ತುಮಕೂರು: ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ 2022-23ನೇ ಸಾಲಿಗೆ ಎಫ್‌ಎಕ್ಯೂ ಗುಣಮಟ್ಟದ ಉಂಡೆ ಕೊಬ್ಬರಿಯನ್ನು ಪ್ರತಿ ಕ್ವಿಂಟಾಲ್‌ಗೆ 11,750 ರೂ. ನಂತೆ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್‌ವರೆಗೆ ಖರೀದಿ ಮಾಡಲಿದ್ದು, ಫೆಬ್ರವರಿ 2, 2023ರಿಂದ ನೋಂದಣಿ ಪ್ರಾರಂಭಿಸುವಂತೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್, ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಮಾತನಾಡಿ, ಈ ಸಂಬಂಧ 27-1-2023ರಂದು ಸರ್ಕಾರ ಆದೇಶ ಹೊರಡಿಸಿದ್ದು, ಆದೇಶ ಹೊರಡಿಸಿದ ದಿನದಿಂದ ರೈತರ ನೋಂದಣಿ ಕಾಲಾವಧಿಯನ್ನು 45 ದಿನಗಳವರೆಗೆ ನಿಗಧಿ ಗೊಳಿಸಲಾಗಿದ್ದು, ನೋಂದಣಿ ಕಾರ್ಯದೊಂದಿಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸತಕ್ಕದ್ದು ಎಂದು ಸೂಚಿಸಿದರು.
ಪ್ರತಿ ಎಕರೆಗೆ 06 ಕ್ವಿಂಟಾಲ್ ಗರಿಷ್ಟ ಪ್ರಮಾಣದಂತೆ ಪ್ರತಿ ರೈತರಿಂದ ಗರಿಷ್ಟ 20 ಕ್ವಿಂಟಾಲ್ ಕೊಬ್ಬರಿ ಖರೀದಿ ಪ್ರಮಾಣ ನಿಗಧಿಪಡಿಸಲಾಗಿದ್ದು, ಜಿಲ್ಲೆಯ ಶಿರಾ, ತಿಪಟೂರು, ಗುಬ್ಬಿ, ಚೇಳೂರು, ಕುಣಿಗಲ್, ತುಮಕೂರು, ಚಿಕ್ಕನಾಯಕನಹಳ್ಳಿ, ಹುಳಿಯಾರು, ತುರುವೇಕೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕೊಬ್ಬರಿ ಖರೀದಿಸಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ, ಬೆಂಗಳೂರು ಸಂಸ್ಥೆಯನ್ನು ರಾಜ್ಯದ ವತಿಯಿಂದ ಖರೀದಿ ಸಂಸ್ಥೆಯನ್ನಾಗಿ ನೇಮಿಸಿದ್ದು, ನಾಫೆಡ್ ಸಂಸ್ಥೆಯನ್ನು ಕೇಂದ್ರ ಸರ್ಕಾರದ ಉಂಡೆ ಕೊಬ್ಬರಿ ಖರೀದಿಸುವ ಸಂಸ್ಥೆ ಯನ್ನಾಗಿ ನೇಮಿಸಲಾಗಿದೆ ಎಂದು ತಿಳಿಸಿದರು. ರೈತರಿಂದ ಮಾತ್ರ ಉಂಡೆ ಕೊಬ್ಬರಿಯನ್ನು ಖರೀದಿಸಬೇಕು ಮತ್ತು ಬೆಂಬಲಬೆಲೆ ಯೋಜನೆ ಮಾರ್ಗಸೂಚಿ ಹಾಗೂ ಆವರ್ತನಿಧಿ ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು.
ಖರೀದಿ ಕೇಂದ್ರಗಳಲ್ಲಿ ಉಂಡೆ ಕೊಬ್ಬರಿಯನ್ನು ಖರೀದಿಸುವ ಪೂರ್ವದಲ್ಲಿ ರೈತರ ನೋಂದಣಿಯನ್ನು ಎನ್‌ಐಸಿ ಸಂಸ್ಥೆಯು ಬೆಂಬಲ ಬೆಲೆ ಯೋಜನೆ ಯಡಿ ಭತ್ತ ಮತ್ತು ರಾಗಿ ಬೆಳೆಗಳ ಉತ್ಪನ್ನ ಖರೀದಿಸಲು ಸಿದ್ಧಪಡಿಸಿರುವ ತಂತ್ರಾಂಶವನ್ನು ಸೂಕ್ತವಾಗಿ ಉನ್ನತೀಕರಿಸಿ ಉಂಡೆ ಕೊಬ್ಬರಿಯನ್ನು ಬೆಂಬಲ ಬೆಲೆ ಯೋಜನೆಯಡಿ ನೋಂದಾಯಿಸಲು ಬಳಸುವುದು ಎಂದು ಸೂಚಿಸಿದರು.
ರೈತರ ಹೆಸರಿನ ಆಧಾರ್ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಉತ್ಪನ್ನದ ಮೌಲ್ಯವು ಡಿಬಿಟಿ ಮೂಲಕ ಜಮಾ ಆಗುವಂತೆ ಪಾವತಿ ಮಾಡತಕ್ಕದ್ದು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ್ ವಾಡ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿಕುಮಾರ್, ಆಹಾರ ಇಲಾಖೆ ಉಪನಿರ್ದೇಶಕರು, ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ತುಮಕೂರು ಘಟಕ-1 ಮತ್ತು 2ರ ವ್ಯವಸ್ಥಾಪಕರು, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.