ತುಮಕೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳನ್ನು ಅರ್ಹ ಜನರಿಗೆ ತಲುಪಿಸಬೇಕೆಂದು ಸಂಸದ ಜಿ.ಎಸ್.ಬಸವರಾಜು ಹೇಳಿದರು.
ನಗರದ ಸ್ನೇಹ ಸಂಗಮ ಸಭಾಂಗಣದಲ್ಲಿ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಬೆಂಗಳೂರು ನಗರ ಹಾಗೂ ಗ್ರಾಮಾಂತರ, ದಾವಣಗೆರೆ ಮತ್ತು ಮೈಸೂರು ವಿಭಾಗದ ನಗರಸಭಾ ಸದಸ್ಯರ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದರು, ಜನಪ್ರತಿನಿಧಿಗಳು ಜನರೊಂದಿಗೆ ಬೆರೆಯಬೇಕು, ಅವರ ಸಮಸ್ಯೆಗಳನ್ನು ತಿಳಿದು ಸರ್ಕಾರದ ಗಮನಕ್ಕೆ ತಂದು ಬಗೆಹರಿಸುವ ಮೂಲಕ ಜನರ ಪ್ರೀತಿಗಳಿಸಿ, ಉತ್ತಮ ನಾಯಕರಾಗಿ ಬೆಳೆಯಲು ಅವಕಾಶ ವಿದೆ ಎಂದರು.
ಜನಪ್ರತಿನಿಧಿಗಳು ಜನರೊಂದಿಗೆ ಬೆರೆತು ಕೆಲಸ ಮಾಡಿ, ಅವರ ವಿಶ್ವಾಸ ಗಳಿಸಿಕೊಂಡರೆ ಮುಂದಿನ ಚುನಾವಣೆಗಳನ್ನು ಪಕ್ಷ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲು ಅವಕಾಶವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿನಿಧಿಗಳು ಕಾಳಜಿಯಿಂದ ಕೆಲಸ ಮಾಡಬೇಕು ಎಂದರು.
ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಂಚಾಲಕ ವೈ.ಕುಮಾರ್ ಮಾತನಾಡಿ, ರಾಜ್ಯದ ವಿವಿಧ ಜನಪ್ರತಿನಿಧಿಗಳಿಗೆ ಬಿಜೆಪಿಯಿಂದ ಇಂತಹ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಮಾಡಲಾಗುತ್ತಿದೆ. ಇದೂವರೆಗೆ ಸುಮಾರು ಹತ್ತು ಸಾವಿರ ಪ್ರತಿನಿಧಿಗಳು ಇದರ ಪ್ರಯೋಜನ ಪಡೆದಿದ್ದಾರೆ. ಸದಾ ಜನರ ಸಂಪರ್ಕದಲ್ಲಿ ರುವ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಕಾರ್ಯ ಜವಾಬ್ದಾರಿಯೂ ಹೆಚ್ಚಾಗಿರುತ್ತದೆ ಹಾಗೂ ಜನಸಂಪರ್ಕ ಅವರಿಗೆ ಸಿಕ್ಕಿರುವ ಅವಕಾಶ ಕೂಡಾ, ಜನರೊಂದಿಗೆ ಸ್ಪಂದಿಸಿ ಕೆಲಸ ಮಾಡಿ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರಶಿಕ್ಷಣ ಪ್ರಕೋಷ್ಟದ ರಾಜ್ಯ ಸಂಚಾಲಕ ಶ್ರೀಕಾಂತ ಕುಲಕರ್ಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಎಂ.ಬಿ.ನಂದೀಶ್, ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಮಧುಗಿರಿ ಜಿಲ್ಲಾ ಅಧ್ಯಕ್ಷ ಬಿ.ಕೆ.ಮಂಜುನಾಥ್, ಮುಖಂಢ ದಿಲೀಪ್‌ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎಚ್.ಟಿ.ಭೈರಪ್ಪ, ವಕ್ತಾರ ಜೆ.ಜಗದೀಶ್, ಟಿ.ಆರ್.ಸದಾಶಿವಯ್ಯ, ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೇದಮೂರ್ತಿ, ರೈತ ಮೋರ್ಚಾ ನಗರ ಅಧ್ಯಕ್ಷ ಸತ್ಯಮಂಗಲ ಜಗದೀಶ್ ಮತ್ತಿತರರು ಹಾಜರಿದ್ದರು.
ಮೂರು ವಿಭಾಗ ಮಟ್ಟದ ಜಿಲ್ಲೆಗಳ ಸಂಸ್ಥೆಗಳ ನಗರಸಭಾ ಸದಸ್ಯರು ಪ್ರಶಿಕ್ಷಣ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿಷಯ ಪರಿಣಿತರು ವಿವಿಧ ವಿಚಾರಗಳ ಬಗ್ಗೆ ಮಾಹಿತಿ ನೀಡಿದರು.