Saturday, 14th December 2024

Tumkur News: ವಿಷಮುಕ್ತ ಆಹಾರ ಬೆಳೆಯುವವನು ನಿಜವಾದ ರೈತ-ಸಿದ್ಧಲಿಂಗ ಸ್ವಾಮೀಜಿ

ತುಮಕೂರು: ರಾಸಾಯನಿಕ ಕೃಷಿಯ ಮೂಲಕ ಒಂದು ಎಕರೆಯಲ್ಲಿ ಐವತ್ತು ಕ್ವಿಂಟಾಲ್ ಭತ್ತ ಬೆಳೆದವ ಪ್ರಗತಿಪರ ರೈತನಲ್ಲ. ಸ್ವಾಭಾವಿಕ ಗೊಬ್ಬರಗಳನ್ನು ಬಳಸಿ,ಜನರಿಗೆ ವಿಷಮುಕ್ತ ಆಹಾರ ನೀಡುವವನೇ ನಿಜವಾದ ರೈತ. ಈ ನಿಟ್ಟಿನಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮ ಒಂದು ದೊಡ್ಡ ಪವಾಡವನ್ನೇ ಸೃಷ್ಟಿಸಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು.

ಗಾಂಧಿ ಸಹಜ ಬೇಸಾಯ ಆಶ್ರಮದವತಿಯಿಂದ ಕೇಂದ್ರ ಸರಕಾರ ಸುಪ್ರಿಂಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ದೊಡ್ಡ ಹೊಸೂರಿನಲ್ಲಿ ಹಮ್ಮಿಕೊಂಡಿರುವ ದೊಡ್ಡ ಹೊಸೂರು ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಕೃಷಿ ಎಂಬುದು ಒಂದು ದಿನಕ್ಕೆ ಫಲಕೊಡುವಂತಹದ್ದಲ್ಲ.ಕೃಷಿಯಲ್ಲಿ ಭೂಮಿಯ ಫಲವತ್ತತೆಯ ಜತೆಗೆ,ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಮೂಲಕ ಸಾಲ ರಹಿತ ಕೃಷಿಕರನ್ನು ಸೃಷ್ಟಿಸುವುದೇ ಮೂಲ ಉದ್ದೇಶವಾಗಬೇಕು ಎಂದರು.

ಸತ್ಯಾಗ್ರಹವೆಂಬುದು ಕೆಟ್ಟದು ಬೇಡ ಎಂದು ನಡೆಸುವ ಚಳವಳಿ.ಕುಲಾಂತರಿ ಬೀಜಗಳಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಹೇಳತೀರದು.ಕ್ಯಾನ್ಸರ್‌ಗೆ ಮೂಲ ಕಾರಣ ಕುಲಾಂತರಿ ತಳಿ ಎಂಬುದು ಹಲವಾರು ಸಂಶೋಧನೆ ಗಳಿಂದ ದೃಡಪಟ್ಟಿದೆ ಎಂದು ತಿಳಿಸಿದರು.

ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ,ರಾಜಕಾರಣಿಗಳಲ್ಲಿ ಭಿನ್ನಾಭಿಪ್ರಾಯ ಸಹಜ, ಆದರೆ ಕುಲಾಂತರಿ ತಳಿ ಬೀಜಗಳ ಬಗ್ಗೆ ಕೃಷಿ ವಿಜ್ಞಾನಿಗಳಲ್ಲಿಯೂ ಭಿನ್ನಾಭಿಪ್ರಾಯವಿರುವುದು ದುರಂತವೇ ಸರಿ. ಭಾರತೀಯ ಕೃಷಿಕರು ಶ್ರಮ ಸಂಸ್ಕೃತಿಯವರು.ಇಲ್ಲಿನ ಕೂಗು ವಿಧಾನಸಭೆ,ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚೆಯಾಗಬೇಕು. ಆ ಮೂಲಕ ಒಂದು ಪ್ರಬಲವಾದ ವಿರೋಧ ಸರಕಾರಕ್ಕೆ ಮುಟ್ಟಬೇಕು. ವಿಷಮುಕ್ತ ಆಹಾರ,ಸಾಲ ಮುಕ್ತ ರೈತ ನಮ್ಮ ಉದ್ದೇಶವಾಗಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು

ರಾಜ್ಯಸಭೆಯ ಮಾಜಿ ಸದಸ್ಯ ಅನಿಲ್‌ಹೆಗಡೆ ಮಾತನಾಡಿ,ಗ್ಯಾಟ್ ಒಪ್ಪಂದ ಫಲವಾಗಿ ಒಂದೊಂದೇ ಆತಂಕಕಾರಿ ಬೆಳವಣ ಗೆಗಳು ಕೃಷಿವಲಯದಲ್ಲಿ ಕಾಣುತ್ತಿವೆ.ಬಿ.ಹತ್ತಿಯನ್ನು ಎಷ್ಟೇ ತಡೆದರು ಕಳ್ಳಮಾರ್ಗದ ಮೂಲಕ ದೇಶ ಪ್ರವೇಶಿಸಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ.ಹಾಗಾಗಿ ಬಿ.ಟಿ.ಬದನೆಯನ್ನು ತಡೆಯಲು ಸಾಧ್ಯವಾಯಿತು. ಅದೇ ರೀತಿ ಕುಲಾಂತರಿ ಬೀಜ ನೀತಿಯನ್ನು ತಡೆಯುವ ಹೋರಾಟ ನಡೆಯಲಿದೆ ಎಂದರು.

ವಿಧಾನಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿ,ಯಾವುದೇ ಹೋರಾಟಕ್ಕೆ ಬೆಲೆ ಬರಬೇಕೆಂದರೆ ಒಗ್ಗಟ್ಟು ಮುಖ್ಯ.ಮನುಷ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಕುಲಾಂತರಿ ತಳಿ ಬೀಜಗಳ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರೆ ಮಾತ್ರ ಪ್ರಭಲವಾಗಿ ಬಹುರಾಷ್ಟ್ರೀಯ ಬೀಜ ಉತ್ಪಾದನಾ ಕಂಪನಿಗಳ ಈ ಹುನ್ನಾರ ತಡೆಯಲು ಸಾಧ್ಯ ಎಂದರು.

ರೈತಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ,ಆಹಾರ, ನೀರು, ಬೀಜ, ಗೊಬ್ಬರ ಇವುಗಳು ನ್ಯಾಯಾಲಯದಲ್ಲಿ ತೀರ್ಮಾನವಾಗುವಂತಹ ವಿಷಯಗಳಲ್ಲ. ಭಾರತ ಶೇ.98ರಷ್ಟು ಸಣ್ಣ ಹಿಡುವಳಿದಾರರನ್ನು ಹೊಂದಿರುವ ದೇಶ. ಇಲ್ಲಿ ಶೇ.100ರಷ್ಟು ಯಾತ್ರಿಕ ಕೃಷಿ ಸಾಧ್ಯವಿಲ್ಲ. ಕೇಂದ್ರ ಸರಕಾರ ರೈತರ ಬೇಡಿಕೆಗಳಿಂದ ನುಣುಚಿಕೊಳ್ಳುವ ಸಲುವಾಗಿ ಇಂತಹ ದುಷ್ಕೃತ್ಯಕ್ಕೆ ಮುಂದಾಗಿದೆ ಎಂದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ, ಸುಪ್ರಿಂಕೋರ್ಟು ನಿರ್ದೇಶನದಂತೆ ಕುಲಾಂತರಿ ತಳಿ ಬೀಜ ನೀತಿ ರೂಪಿಸಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ. ಆದರೆ ಇದನ್ನು ಬಳಸಬೇಕಾದ ರೈತರು, ರೈತ ಮುಖಂಡರ ಗಣನೆಗೆ ತೆಗೆದುಕೊಂಡಿಲ್ಲ. ಸಾಧಕ, ಭಾಧಕಗಳ ಕುರಿತು ಚರ್ಚೆಯನ್ನೇ ನಡೆಸದೆ, ನೀತಿ ರೂಪಿಸುವುದು ಅತ್ಯಂತ ಅಪಾಯಕಾರಿ ಬೆಳವಣ ಗೆಯಾಗಿದೆ. ಬಿಟಿ ಹತ್ತಿಯಿಂದ ನಮ್ಮ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳೇ ಮಾತನಾಡುತ್ತಿದ್ದಾರೆ. ಕುಲಾಂತರಿ ತಳಿಯ ಬಗ್ಗೆ ಸೂಕ್ತ ವಿರೋಧ ವ್ಯಕ್ತವಾಗದಿದ್ದರೆ ಕಾರ್ಪೋರೇಟ್ ಕೃಷಿ ದೇಶದ ರೈತರನ್ನು ಬಲಿ ಪಡೆಯಲಿದೆ. ನೀತಿ ರೂಪಗೊಂಡ ನಂತರ ಹೋರಾಡುವ ಬದಲು, ನೀತಿಯೇ ಬಾರದಂತೆ ತಡೆಯುವುದು ಅತ್ಯಂತ ಸೂಕ್ತ. ಹಾಗಾಗಿ ಇಂದಿನ ದೊಡ್ಡ ಹೊಸೂರು ಸತ್ಯಾಗ್ರಹ ಈ ಆಂದೋಲನದ ಆರಂಭವಷ್ಟೇ, ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

ವೇದಿಕೆಯಲ್ಲಿ ಕೃಷಿ ವಿಜ್ಞಾನಿಗಳಾದ ಡಾ.ಸಿದ್ದರಾಮೇಗೌಡ, ಡಾ.ನಾರಾಯಣಗೌಡ,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಡಾ.ಎಸ್.ನಾರಾಯಣ್, ವೆಂಕಟರಾಜು, ರವೀಶ್, ಜೆಡಿಯುನ ಕೆ.ಜಿ.ಎಲ್.ರವಿ, ರೈತ ಮುಖಂಡರು, ಯುವಜನರು ಪಾಲ್ಗೊಂಡಿದ್ದರು.

ಗಾಂಧಿ ಸಹಜ ಬೇಸಾಯ ಆಶ್ರಮದವತಿಯಿಂದ ಕುಲಾಂತರಿ ಬೀಜ ನೀತಿ ವಿರೋಧಿಸಿ ಸತ್ಯಾಗ್ರಹ ಹಮ್ಮಿಕೊಳ್ಳ ಲಾಗಿತ್ತು.

ಇದನ್ನೂ ಓದಿ: Tumkur Breaking: ಮಗನ ಸಾವಿಗೆ ನೊಂದು ತಂದೆ ಮೃತ