ತುಮಕೂರು: ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸ್ ಇಲಾಖೆ ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಎಸ್ಪಿ ರಾಹುಲ್ ಕುಮಾರ್ ಕರೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪೊಲೀಸ್ ಧ್ವಜ ಬಿಡುಗಡೆ ಮಾಡಿ ಮಾತನಾಡಿ ದರು.
ಸಮಸ್ಯೆಗಳನ್ನು ಹೊತ್ತು ಪೊಲೀಸ್ ಠಾಣೆಗಳಿಗೆ ಬರುವ ಸಾರ್ವಜನಿಕರೊಂದಿಗೆ ಸೌಜನ್ಯಯುತವಾಗಿ ನಡೆದು ಕೊಳ್ಳುವ ಮೂಲಕ ಅವರನ್ನು ಸಮಾನ ಭಾವದಿಂದ ಕಂಡು ಸಮಸ್ಯೆಯನ್ನು ಆಲಿಸಬೇಕು ಎಂದರು.
ಪೊಲೀಸ್ ಪವಿತ್ರವಾದ ವೃತ್ತಿ. ಈ ಇಲಾಖೆಯಲ್ಲಿ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ. ಹಾಗಾಗಿ ಖಾಕಿ ಸಮವಸ್ತ್ರ ಧರಿಸುವ ನಾವೆಲ್ಲರೂ ನ್ಯಾಯ, ಧರ್ಮದ ಪರ ನಿಂತು ಕೆಲಸ ಮಾಡಬೇಕು. ಆಗ ಮಾತ್ರ ಕಾನೂನಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ನಿವೃತ್ತ ಸಿಪಿಐ ಮುನಿರಾಜ್ ಮಾತನಾಡಿದರು, ಪೊಲೀಸ್ ಇಲಾಖೆಯಲ್ಲಿ ಒತ್ತಡದಲ್ಲಿ ಕೆಲಸ ಮಾಡಿ ನಿವೃತ್ತಿ ಹೊಂದಿದವರಿಗೆ ಕಲ್ಯಾಣ ಕಾರ್ಯಕ್ರಮ ಹಾಕಿಕೊಳ್ಳುವಂತಹ ಕಾರ್ಯಕ್ರಮ ಇದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಎಎಸ್ಪಿ ಮರಿಯಪ್ಪ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ಸಿದ್ದಾರ್ಥ ಗೋಯಲ್, ಡಿವೈಎಸ್ಪಿಗಳಾದ ಶ್ರೀನಿವಾಸ್, ಪರಮೇಶ್ ಸೇರಿದಂತೆ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳು ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.