Saturday, 12th October 2024

Tumkur News: ಸಾಮಾಜಿಕ ಜಾಲತಾಣದ ಬಗ್ಗೆ ಮಹಿಳೆಯರು ಎಚ್ಚರಿಕೆ ವಹಿಸಬೇಕು-ನೂರುನ್ನೀಸಾ

ತುಮಕೂರು: ಮಹಿಳೆಯರ ಬದುಕಿನಲ್ಲಿ ಅಪರಿಚಿತ ವ್ಯಕ್ತಿಗಳ ಚೆಲ್ಲಾಟದಿಂದಾಗಿ ಸಾಕಷ್ಟು ಕುಟುಂಬಗಳು ಛಿದ್ರಗೊಳ್ಳುತ್ತಿವೆ. ಸಾಮಾಜಿಕ ಜಾಲತಾಣಗಳು ಹೆಚ್ಚು ಸಕ್ರಿಯವಾಗಿರುವ ಈ ಕಾಲಘಟ್ಟದಲ್ಲಿ ಪ್ರತಿ ಮಹಿಳೆಯೂ ಎಚ್ಚರದಿಂದ ತಮ್ಮ ಜವಾಬ್ದಾರಿ ನಿರ್ವಹಿಸಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿಗಳು, ನ್ಯಾಯಾಧೀಶರಾದ ನೂರುನ್ನೀಸಾ ಎಚ್ಚರಿಕೆ ನೀಡಿದರು.

ಗಾರ್ಮೆಂಟ್ಸ್ ಉದ್ಯೋಗಸ್ಥ ಮಹಿಳೆಯರಿಗಾಗಿ ಭೀಮಸಂದ್ರದ ಶ್ರೀ ಜಗನ್ಮಾಥ ವಿದ್ಯಾಪೀಠದ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುನ್ನಡೆ ಸಾಮಾಜಿಕ ಸಂಸ್ಥೆ, ಬೆಂಗಳೂರು ಇವರ ವತಿಯಿಂದ ಆಯೋಜಿಸಿದ್ದ ಒಂದು ದಿನದ ಮಹಿಳೆಯರ ಕಾನೂನು, ದೌರ್ಜನ್ಯ ಮತ್ತು ಪರಿಹಾರಗಳು ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ಪ್ರಕರಣಗಳಲ್ಲಿ ಮೂರನೇ ವ್ಯಕ್ತಿಗಳ ಪ್ರವೇಶದಿಂದ ನೆಮ್ಮದಿಯ ವಾತಾವರಣ ಇಲ್ಲವಾಗುತ್ತಿದೆ. ಅಪರಿಚಿತ ವ್ಯಕ್ತಿಗಳು ಚೆಲ್ಲಾಟವಾಡುವ ಸಾಧ್ಯತೆಗಳು ಹೆಚ್ಚು ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಎಲ್ಲರೊಂದಿಗೆ ಗೆಳೆತನ ಮಾಡುವುದು ಸರಿಯಲ್ಲ. ಈ ಬಗ್ಗೆ ಎಚ್ಚರ ವಹಿಸುವಂತೆ ಅವರು ಸಲಹೆ ನೀಡಿದರು.

ಒಂದಲ್ಲಾ ಒಂದು ರೀತಿಯಲ್ಲಿ ಮಹಿಳೆ ದೌರ್ಜನ್ಯಕ್ಕೆ ತುತ್ತಾಗುತ್ತಾಳೆ. ಮನೆಯಲ್ಲಿ ಕೌಟುಂಬಿಕ ಸಮಸ್ಯೆಗಳು ಎದು ರಾದಾಗ ಸಾಂತ್ವನ ಕೇಂದ್ರಗಳು ಅಥವಾ ಸಿಡಿಪಿಓ ಕಚೇರಿ ಭೇಟಿ ಮಾಡಬಹುದು. ಕಾನೂನಿನ ಸಮಸ್ಯೆ ಅಥವಾ ಕಲಹಗಳು ಎದುರಾದರೆ ಕಾನೂನು ಸೇವಾ ಪ್ರಾಧಿಕಾರವನ್ನು ಸಂಪರ್ಕಿಸಿ ಸಲಹೆ ಪಡೆಯಬಹುದು ಎಂದು ತಿಳಿಸಿ ದರು.

