Wednesday, 11th December 2024

Tumkur Dasara: ತುಮಕೂರಿನಲ್ಲಿ ದಸರಾ ಸಂಭ್ರಮ; ಅಂಬಾರಿ ಹೊರಲಿದೆ ಲಕ್ಷ್ಮಿ!

Tumkur Dasara

ತುಮಕೂರು: ಕಲ್ಪತರುನಾಡು ತುಮಕೂರಿನಲ್ಲಿ ಈ ಬಾರಿ ದಸರಾ ಸಂಭ್ರಮ (Tumkur Dasara) ಮನೆ ಮಾಡಿದೆ. ಇದೇ ಮೊದಲ ಬಾರಿಗೆ ಜಿಲ್ಲಾಡಳಿತದ ವತಿಯಿಂದ ಚಿತ್ತಾಕರ್ಷಕ ದಸರಾ ಉತ್ಸವವನ್ನು ಆಚರಿಸಲಾಗುತ್ತಿದೆ. ಅ. 12ರಂದು ಅದ್ಧೂರಿಯಾಗಿ ಜಂಬೂಸವಾರಿ ನಡೆಸುವ ಸಲುವಾಗಿ ನಗರದಲ್ಲಿ ಎರಡು ಲಕ್ಷ್ಮಿ ಆನೆಗಳ ತಾಲೀಮು ನಡೆಸಲಾಯಿತು.

ತುಮಕೂರು ದಸರಾ ಉತ್ಸವಕ್ಕೆ ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ ಹಾಗೂ ತಿಪಟೂರು ತಾಲೂಕು ಕಾಡು ಸಿದ್ದೇಶ್ವರ ಮಠದ ಲಕ್ಷ್ಮಿ ಆನೆಗಳನ್ನು ತೊಡಗಿಸಿಕೊಂಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಜಂಬೂಸವಾರಿ ಮೆರವಣಿಗೆಯ ತಾಲೀಮು ನಡೆಸಲಾಯಿತು. ಡಿಎಫ್‌ಐ ಅನುಪಮ ನೇತೃತ್ವದಲ್ಲಿ ಜಂಬೂಸವಾರಿ ನಡೆಯಲಿರುವ ಮಾರ್ಗದಲ್ಲಿ ಎರಡು ಆನೆಗಳ ತಾಲೀಮು ನಡೆಸಿದ್ದು, ರಸ್ತೆಯಲ್ಲಿ ಶಾಂತವಾಗಿ ಎರಡು ಆನೆಗಳು ಗಜ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು.

ಈ ಸುದ್ದಿಯನ್ನೂ ಓದಿ | MB Patil: ‘ಕ್ವಿನ್‌ ಸಿಟಿ’ ಯೋಜನೆಯಲ್ಲಿ ಅಮೆರಿಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಆಸಕ್ತಿ: ಎಂ. ಬಿ. ಪಾಟೀಲ

ನಗರದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ವೃತ್ತದಿಂದ ಆರಂಭವಾದ ಆನೆಗಳ ಜಂಬೂಸವಾರಿ ತಾಲೀಮು ಅಶೋಕ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ರಸ್ತೆಯಿಂದ ಅಮಾನಿಕೆರೆ ಮಾರ್ಗವಾಗಿ ಹನುಮಂತಪುರ, ಮಹಾತ್ಮಗಾಂಧಿ ಕ್ರೀಡಾಂಗಣ ರಸ್ತೆ ಬಳಸಿಕೊಂಡು ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತ ಮೂಲಕ ಬಿ.ಎಚ್.ರಸ್ತೆ ಮಾರ್ಗವಾಗಿ ಹೆಜ್ಜೆ ಹಾಕಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನ ತಲುಪಿದವು.

ಅಂಬಾರಿ ಹೊರಲಿದೆ ಲಕ್ಷ್ಮಿ

ಈ ಸಂದರ್ಭದಲ್ಲಿ ಮಾತನಾಡಿದ ಡಿಎಫ್‌ಐ ಅನುಪಮ, ತುಮಕೂರಿನ ಕರಿಬಸವೇಶ್ವರ ಮಠದ ಲಕ್ಷ್ಮಿ ಆನೆ 6300 ಕೆ.ಜಿ. ಇದ್ದು, ಈ ಆನೆ ಅಂಬಾರಿ ಹೊರಲಿದೆ. ತಿಪಟೂರು ಕಾಡುಸಿದ್ದೇಶ್ವರ ಮಠದ ಲಕ್ಷ್ಮಿ 3400 ಕೆ.ಜಿ. ಇದ್ದು, ಈ ಆನೆಯು ಸಹ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದೆ. ಈ ಎರಡು ಆನೆಗಳು ಯಾವುದೇ ಗಲಾಟೆ ಇಲ್ಲದೆ ರಸ್ತೆಯಲ್ಲಿ ಜನಸಂದಣಿ ಮಧ್ಯೆ ಹೆಜ್ಜೆ ಹಾಕಿವೆ ಎಂದರು.

ಈ ಆನೆಗಳು ಈಗಾಗಲೇ ಜನಸಂದಣಿಗೆ ಹೊಂದಿಕೊಂಡಿರುವುದರಿಂದ ನಮಗೂ ತಾಲೀಮು ನಡೆಸಲು ಸುಲಭವಾಗಿದೆ. ಈ ಎರಡು ಆನೆಗಳು ಸ್ನೇಹಿತರಾಗಿರುವುದರಿಂದ ಯಾವುದೇ ರೀತಿ ಪ್ರತಿರೋಧ ತೋರದೆ ಶಾಂತವಾಗಿ ವರ್ತಿಸುತ್ತಿವೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನೂ ಓದಿ | Navaratri Dandiya 2024: ನವರಾತ್ರಿ ಸೆಲೆಬ್ರೇಷನ್‌‌‌ನಲ್ಲಿ ದಾಂಡಿಯಾ ಮೇನಿಯಾ

ಪಶು ವೈದ್ಯ ಡಾ. ಶ್ರೀಧರ್ ಮಾತನಾಡಿ, ತುಮಕೂರು ದಸರಾ ಜಂಬೂಸವಾರಿಗೆ ಎರಡು ಆನೆಗಳನ್ನು ಬಳಸಿಕೊಳ್ಳುತ್ತಿದ್ದು, ಈ ಎರಡು ಆನೆಗಳ ಆರೋಗ್ಯವಾಗಿವೆ. ಯಾವುದೇ ರೀತಿಯ ತೊಂದರೆಯಿಲ್ಲ. ಈ ಆನೆಗಳು ಮೊದಲಿನಿಂದಲೂ ಮಠಗಳಲ್ಲಿ ಹಾಗೂ ಜನರೊಂದಿಗೆ ಬೆರೆತಿರುವುದರಿಂದ ತಾಲೀಮು ಸಲೀಸಾಗಿ ನಡೆದಿದೆ ಎಂದರು. ತಾಲೀಮು ವೇಳೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.