ತುಮಕೂರು: ಅಮೃತ್ ಭಾರತ ಯೋಜನೆಯಲ್ಲಿ 2 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ 61 ರೈಲ್ವೆ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಲು ಕಾರ್ಯ ಕ್ರಮ ರೂಪಿಸಲಾಗಿದೆ. ಇದರಡಿ ಸುಮಾರು 100 ಕೋಟಿ ವೆಚ್ಚದಲ್ಲಿ ತುಮಕೂರು ರೈಲ್ವೆ ನಿಲ್ದಾಣವನ್ನು ಏರ್‌ಪೋರ್ಟ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗುವುದೆಂದು ಕೇಂದ್ರ ಸಚಿವ ಸೋಮಣ್ಣ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿರುವ ತಮ್ಮ ನೂತನ ಕಾರ್ಯಾಲಯದಲ್ಲಿ ಭಾನುವಾರ ಪೂಜೆ ಸಲ್ಲಿಸಿ ಕಾರ್ಯಾರಂಭಗೊಳಿಸಿದ ನಂತರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಸಚಿವ, ದಕ್ಷಿಣ ಭಾರತದಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಂತರದಲ್ಲಿ ತುಮಕೂರು ನಗರವಾಗಿದೆ. ಈ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ದೂರದೃಷ್ಟಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕಾಗಿದೆ ಎಂದರು.
ತುಮಕೂರು ಜಿಲ್ಲೆಯ ರೈತರ ಹಿತಕಾಯುವ ದೃಢ ನಿರ್ಧಾರ ತೆಗೆದುಕೊಂಡಿದ್ದು ಮಿಲ್ಲಿಂಗ್ ಕೊಪ್ರಾವನ್ನು ಬೆಂಬಲ ಬೆಲೆಯಡಿ ಖರೀದಿ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ತುಮಕೂರು ಜಿಲ್ಲೆಯನ್ನು ರಾಜ್ಯ ಸರ್ಕಾರ ಕೈ ಬಿಟ್ಟಿತ್ತು. ತುಮಕೂರು ಜಿಲ್ಲೆಯೂ ಸೇರಿದಂತೆ ಇತರೆ ಜಿಲ್ಲೆಗಳ ಕೊಬ್ಬರಿ ಬೆಳೆಗಾರರಿಗೆ ಅನುಕೂಲವಾಗಲೆಂದು 10500 ಮೆಟ್ರಿಕ್ ಟನ್ ಮಿಲ್ಲಿಂಗ್ ಕೊಪ್ರಾ ಖರೀದಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿ ರೈತರಿಗೆ ಸಹಕರಿಸಿದೆ.
2024ರಲ್ಲಿ ತುಮಕೂರಿನ 37 ಸಾವಿರ ರೈತರಿಂದ ಪ್ರತಿ ಕ್ವಿಂಟಾಲ್‌ಗೆ 12 ಸಾವಿರ ರೂ.ನಂತೆ 3.15 ಲಕ್ಷ ಕ್ವಿಂಟಾಲ್ ಉಂಡೆ ಕೊಬ್ಬರಿ ಖರೀದಿಸಲಾಗಿತ್ತು. ಈ ಸಂಬ0ಧ ಒಟ್ಟು 378 ಕೋಟಿ ರೂ. ಹಣ ತುಮಕೂರು ರೈತರಿಗೆ ಪಾವತಿಸಬೇಕಾಗಿತ್ತು. ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಮನವಿ ಮಾಡಿದ್ದೆ, ಒಟ್ಟು 377 ಕೋಟಿ ರೂ. ಹಣವನ್ನು ಡಿಬಿಟಿ ಮೂಲಕ ಕೊಬ್ಬರಿ ಬೆಲೆಗಾರರಿಗೆ ತಕ್ಷಣ ಸಂದಾಯ ಮಾಡಲಾಗಿದೆ. ತಾಂತ್ರಿಕ ದೋಷದಿಂದ 80-85 ರೈತರಿಗೆ ಮಾತ್ರ ಪಾವತಿಯಾಗುವುದು ಬಾಕಿಯಿದೆ ಎಂದರು.