ವರದಕ್ಷಿಣೆ ವಿರೋಧಿ ವೇದಿಕೆ ಉಪಾಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಮಹಿಳೆಯರ ಮೇಲೆ ಮೌಢ್ಯ ಮತ್ತು ಸಂಪ್ರದಾಯಗಳು ಹೆಚ್ಚು ಹೇರಲ್ಪಡುತ್ತಿವೆ. ಇದರ ವಿರುದ್ಧ ಜಾಗೃತಿ ಮೂಡಿಸಬೇಕು. ಮಹಿಳೆಯರಿಗೆ ದೌರ್ಜನ್ಯ ಎದುರಾದಾಗ ಪ್ರತಿಭಟಿಸುವ ಮನೋಭಾವ ಮೂಡಬೇಕು. ಅವರಿಗೆ ಸಂಘಟನೆಗಳು ಮತ್ತು ಕಾನೂನು ಬೆನ್ನೆಲುಬಾಗಿ ನಿಲ್ಲಬೇಕು ಎಂದರು.

ವರದಕ್ಷಿಣೆ ವಿರೋಧಿ ವೇದಿಕೆ ಪ್ರಧಾನ ಕಾರ್ಯದರ್ಶಿ ಸಾ.ಚಿ.ರಾಜಕುಮಾರ ಮಾತನಾಡಿ ಕುಟುಂಬಗಳಲ್ಲಿ ಎದು ರಾಗುವ ಸಣ್ಣಪುಟ್ಟ ಸಮಸ್ಯೆಗಳಿಗೆ ಪೊಲೀಸ್ ಠಾಣೆ ಅಥವಾ ಕಾನೂನು ಕಟ್ಟಳೆಗಳ ಮೊರೆ ಹೋಗುವುದು ಅಷ್ಟು ಸಮಂಜಸವಲ್ಲ. ಸಾಂತ್ವನ ಕೇಂದ್ರ ಅಥವಾ ಪರ್ಯಾಯ ಸಂಧಾನ ಮಾರ್ಗಗಳನ್ನು ಹುಡುಕಿ ಪ್ರಕರಣ ಮೀರಿದಾಗ ಪೊಲೀಸ್ ಅಥವಾ ಕಾನೂನು ಸೇವಾ ಪ್ರಾಧಿಕಾರ ಸಂಪರ್ಕಿಸಬಹುದು ಎಂದರು.

ಮುನ್ನಡೆ ಸಾಮಾಜಿಕ ಸಂಸ್ಥೆಯ ಕಾರ್ಯದರ್ಶಿ ಯಶೋಧ ಮಾತನಾಡಿ ಸಾಧನೆಗೆ ಧೈರ್ಯವೇ ಮುಖ್ಯ ಎಂಬುದಕ್ಕೆ ನನ್ನ ಜೀವನವೇ ಒಂದು ಉದಾಹರಣೆ. ಹುಟ್ಟಿದ್ದು ಹುಳಿಯಾರು, ಬದುಕು ರೂಪಿಸಿಕೊಂಡಿದ್ದು ಬೆಂಗಳೂರಿನಲ್ಲಿ. ಈಗ ಸಾಮಾಜಿಕ ಹೋರಾಟಗಾರ್ತಿಯಾಗಿ ಬದುಕು ರೂಪಿಸಿಕೊಂಡಿದ್ದೇನೆ. ಕಾರ್ಮಿಕ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಾ ಬಂದಿದ್ದೇನೆ. ಎಲ್ಲೇ ಆಗಲಿ ಅನ್ಯಾಯವಾದಾಗ ಪ್ರತಿಭಟಿಸುವ ಧೈರ್ಯವನ್ನು ಮಹಿಳೆಯರು ತೋರಿಸ ಬೇಕು ಎಂದರು.

ಜಗನ್ಮಾಥ ವಿದ್ಯಾಪೀಠದ ಕಾರ್ಯದರ್ಶಿ ನಂಜುಂಡರಾವ್ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುನ್ನಡೆ ಸಂಸ್ಥೆಯ ಭವ್ಯ ಸ್ವಾಗತಿಸಿ, ಜ್ಯೋತಿ ವಂದಿಸಿದರು.

ಇದನ್ನೂ ಓದಿ: Tumkur Breaking: ಮಗನ ಸಾವಿಗೆ ನೊಂದು ತಂದೆ ಮೃತ