Saturday, 14th December 2024

ಸಿದ್ಧಗಂಗಾ ಮಠದಲ್ಲಿ ಪೂಜೆಸಲ್ಲಿಸಿ ಪ್ರಚಾರಕ್ಕಿಳಿದ ಸೊಗಡು

ತುಮಕೂರು: ಮಾಜಿ ಸಚಿವ ಸೊಗಡು ಶಿವಣ್ಣ ಗುರುವಾರ ಸಿದ್ದಗಂಗಾ ಮಠದಲ್ಲಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದುಗೆ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಪ್ರಚಾರವನ್ನು ಆರಂಭಿಸಿದರು.
ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಮಾಜಿ ಸಚಿವ ಶಿವಣ್ಣ,  ಮತದಾರರ ಮನೆ ಮನೆಗೆ ತೆರಳಿ ಪಕ್ಷದ ಹಾಗೂ ತಮ್ಮ ಅಧಿಕಾರಾವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ಮನವರಿಕೆ ಮಾಡಿಕೊಡುವ ಕಾರ್ಯವನ್ನು ಕೈಗೊಂಡರು.
ತಮ್ಮ ಅಭಿಮಾನಿಗಳು, ಹಿತೈಷಿಗಳೊಂದಿಗೆ ಪ್ರಚಾರ ಕಾರ್ಯವನ್ನು ಆರಂಭಿಸಿದ ಮಾಜಿ ಸಚಿವ ಎಸ್. ಶಿವಣ್ಣ ಮಾತನಾಡಿ, ಮಹಾತ್ಮರ ಸನ್ನಿಧಿಯಿಂದ ಒಳ್ಳೆಯ ಕೆಲಸ ಆರಂಭಿಸುವುದು ವಾಡಿಕೆ. ನಾನು ಶ್ರೀಕ್ಷೇತ್ರದ ಭಕ್ತ. ಹಾಗಾಗಿ ಯಾವುದೇ ಒಂದು ಒಳ್ಳೆಯ ಕೆಲಸ ಮಾಡುವಾಗ ಇಲ್ಲಿಂದಲೇ ಶುರು ಮಾಡುವುದು ನನ್ನ ಪದ್ದತಿ ಎಂದರು.
1994 ರಿಂದ ನಾನು ತುಮಕೂರು ನಗರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮನ ವರಿಕೆ ಮಾಡಿಕೊಡುವ ಕೆಲಸವನ್ನು ಇಂದಿ ನಿ0ದ ಅವರ ಮನೆ ಬಾಗಿಲಿಗೆ ತೆರಳಿ ಮಾಡುತ್ತೇವೆ. ಕ್ಷೇತ್ರದ ಜನ ರಿಂದಲೇ ನನಗೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಬರುತ್ತಿದೆ. ಹಾಗಾಗಿ ಇದರಲ್ಲಿ ಯಾವುದೇ ಗೊಂದಲ ಮೂಡುವ ಪ್ರಶ್ನೆಯೇ ಇಲ್ಲ ಎಂದರು.
ಈ ಬಗ್ಗೆ ಗೊಂದಲ ಎಂದು ಹೇಳುವವರು ಯಾರಾದರೂ ಇದ್ದರೆ ಅವರು ಮಾಡಿರುವ ಕೆಲಸ ಕಾರ್ಯಗಳ ಬಗ್ಗೆ ಬಹಿರಂಗವಾಗಿ ಮುಂದೆ ಬಂದು ಹೇಳಲಿ. ಸುಖಾ ಸುಮ್ಮನೆ ಜನರಿಗೆ ತಪ್ಪು ಸಂದೇಶ ಹೋಗುವ ರೀತಿ ಮಾಡಬಾರದು ಎಂದರು.
ಈ ಸಂದರ್ಭದಲ್ಲಿ ಧನಿಯಾಕುಮಾರ್, ಶಬ್ಬೀರ್ ಅಹಮದ್, ಸುಜಾತ ಚಂದ್ರಶೇಖರ್, ರಮೇಶ್ ಆಚಾರ್, ಲಕ್ಷ್ಮೀಶ್, ಕುಮಾರಸ್ವಾಮಿ, ಆಟೋ ನವೀನ್, ಜೈಪ್ರಕಾಶ್, ಚೌಡಪ್ಪ, ಬನಶಂಕರಿ ಬಾಬು ಇದ್ದರು.