Friday, 13th December 2024

ರಾಜ್ಯಪಾಲರ ನಡೆ : ಜಿಲ್ಲಾ ಕಾಂಗ್ರೆಸ್ ಖಂಡನೆ

ಗ್ರಾಮಾಂತರ ಕಾರ್ಯಕರ್ತರ ಪ್ರತಿಭಟನೆ
ತುಮಕೂರು: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಯನ್ನು ಖಂಡಿಸಿ ನಗರ ಕಾಂಗ್ರೆಸ್ ಘಟಕದ ವತಿಯಿಂದ ಇಕ್ಬಾಲ್ ಅಹಮದ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ತುಮಕೂರು ಗ್ರಾಮಾಂತರದಲ್ಲಿ ಮಾಜಿ ಶಾಸಕ ಗೌರೀಶಂಕರ್ ನೇತೃತ್ವದಲ್ಲಿ  ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ , ಅನುಮತಿ ವಾಪಸ್ ಪಡೆಯುವಂತೆ ಮನವಿ ಸಲ್ಲಿಸಿದರು.
ನಗರದ ಜಿ.ಜಿ.ಎಸ್ ವೃತ್ತದಲ್ಲಿ ಸಮಾವೇಶಗೊಂಡ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ರಾಜ್ಯಪಾಲರ ವಿರುದ್ದ ಘೋಷಣೆ ಕೂಗತ್ತಾ, ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ ಹಿಂಪಡೆಯುವ0ತೆ ಒತ್ತಾಯಿಸಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯ ನಂತರ  ಕೆಪಿಸಿಸಿ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಸಿದ್ದರಾಮಯ್ಯ ಓರ್ವ ಜನಾನುರಾಗಿ ಮುಖ್ಯಮಂತ್ರಿ ಸರ್ಕಾರದ ಯೋಜನೆಗಳ ಮೂಲಕ ಎಲ್ಲಾ ತಳಸ್ತರದ ಜನರಿಗೆ ಅನುಕೂಲ ಕಲ್ಪಿಸಿ, ನಾಡಿನ ಅಭಿವೃದ್ದಿಯಲ್ಲಿ ಅವರು ಸಹ ಪಾಲುದಾರರಾಗುವಂತೆ ಮಾಡಿದ್ದರು. ಇದನ್ನು ಸಹಿಸದ ಕೆಲವರು ಕುತಂತ್ರ ಮಾಡಿ ೨೦೨೧-೨೨ ರಲ್ಲಿ ಬಿಜೆಪಿ ಪಕ್ಷದವರೆ ಅಧಿಕಾರದಲ್ಲಿದ್ದಾಗ ಹಂಚಿಕೆ ಮಾಡಿದ ಮುಡಾ ಬದಲಿ ನಿವೇಶನ ಹಂಚಿಕೆ ಮಾಡಿ, ಈಗ ಮುಖ್ಯಮಂತ್ರಿಗಳ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ. ಕೂಡಲೇ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿ
ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಮಾಜಿ ಶಾಸಕ ಡಾ.ಎಸ್.ರಫೀಕ್ ಅಹಮದ್ ಮಾತನಾಡಿ, ೨೦೨೩ ರಲ್ಲಿ ಅಪಾರ ಜನ ಬೆಂಬಲದೊ0ದಿಗೆ ಅಧಿಕಾರಕ್ಕೆ ಬಂದು ಎರಡನೆಯ ಬಾರಿಗೆ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಪಕ್ಷ  ಜನರಿಗೆ ನೀಡಿದ್ದ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಬಡವರು, ದೀನದಲಿತರು, ಅಲ್ಪಸಂಖ್ಯಾತರಿಗೆ ಹೆಚ್ಚಿನ ಅನುಕೂಲ ಮಾಡಿದರು. ಇದರಿಂದ ಹತಾಶೆಗೊಂಡ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಕಾಲದಲ್ಲಿ ಆಗಿರುವ ಹಗರಣವನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಲು ಮುಂದಾಗಿದೆ.  ಈ ಬಾರಿ ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯ ಅವರ ಪರ ನಿಲ್ಲಲಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಹಾಗೂ ಜಿ.ಪಂ. ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಒಂದು ಸ್ಥಿರ ಸರ್ಕಾರವನ್ನು ಅಸ್ಥಿರಗೊಳಿ ಸಲು ಬಿಜೆಪಿ-ಜೆಡಿಎಸ್ ಪಕ್ಷಗಳು ರಾಜಕೀಯ ಅಸ್ತçವಾಗಿ ರಾಜ್ಯಪಾಲರ ಕಚೇರಿಯನ್ನು ದುರುಪಯೋಗ ಪಡಿಸಿಕೊಂಡು ಇನ್ನಿಲ್ಲದ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂಬ0ಧ ಮನವಿಯನ್ನು ತಹಶಿಲ್ದಾರ್ ಸಿದ್ದೇಶ್ವರ್‌ರವರಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಸ್. ಷಫಿ ಅಹಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಪಾಲಿಕೆ ಮಾಜಿ ಸದಸ್ಯರಾದ ಇನಾಯತ್, ನಯಾಜ್ ,ಎನ್. ಮಹೇಶ್. ನಿಖೇತರಾಜ್ ಮೌರ್ಯ, ಮಾಜಿ ಮೇಯರ್ ಪ್ರಭಾವತಿ ಸುಧೀಶ್ವರ್, ಗುರುಪ್ರಸಾದ್ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.
ಗ್ರಾಮಾಂತರದಲ್ಲಿ ಬೃಹತ್ ಪ್ರತಿಭಟನೆ 
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಕೈಗೊಂಡಿರುವ ಕ್ರಮವನ್ನು ಖಂಡಿಸಿ,  ಗ್ರಾಮಾಂತರ ಮಾಜಿ ಶಾಸಕ ಗೌರಿಶಂಕರ್ ಅವರು ನೇತೃತ್ವದಲ್ಲಿ  ನೂರಾರು ಕಾಂಗ್ರೆಸ್ ಕಾರ್ಯಕರ್ತರು ಹೆಬ್ಬೂರಿನಿಂದ ತುಮಕೂರಿನವರೆಗೆ ಬೃಹತ್ ಬೈಕ್ ರ‍್ಯಾಲಿ ಮೂಲಕ ಬೃಹತ್ ಪ್ರತಿಭಟನೆ ನಡೆಸಿದರು.