Sunday, 13th October 2024

Tumkur News: ದೊರೆಯದ ಆಂಬ್ಯುಲೆನ್ಸ್, ಬೈಕ್‌ನಲ್ಲಿ ಮಕ್ಕಳ ನಡುವೆ ಬಂತು ತಂದೆಯ ಶವ!

tumkur news

ತುಮಕೂರು: ಮೃತದೇಹವನ್ನು ಸಾಗಿಸಲು ಆಂಬ್ಯುಲೆನ್ಸ್ (Ambulance) ಸಿಕ್ಕದ ಕಾರಣ ಮೃತಪಟ್ಟಿರುವ ಅಪ್ಪನ ಶವವನ್ನ ಮಕ್ಕಳಿಬ್ಬರು ಬೈಕ್‌ನಲ್ಲಿ ಸಾಗಿಸಿದ ಮನ ಕಲಕುವ ಘಟನೆ ತುಮಕೂರು (Tumkur News) ಜಿಲ್ಲೆ ಪಾವಗಡ ತಾಲೂಕಿನ ವೈ ಎನ್ ಹೊಸಕೋಟೆ ಸಮುದಾಯ ಆರೋಗ್ಯ ಕೇಂದ್ರದ ಬಳಿ ಬುಧವಾರ ಜರುಗಿದೆ. ಇದೀಗ ಇವರು ಬೈಕ್‌ನಲ್ಲಿ ಶವ ಸಾಗಿಸುತ್ತಿರುವ ಫೋಟೋ ವೈರಲ್‌ (Viral Photo) ಆಗಿದೆ.

ವಯೋಸಹಜ ಕಾಯಿಲೆಯಿಂದ ದಳವಾಯಿ ಹಳ್ಳಿ ಗ್ರಾಮದ ಗುಡುಗುಲ್ಲ ಹೊನ್ನೂರಪ್ಪ ಎನ್ನುವ 80 ವರ್ಷದ ವ್ಯಕ್ತಿ ಅಸ್ವಸ್ಥಗೊಂಡಿದ್ದರು. ಕೂಡಲೇ ಮಕ್ಕಳು ಹೊನ್ನೊರಪ್ಪ ಅವರನ್ನು 108 ಆಂಬ್ಯುಲೆನ್ಸ್‌ನಲ್ಲಿ ವೈ.ಎನ್ ಹೊಸಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದಿದ್ದರು. ಆದರೆ ಮಾರ್ಗಮಧ್ಯದಲ್ಲೇ ಹೊನ್ನೂರಪ್ಪ ಅವರ ಜೀವ ಹೋಗಿತ್ತು.

ಮೃತ ಶರೀರವನ್ನು ಸಾಗಿಸಲು 108 ಆಂಬ್ಯುಲೆನ್ಸ್ ಸಿಬ್ಬಂದಿ ನಿರಾಕರಿಸಿದ್ದಾರೆ. ಆಂಬ್ಯುಲೆನ್ಸ್‌ನಲ್ಲಿ ಶವ ಸಾಗಿಸಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ಕೈಯಲ್ಲಿ ಹಣವಿಲ್ಲದ ಹೊನ್ನೂರಪ್ಪ ಅವರ ಮಕ್ಕಳು ವಿಧಿಯಿಲ್ಲದೆ ತಂದೆಯ ಶವವನ್ನು ಬೈಕ್‌ನಲ್ಲೇ ತೆಗೆದುಕೊಂಡು ಹೋಗಿದ್ದಾರೆ.

ಪಾವಗಡ ತಾಲೂಕು ಹಿಂದುಳಿದ ಪ್ರದೇಶವಾಗಿದ್ದು, ಇಂತಹ ಹೃದಯವಿದ್ರಾವಕ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿವೆ. ಇಲ್ಲಿ ಸಕಾಲಿಕವಾಗಿ ಸಮರ್ಪಕವಾದ ವೈದ್ಯಕೀಯ ನಿಗಾ, ಆಂಬ್ಯುಲೆನ್ಸ್‌ ವ್ಯವಸ್ಥೆ, ಆರೋಗ್ಯ ಸೇವೆ ದೊರೆಯುತ್ತಿಲ್ಲ ಎಂಬ ದೂರು ಇದೆ. ಈ ಘಟನೆ ಅದಕ್ಕೆ ಕನ್ನಡಿ ಹಿಡಿದಂತಿದೆ.