Saturday, 14th December 2024

ಸಾಮಾಜಿಕ ನ್ಯಾಯ ದಿನಾಚರಣೆ

ತುರುವೇಕೆರೆ: ಪ್ರತಿಯೊಂದು ಪ್ರಜೆಗೂ ತಮ್ಮದೇ ಆದ ಹಕ್ಕು ಸಿಗಬೇಕು ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸುವಂತಿರಬೇಕು.ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಬಹಳಷ್ಟು ತಿಳಿದಿರಬೇಕು, ಮಹಿಳೆಯರಿಗೆ ಕಾನೂನು ಅಡಿಯಲ್ಲಿ ಸಿಗಬಹುದಾದ ಹಕ್ಕುಗಳನ್ನು ಕೊಡಿಸುವಲ್ಲಿ ಸಫಲವಾಗುತ್ತಿದೆ ತುರುವೇಕೆರೆ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿಎಂ ಬಾಲಸುಬ್ರಮಣಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಮತ್ತು ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮ ದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಕಾರ್ಯಕ್ರಮವನ್ನು ತುರುವೇಕೆರೆ ನ್ಯಾಯಾ ಲಯದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಿಎಂ ಬಾಲಸುಬ್ರಮಣಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕರಾದ ದಯಾಶೀಲರವರು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯಾಧೀಶರಾದ ಪಿ ಎಮ್ ಬಾಲಸುಬ್ರಮಣ್ಯ ಅವರು ಒಂದು ದೇಶದ ಒಂದು ಸರ್ಕಾರ ಉದ್ದಾರ ಆಗಬೇಕೆಂದರೆ ಪ್ರತಿಯೊಂದು ಪ್ರಜೆಗೂ ತಮ್ಮದೇ ಆದ ಹಕ್ಕು ಸಿಗಬೇಕು ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸುವಂತಿರಬೇಕು.ಹಾಗೂ ಮಹಿಳೆಯರ ಹಕ್ಕುಗಳ ಬಗ್ಗೆ ಬಹಳಷ್ಟು ತಿಳಿದಿರಬೇಕು, ಮಹಿಳೆಯರಿಗೆ ಕಾನೂನು ಅಡಿಯಲ್ಲಿ ಸಿಗಬಹುದಾದ ಹಕ್ಕುಗಳನ್ನು ಕೊಡಿಸುವಲ್ಲಿ ಸಫಲವಾಗುತ್ತಿದೆ, ಕಾನೂನಿ ನಡಿಯಲ್ಲಿ ಪ್ರಕರಣಗಳನ್ನು ಮಾಡಬೇಕಾದರೆ ಉಚಿತವಾಗಿ ಕಾನೂನು ಸೇವಾ ಪ್ರಾಧಿಕಾರವು ನಮ್ಮ ನ್ಯಾಯಾ ಲಯದಲ್ಲಿ ದೊರೆಯುತ್ತದೆ, ಮಹಿಳೆಯರ ಹಕ್ಕುಗಳ ಬಗ್ಗೆ ಮೈಸೂರು ಸಂಸ್ಥಾನವು ಕಾನೂನಿನಲ್ಲಿ 1937ರಲ್ಲಿ ಆಸ್ತಿ ಹಕ್ಕನ್ನು ದೊರಕಿಸಿಕೊಟ್ಟಿದ್ದು ಅದು 2005 ರಲ್ಲಿ ತಿದ್ದುಪಡಿಯಾಗಿ ಪಿತ್ರಾರ್ಜಿತ ಆಸ್ತಿಯಲ್ಲಿ ಸಮನಾಗಿ ಗಂಡು ಮಕ್ಕಳಿಗೆ ಸಿಗುವ ಆಸ್ತಿಯ ಭಾಗವನ್ನೇ ಕೊಡಬೇಕು ಎಂಬ ಕಾನೂನಿನ ತಿದ್ದುಪಡಿ ಮಾಡಲಾಯಿತು, ಅಂದಿನಿಂದ ಇಂದಿನವರೆಗೆ ಹೆಣ್ಣು ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ ಇದನ್ನು ದುರುಪಯೋಗಪಡಿಸಿಕೊಳ್ಳದೆ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು. ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ ದಂತಹ, ಪಿಡುಗುಗಳನ್ನು ಸಾಮಾಜಿಕವಾಗಿ ಬಹಿಷ್ಕರಿಸಬೇಕು ಎಂದು ತಿಳುವಳಿಕೆ ನೀಡಿದರು.

