Friday, 13th December 2024

ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಅನಾವರಣಗೊಳಿಸುವುದು ಶಿಕ್ಷಕರ ಕರ್ತವ್ಯ: ಅಭಿನವ ಮಲ್ಲಿಕಾರ್ಜುನ ಶ್ರೀ

ಶ್ರೀ ಬಸವೇಶ್ವರ ವಿದ್ಯಾ ಸಂಸ್ಥೆಯಲ್ಲಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ

ತಿಪಟೂರು: ಮಕ್ಕಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವುದು ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ, ಪಾಠದ ಜೊತೆಗೆ ಆಟ ಮತ್ತು ಸಾಂಸ್ಕೃತಿಕ ಚಟುವಟಿಕೆಗೂ ಶಾಲೆಯು ಗಮನ ನೀಡಬೇಕೆಂದು ಕುಪ್ಪೂರು-ತಮ್ಮಡೀಹಳ್ಳಿ ಮಠದ ಪೀಠಾಧ್ಯಕ್ಷ ಅಭಿನವ ಮಲ್ಲಿಕಾರ್ಜುನದೇಶೀ ಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಹೊನ್ನವಳ್ಳಿ ಹೋಬಳಿಯ ಹಾಲ್ಕುರಿಕೆಯ ಶ್ರೀ ಬಸವೇಶ್ವರ ರೆಸಿಡೆನ್ಸಿಯಲ್ ಹೈಸ್ಕೂಲ್‌ನ ೨೦೨೨- ೨೩ನೇ ಸಾಲಿನ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀಗಳು, ಮಕ್ಕಳಲ್ಲಿ ಒಂದಲ್ಲಾ ಒಂದು ಪ್ರತಿಭೆ, ಕೌಶಲ್ಯವಿರುತ್ತದೆ ಶಾಲೆಯು ಮತ್ತು ಶಿಕ್ಷಕರು ಅದನ್ನು ಗುರ್ತಿಸಿ ಅದರ ಅನಾವರಣಕ್ಕೆ ಅವಕಾಶವನ್ನು ಕಲ್ಪಿಸಿಕೊಡಬೇಕು ಆ ಮೂಲಕ ಮಕ್ಕಳ ಕಲಿಕೆಗೆ ಮತ್ತು ಭೌದ್ದಿಕ ಕಲಿಕೆಗೆ ಸಹಾಯವನ್ನು ಮಾಡಬೇಕೆಂದು ತಿಳಿಸಿದರು.

ಪೊಲೀಸ್ ಉಪದೀಕ್ಷಕ ಸಿದ್ದಾರ್ಥ್ ಗೋಯಲ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಅವರನ್ನು ನಾಡಿನ ಉತ್ತಮ ಪ್ರಜೆಗಳನ್ನಾಗಿ ಮಾಡುವಲ್ಲಿ ಶಾಲೆಗಳ ಮಹತ್ವ ಮುಖ್ಯವಾದುದು. ಇಂತಹ ವಾರ್ಷಿಕೋತ್ಸವ ಕಾರ್ಯಕ್ರಮಗಳು ಹೆಚ್ಚು ಜರುಗಬೇಕು ಆಮೂಲಕ ಮಕ್ಕಳ ಕೌಶಲ್ಯಗಳೂ ಬೆಳಕಿಗೆ ಬರಲು ಸಹಾಯಕಾರಿಯಾ ಗಬೇಕೆಂದು ತಿಳಿಸಿದರು.

ವೈದ್ಯ ಡಾ. ಜಿ.ಎಸ್.ಶ್ರೀಧರ್ ಮಾತನಾಡಿ, ಮಕ್ಕಳು ದೇವರ ಸಮಾನ ಅವರ ಪ್ರತಿಭೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಅವರ ಕೌಶಲ್ಯಗಳು ವೃದ್ದಿಯಾಗುವಂತೆ ಮಾಡಬೇಕು, ಅವರ ಕಲಿಕೆಗೆ ಇಂತಹ ಕಾರ್ಯಕ್ರಮಗಳು ಸಹಾಯಕಾರಿ ಎಂದರು.

ಬಸವೇಶ್ವರ ಸಂಸ್ಥೆಯ ಆಡಳಿತಾಧಿಕಾರಿ ಹೆಚ್.ಎನ್.ಹಾಲಪ್ಪ, ನಿವೃತ್ತ ಶಿಕ್ಷಕ ಸೋಮಶೇಖರ್, ಪತ್ರಕರ್ತ ಬಿ.ಟಿ.ಕುಮಾರ್, ಐಟಿಐ ಕಾಲೇಜಿನ ಪ್ರಾಂಶುಪಾಲ ನಾಗೇಶ್, ಮುಖ್ಯ ಶಿಕ್ಷಕಿ ಶಿಲ್ಪ, ತಿಪಟೂರು ಶಾಲೆಯ ಮುಖ್ಯೋಪಾದ್ಯಾಯಿನಿ ಲೋಲಾಕ್ಷಮ್ಮ, ರಾಜಣ್ಣ ಸೇರಿದಂತೆ ಸಿಬ್ಬಂದಿವರ್ಗ ವಿದ್ಯಾರ್ಥಿಗಳು ಪೂಷಕರು ಭಾಗವಹಿಸಿದ್ದರು. ಶಾಲಾ ವಾರ್ಷಿಕೇತ್ಸವದಲ್ಲಿ ಮಕ್ಕಳು ಪ್ರದರ್ಶಿಸಿದ ಸೋಮನ ಕುಣಿತ ಎಲ್ಲರ ಗಮನ ಸೆಳೆಯಿತು.