ಕಳೆದ ವಾರ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿಯವರೊಂದಿಗೆ ಸಭೆ ನಡೆಸಿ ತುಮಕೂರು ಜಿಲ್ಲೆಯ ರಸ್ತೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಯಿತು. ಈ ರಸ್ತೆಗಳ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಸಚಿವರು ಭರವಸೆ ನಿಡಿದ್ದಾರೆ ಎಂದು ಹೇಳಿದರು.
ತುಮಕೂರು ರೈಲು ನಿಲ್ದಾಣಕ್ಕೆ ಡಾ.ಶಿವಕುಮಾರ ಸ್ವಾಮೀಜಿಗಳ ಹೆಸರು ಇಡುವಂತೆ ಹಾಗೂ ಕ್ಯಾತ್ಸಂದ್ರ ನಿಲ್ದಾಣಕ್ಕೆ ಸಿದ್ಧಗಂಗಾ ನಿಲ್ದಾಣ ಎಂದು ಹೆಸರಿಡಲು ಹತ್ತಾರು ಸಂಘಸ0ಸ್ಥೆಗಳು ಮನವಿ ಮಾಡಿವೆ. ಈ ಬಗ್ಗೆ ಸ್ಪಂದಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ನೆನೆಗುದಿಗೆ ಬಿದ್ದಿದ್ದ ತುಮಕೂರು-ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ರೈಲು ಮಾರ್ಗಗಳ ನಿರ್ಮಾಣ ಕಾಮಗಾರಿಗೆ ವೇಗ ದೊರಕಿಸಲಾಗಿದೆ. ಭೂಸ್ವಾದೀನ ಪ್ರಕ್ರಿಯೆ ಚುರುಕುಗೊಂಡಿದೆ. 2026-27ರ ವೇಳೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಆರಂಭಿಸಬೇಕೆಂಬ ಗುರಿ ಇದೆ ಎಂದರು.
ಕೇ0ದ್ರ ಸಚಿವ ವಿ.ಸೋಮಣ್ಣ ಅವರ ನೂತನ ಕಚೇರಿ ಕಾರ್ಯಾರಂಭದ ಸಮಾರಂಭದಲ್ಲಿ ಜಿಲ್ಲೆಯಾದ್ಯಂತ ಅಪಾರ ಸಂಖ್ಯೆಯಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಸುರೇಶ್‌ಗೌಡ, ಸಿ.ಬಿ.ಸುರೇಶ್‌ಬಾಬು, ಟಿ.ಬಿ.ಜಯಚಂದ್ರ ಎಂ.ಟಿ.ಕೃಷ್ಣಪ್ಪ, ಮಾಜಿ ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ವಿಧಾನ ಪರಿಷತ್ ಸದಸ್ಯರಾದ ಚಿದಾನಂದಗೌಡ, ಆರ್.ರಾಜೇಂದ್ರ, ಮಾಜಿ ಸಚಿವ ಬಿ.ಸಿ. ನಾಗೇಶ್, ಮಾಜಿ ಶಾಸಕರಾದ ಎಂ.ವಿ.ವೀರಭದ್ರಯ್ಯ, ಮಸಾಲೆ ಜಯರಾಂ, ಸುಧಾಕರಲಾಲ್, ಕೆ.ಎಂ.ತಿಮ್ಮರಾಯಪ್ಪ, ಷಫಿಅಹ್ಮದ್, ನಂಜಾಮರಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜ್, ಮುಖಂಡರಾದ ದಿಲೀಪ್‌ಕುಮಾರ್, ಜಿ.ಎನ್.ಬೆಟ್ಟಸ್ವಾಮಿ, ಎಸ್.ಅರ್.ಗೌಡ, ಜೆ.ಜಗದೀಶ್, ಕೊಪ್ಪಲ್ ನಾಗರಾಜು , ಸದಾಶಿವಯ್ಯ ಸೇರಿದಂತೆ ಬಿಜೆಪಿ, ಜೆಡಿಎಸ್‌ನ ಹಲವಾರು ಮುಖಂಡರು ಆಗಮಿಸಿ ಸಚಿವ ವಿ.ಸೋಮಣ್ಣನವರಿಗೆ ಶುಭ ಕೋರಿದರು.