Thursday, 12th September 2024

ಸೊಗಡು ಶಿವಣ್ಣಗೆ ವೀರಶೈವ ಸಮಾಜ ಬೆಂಬಲ

ತುಮಕೂರು:  ನಗರ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸೊಗಡು ಶಿವಣ್ಣಗೆ ವೀರಶೈವ ಲಿಂಗಾಯಿತ ಸಮುದಾಯ ಬೆಂಬಲ ಸೂಚಿಸಿದೆ.
ನಗರದ  ಸ್ನೇಹ ಸಂಗಮ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಶನಿವಾರ ನಗರ ವೀರಶೈವ ಸಮಾಜದ ಎಲ್ಲಾ ಮುಖಂಡರು ಹಾಗೂ ಹಿತೈಷಿಗಳು ಸಭೆ ಸೇರಿ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ ಅವರಿಗೆ ತಮ್ಮ ಬೆಂಬಲವನ್ನು ಘೋಷಿಸಿ, ಒಗ್ಗಟ್ಟಿನಿಂದ ಶಿವಣ್ಣ ಅವರ ಗೆಲುವಿಗೆ ಶ್ರಮಿಸಲು ತೀರ್ಮಾನಿಸಿದರು.
ಈ ವೇಳೆ  ಮಾತನಾಡಿದ ಪಕ್ಷೇತರ ಅಭ್ಯರ್ಥಿ ಸೊಗಡು ಶಿವಣ್ಣ, ಇದು ನನ್ನ ಜೀವಮಾನದ ಕೊನೆಯ ಚುನಾವಣೆ, ಸ್ವಾಭಿಮಾನದ ಸಂಕೇತವಾಗಿ ಈ ಬಾರಿಯ ಚುನಾವಣೆಗೆ ಪಕ್ಷೇತರ ನಾಗಿ ಸ್ಪರ್ಧಿಸಿದ್ದು, ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಎಲ್ಲರೂ ಅತ್ಯಂತ ವ್ಯಾಪಕವಾಗಿ ಬೆಂಬಲಿಸುತ್ತಿರುವುದು ನನಗೆ ಸಂತಸ ತಂದಿದೆ. ಜತೆಗೆ ನಮ್ಮ ವೀರಶೈವ ಲಿಂಗಾಯಿತ ಸಮಾಜ ನನ್ನ ಬೆನ್ನಿಗೆ ನಿಂತು ಗೆಲುವಿಗೆ ಸಹಕರಿಸುತ್ತಿರುವುದು ನನಗೆ ತುಂಬಾ ಸಂತೋಷ ಕರವಾಗಿದೆ ಎಂದು ಭಾವುಕರಾದರು.
ವೀರಶೈವ ಸಮಾಜ ಸೇವಾ ಸಮಿತಿಯ ಸಂಸ್ಥಾಪಕ ಕಾರ್ಯದರ್ಶಿ ಟಿ.ಎಸ್.ಶಿವಪ್ರಕಾಶ್ ಮಾತನಾಡಿ, ಸೊಗಡು ಶಿವಣ್ಣ ಅವರು ನಿರ್ಧಿಷ್ಟ ಸಮಾಜಕ್ಕಷ್ಟೇ ಅಲ್ಲ, ಸರ್ವಜನಾಂಗದ ನಾಯಕರು ಎಲ್ಲಾ ಸಮಾಜಕ್ಕೂ ನಿಷ್ಕಲ್ಮಶವಾಗಿ ಸೇವೆ ಸಲ್ಲಿಸುತ್ತಿರುವವರು. ಈ ಚುನಾವಣೆಯಲ್ಲಿ ಅವರನ್ನು ಹೆಚ್ಚಿನ ಬಹುಮತದೊಂದಿಗೆ ಗೆಲ್ಲಿಸಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ವೀರಶೈವ ಸಮಾಜದ ಮತ್ತೋರ್ವ ಮುಖಂಡರಾದ ಆಶಾ ಪ್ರಸನ್ನ ಕುಮಾರ್ ಮಾತನಾಡಿ, ವೀರಶೈವ ಸಮುದಾಯಕ್ಕೆ ಒಗ್ಗಟ್ಟಿನ ಕೊರತೆ ಇದೆ, ಭ್ರಷ್ಟರಲ್ಲಿ ನಡುಕ ಹುಟ್ಟಿಸಿ ಭ್ರಷ್ಟಾಚಾರ ರಹಿತ ಆಡಳಿತ ಮಾಡಿದ ಮಾಜಿ ಸಚಿವ ಸೊಗಡು ಶಿವಣ್ಣ ಅವರ ಬೆಂಬಲಕ್ಕೆ ವೀರಶೈವ ಸಮಾಜ ಮುಕ್ತವಾಗಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಮುಖಂಡರಾದ ಕೆ.ಜೆ. ರುದ್ರಪ್ಪ, ಮೋಹನ್ ಕುಮಾರ್ ಪಟೇಲ್, ಬಿ.ಎಸ್.ಮಂಜುನಾಥ್, ಸುಜಾತ ಚಂದ್ರಶೇಖರ್, ಹೆಬ್ಬಾಕ ಮಲ್ಲಿಕಾರ್ಜುನ್, ಶೀಲ ಸೋಮಶೇಖರ್, ಜೆ.ಕೆ.ಅನಿಲ್ ಸೇರಿದಂತೆ ನೂರಾರು ವೀರಶೈವ ಲಿಂಗಾಯಿತ ಸಮಾಜದ ಮುಖಂಡರು  ಭಾಗವಹಿಸಿದ್ದರು.