಕೊಡಗೇನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಕೆ ಎಲ್ ನಂದೀಶಯ್ಯ, ಕಾರ್ಯದರ್ಶಿ ಗಂಗಾಧರ್ ವಿ ರೆಡ್ಡಿಹಳ್ಳಿ, ಗೌರವಾಧ್ಯಕ್ಷ ರವಿ ಮೋಹನ್ ರೆಡ್ಡಿ, ಪ್ರೊಫೆಸರ್ ಕಾಳೇನಹಳ್ಳಿ ನರಸಿಂಹಯ್ಯ, ಗ್ರಾ, ಪಂ ಅಧ್ಯಕ್ಷೆ ನಸ್ರೀನ್ ತಾಜ್, ಜೀವಿಕಾ ಸಂಜೀವ್ ಮೂರ್ತಿ,ನರಸಿಂಹ ರೆಡ್ಡಿ, ನರಸರೆಡ್ಡಿ, ಜಬಿವುಲ್ಲಾ, ಕಲಿದೇವಪುರ ಶಿವಕುಮಾರ್ ಇತರರಿದ್ದರು.