ಗಂಜಿ ಗಿರಾಕಿಗಳ ಕೃತ್ಯ: ಬಿಜೆಪಿ ಯುವಮೋರ್ಚಾ ಕಿಡಿ
ತುಮಕೂರು : ನಿಮಗೆ ಕೆಲಸ ಆಗಬೇಕೇ? ನನಗೆ ಪೇ ಮಾಡಿ. ಭ್ರಷ್ಟಾಚಾರವೇ ನನ್ನ ಮೊದಲ ಆದ್ಯತೆ ಎಂಬ ಬರಹದೊಂದಿಗೆ ನಗರ ಶಾಸಕ ಜ್ಯೋತಿಗಣೇಶ್ ವಿರುದ್ಧ, ಪೇ ಎಂಎಲ್ಎ ಎಂಬ ಪೋಸ್ಟರ್ ಗಳನ್ನು ಕಾಂಗ್ರೆಸ್ ನಗರದಾದ್ಯಂತ ಪ್ರದರ್ಶಿಸಿದೆ.
ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಕಳಪೆಯಾಗಿದ್ದು ಕೋಟ್ಯಂತರ ಅವ್ಯವಹಾರ ನಡೆದಿದೆ. ನಗರದಲ್ಲಿ ಅಭಿವೃದ್ಧಿ ಕಾರ್ಯಗಳಾಗಿಲ್ಲವೆಂದು ಆರೋಪಿಸಿ ಕಾಂಗ್ರೆಸ್ ಯುವ ಮುಖಂಡ ಶಶಿಹುಲಿಕುಂಟೆ ಮಠ್ ನೇತೃತ್ವದಲ್ಲಿ ಪೋಸ್ಟರ್ ಅಂಟಿಸ ಲಾಗಿದೆ ಎನ್ನಲಾಗಿದೆ.
ಗಂಜಿಗಿರಾಕಿಗಳ ಕೃತ್ಯ: ನಗರ ಶಾಸಕ ಜ್ಯೋತಿಗಣೇಶ್ ವಿರುದ್ದ ಪೇ ಎಂಎಲ್ಎ ಎಂದು ಕಿಡಿಗೇಡಿಗಳು ರಾತ್ರೋ ರಾತ್ರಿ ಕಳ್ಳರಂತೆ ಬಾಡಿಗೆ ವ್ಯಕ್ತಿಗಳನ್ನು ಕರೆತಂದು ಭಿತ್ತಿ ಪತ್ರಗಳನ್ನು ಅಂಟಿಸಿ ಜಿಲ್ಲೆಯ ರಾಜಕಾರಣವನ್ನು ಕಲುಷಿತಗೊಳಿಸಲು ಹರಸಾಹಸ ಪಡುತ್ತಿರುವುದು ಹಾಸ್ಯಾಸ್ಪದವಾಗಿದೆ. ಶಾಸಕರ ಯಶಸ್ಸನ್ನು ಸಹಿಸದ ರಾಜಕೀಯ ವೈರಿಗಳು ಹೊಟ್ಟೆ ಪಾಡಿ ಗಾಗಿ ರಾಜಕಾರಣ ಮಾಡುತ್ತಿರುವ ಗಂಜಿ ಗಿರಾಕಿಗಳ ಮುಖಾಂತರ ಈ ರೀತಿಯ ಕೀಳುಮಟ್ಟದ ರಾಜಕಾರಣ ಮಾಡುತ್ತಿದೆ.
ಈ ಬಗ್ಗೆ ದೂರು ನೀಡಲಾಗುವುದೆಂದು ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಟಿ.ವೈ. ಯಶಸ್ ತಿಳಿಸಿದ್ದಾರೆ.