ನಂತರ ಮಾತನಾಡಿದ ಜಿಲ್ಲಾ ಯೋಜನಾ ನಿರ್ದೇಶಕರಾದ ದಯಾಶೀಲರವರು ಮಾತನಾಡಿ ,ಸುಮಾರು 42 ವರ್ಷಗಳ ಹಿಂದೆ ಬೆಳ್ತಂಗಡಿಯ ಕುಗ್ರಾಮದಿಂದ ಪ್ರಾರಂಭವಾದ ಯೋಜನೆ, ಮೊದಲಿಗೆ ಸಹೋದರರ ಸಂಖ್ಯೆ ಹೆಚ್ಚಾಗಿದ್ದು, ಕೇವಲ ಪುರುಷರಿಗೆ ಸೀಮಿತವಾಗಿದ್ದ, ಈ ಯೋಜನೆ ಕೃಷಿ ತರಬೇತಿ ಹಾಗೂ ವಿವಿಧ ರೀತಿಯ ತರಬೇತಿಗಳನ್ನು ನೀಡಲಾಯಿತು, 10 ವರ್ಷಗಳ ನಂತರ ಇದರ ವರದಿಯನ್ನು ನೋಡಲಾಗಿ, ಕುಟುಂಬದ ಸಾಮರಸ್ಯ ಕೊರತೆ, ಪರಿಸರ ಸ್ವಚ್ಛತೆ, ಹಿಂದುಳಿದಿರುವುದು ಕಂಡುಬಂದಿತ್ತು, ಇದನ್ನರಿತ ಕಾವಂದರಾದ ಶ್ರೀ ವೀರೇಂದ್ರ ಹೆಗ್ಗಡೆಯವರು ಹಾಗೂ ಹೇಮಾವತಿ ಅಮ್ಮನವರು 1992 ರಲ್ಲಿ ಮಹಿಳಾ ಸ್ವಸಹಾಯ ಸಂಘ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಜಾರಿಗೆ ತರಲಾಯಿತು, ಇದರ ಫಲವಾಗಿ ಇಂದು ರಾಜ್ಯದಲ್ಲಿ ಶೇಕಡ 80 ರಷ್ಟು ಮಹಿಳಾ ಸ್ವ ಸಹಾಯ ಸಂಘಗಳು, ಹಾಗೂ ಶೇಕಡ 20ರಷ್ಟು ಪುರುಷ ಸಂಘಗಳು ಇರುತ್ತವೆ, ಈ ಸಂಸ್ಥೆಯು 10 ಹಲವು ಯೋಜನೆಗಳನ್ನು ಜಾರಿಗೆ ತಂದು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣ ಆಗುವಂತೆ ಯಶಸ್ವಿಯಾಗಿ ನಡೆಯುತ್ತಿದೆ, ತಾವೆಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳುತ್ತಿದ್ದೀರಾ ಎಂದು ನಂಬಿರುತ್ತೇನೆ ಎಂದರು.

ಇದೆ ವೇಳೆ ಜ್ಞಾನವಿಕಾಸ ಕೇಂದ್ರದ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ಜರುಗಿದವು.

ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸವಿತಾ ಶಿವಕುಮಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷರು ದೊಡ್ಡ ಶೆಟ್ಟಿಕೆರೆ, ಶ್ರೀ ಸಿದ್ದಲಿಂಗಯ್ಯ ಮುಖ್ಯೋಪಾಧ್ಯಾಯರು ಶ್ರೀ ಚಿರಂತನ ಕಾವ್ಯೋದಯ ಹಿರಿಯ ಪ್ರಾಥಮಿಕ ಪಾಠಶಾಲೆ, ಶ್ರೀಮತಿ ಶೋಭಾ ಜಯದೇವ್ ಕಾನೂನು ಸಲಹೆಗಾರರು ತಿಪಟೂರು, ಪುರುಷೋತ್ತಮ್ ಸಿವಿಲ್ ನ್ಯಾಯಾಧೀಶರು ,ಹಾಗೂ ಕಾರ್ಯದರ್ಶಿಗಳು ತುರುವೇಕೆರೆ ,ಶ್ರೀಮತಿ ಲೀಲಾವತಿ ಮೇಲ್ವಿಚಾರಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ,ತಿಪ್ಪಣ್ಣ ರಂಗಭೂಮಿ ಕಲಾವಿದರು ಹಾಗೂ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರು, ಯೋಜನಾಧಿಕಾರಿಗಳಾದ ಅನಿತಾ ಶೆಟ್ಟಿ, ಜ್ಞಾನವಿಕಾಸ ಸಮನ್ವಯ್ಯಾಧಿಕಾರಿಯಾದ ಲಾವಣ್ಯ, ಮೇಲ್ವಿಚಾರಕರಾದ ಗಿರೀಶ್, ಹಾಗೂ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು ಸದಸ್ಯರುಗಳು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.