Friday, 13th December 2024

ಯುವ ಪೀಳಿಗೆಯ ಬರಹಗಳು ಭರವಸೆ ಮೂಡಿಸುತ್ತಿವೆ: ಎಸ್.ಜಿ.ಸಿದ್ದರಾಮಯ್ಯ

ತುಮಕೂರು: ಯುವ ಪೀಳಿಗೆಯ ಬರಹಗಳು ಭರವಸೆ ಮೂಡಿಸುತ್ತಿವೆ ಎಂದು ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ನಗರದ ಕನ್ನಡ ಭವನದಲ್ಲಿ ದರೈಸ್ತ್ರೀ ಕಲ್ಚರಲ್ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟ, ಸ್ಟೂಡೆಂಟ್ ಬುಕ್ ಕಂಪನಿ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ರಚಿಸಿ ರುವ ಅಹಿಂಸಾ ಮಾರ್ಗ ಮತ್ತು ಮಾತಂಗಿ ಕುಲಕಥನ ಕೃತಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ದೇವನೂರು ಮಹಾದೇವ ಅವರು ಎದೆಗೆ ಬಿದ್ದ ಅಕ್ಷರ ಮತ್ತು ನೆಲಕ್ಕೆ ಬಿದ್ದ ಬೀಜ ಎಂದಾ ದರೊಂದು ದಿನ ಮೊಳಕೆ ಹೊಡೆಯು ತ್ತವೆ ಎಂದು ಹೇಳುತ್ತಾರೆ. ಇದು ಸತ್ಯ. ಆದರೆ ನನ್ನ ದೃಷ್ಟಿಯಲ್ಲಿ ಇದು ಅರ್ಧ ಸತ್ಯದಂತೆ ಕಂಡುಬರುತ್ತದೆ ಎಂದು ಹೇಳಿದರು.
ಮಲೆ ಮಹದೇಶ್ವರ, ಮಂಟೇಸ್ವಾಮಿ ಮತ್ತು ಜುಂಬಪ್ಪನ ಕಾವ್ಯಗಳು ಶೈವವನ್ನು ಪ್ರತಿ ಪಾದಿಸುತ್ತವೆ. ಈ ನಾಯಕರೆಲ್ಲರೂ ಶೈವ ಪ್ರತಿಪಾದಕರಾಗಿದ್ದಾರೆ. ಇಂದು ಬಸವ ಧರ್ಮಕ್ಕೂ ಲಿಂಗಾಯತರಿಗೂ ಹೊಂದಾಣಿಕೆ ಇಲ್ಲವಾಗಿದೆ. ಗೊಲ್ಲರು ಕೃಷ್ಣನ ಬೆನ್ನ ಹಿಂದೆ ಬಿದ್ದು ಶೈವವನ್ನು ಮರೆತಿದ್ದಾರೆ ಎಂದು ವಿಷಾದಿಸಿದರು.
ಗೊಲ್ಲರು ಮತ್ತು ಕುರುಬರು ಒಂದೇ ಮೂಲದವರು. ಎರಡು ಸಮುದಾಯಗಳೂ ಕೂಡ ಪಶುಪಾಲನೆ ಮಾಡುತ್ತ ಬರುತ್ತಿವೆ. ಗೊಲ್ಲರು ದನಗಳ ಪಾಲನೆ ಪೋಷಣೆ ಮಾಡಿದರೆ, ಕುರುಬರು ಕುರಿ ಕಾಯುತ್ತಿದ್ದಾರೆ. ಗೊಲ್ಲರಿಗೆ ಜುಂಜಪ್ಪ ಮುಖ್ಯವಾಗಬೇಕಿತ್ತು. ಆದರೆ ಅವರು ಕೃಷ್ಣನ ಬೆನ್ನ ಹಿಂದೆ ಬಿದ್ದಿದ್ದಾರೆ ಎಂದು ಹೇಳಿದರು.
 ಡಾ.ಹುಲಿಕುಂಟೆ ಮೂರ್ತಿ , ಬರಹಗಾರ ಡಾ.ಹೆಚ್.ಲಕ್ಷ್ಮೀನಾರಾಯಣಸ್ವಾಮಿ, ಕಲೇಸಂ ಜಿಲ್ಲಾ ಶಾಖೆ ಅಧ್ಯಕ್ಷೆ ಮಲ್ಲಿಕಾ ಬಸವ ರಾಜು, ಕೃತಿಗಳ ಕರ್ತೃ ಡಾ.ಶಿವಣ್ಣ ತಿಮ್ಲಾಪುರ ಮಾತನಾಡಿದರು.
ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಿನ್ಸಿಪಾಲ್ ಡಾ.ಟಿ.ಆರ್.ಲೀಲಾವತಿ, ತುಮಕೂರು ವಿವಿ ಕನ್ನಡ ಅಧ್ಯಾಪಕರ ಒಕ್ಕೂಟದ ಡಾ.ಶಿವನಂಜಯ್ಯ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಅಧ್ಯಕ್ಷ ಎ.ರಾಮಚಂದ್ರಪ್ಪ, ಉಪನ್ಯಾಸಕ ಕಂಟಲಗೆರೆ ಸಣ್ಣ ಹೊನ್ನಯ್ಯ ಉಪಸ್ಥಿತರಿದ್ದರು. ಯುವ ಮುಖಂಡ ಕೊಟ್ಟ ಶಂಕರ್ ಸ್ವಾಗತಿಸಿದರು.