ಜಪಾನೀಸ್ ಎನ್ಸಿಫಲಾಟಿಸ್ ವ್ಯಾಕ್ಸಿನ್ ಅಭಿಯಾನ-2022
ಕಲಬುರಗಿ: ಮೆದುಳು ಜ್ವರ ತಡೆಗಟ್ಟುವ ನಿಟ್ಟಿನಲ್ಲಿ ಡಿಸೆಂಬರ್ 5 ರಿಂದ 25ರ ವರೆಗೆ ಹಮ್ಮಿಕೊಂಡಿರುವ ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ಅಭಿಯಾನ-2022 ಅಂಗವಾಗಿ ಜಿಲ್ಲೆಯ 1-15 ವರ್ಷದ 7.12 ಲಕ್ಷ ಮಕ್ಕಳಿಗೆ ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ ಹೇಳಿದರು.
ಕಲಬುರಗಿ ನಗರದ ಕೆ.ಬಿ.ಎನ್. ವಿಶ್ವವಿದ್ಯಾಲಯ ಅಧೀನದ ಕೆ.ಬಿ.ಎನ್ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ, ಇಂಡಿಯನ್ ಪೀಡಿಯಾಟ್ರಿಕ್ ಅಸೋಸಿ ಯೇಷನ್ ಹಾಗೂ ಐ.ಎಂ.ಎ. ಸಹಯೋಗದೊಂದಿಗೆ ಜಪಾನೀಸ್ ಎನ್ಸಿಫಲಾಟಿಸ್ ವ್ಯಾಕ್ಸಿನ್ ಅಭಿಯಾನ-2022 ಕುರಿತು ಮಕ್ಕಳ ವೈದ್ಯರಿಗೆ ಆಯೋಜಿಸಿದ ದೃಷ್ಠಿಕೋನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಮಗು ಲಸಿಕೆಯಿಂದ ವಂಚಿತರಾಗಬಾರದು. ಶೇ.100ರಷ್ಟು ಲಸಿಕೆ ನೀಡಬೇಕಿದ್ದು, ಇದಕ್ಕಾಗಿ ಮಕ್ಕಳ ವೈದ್ಯರು ಸೇರಿದಂತೆ ಇನ್ನಿತರ ಎಲ್ಲಾ ಭಾಗಿದಾರರು ಇದರ ಯಶಸ್ಸಿಗೆ ಕಾರ್ಯನಿರ್ವಹಿಸ ಬೇಕೆಂದರು.
ಇತ್ತೀಚೆಗೆ ಗುಜರಾತ, ಮಹಾರಾಷ್ಟ್ರ ರಾಜ್ಯದ ಮಕ್ಕಳಲ್ಲಿ ಮೆದುಳು ಜ್ವರ ಪ್ರಕರಣ ಹೆಚ್ಚಾಗಿ ಕಂಡುಬಂದ ಕಾರಣ ರಾಜ್ಯದ ಕಲಬುರಗಿ, ಬಾಗಲಕೋಟೆ, ಗದಗ, ಹಾಸನ, ಹಾವೇರಿ, ರಾಮನಗರ, ಯಾದಗಿರಿ, ತುಮಕೂರ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ತೀವ್ರ ನಿಗಾವಹಿಸಲಾಗಿದ್ದು, ಜಪಾನೀಸ್ ಎನ್ಸಿಫಲಾಟಿಸ್ ಲಸಿಕೆ ನೀಡಲು ಅಭಿಯಾನ ಹಮ್ಮಿಕೊಂಡಿದೆ ಎಂದರು.
ಡಿ.ಹೆಚ್.ಓ ಡಾ. ರಾಜಶೇಖರ ಮಾಲಿ ಮಾತನಾಡಿ, ಜಿಲ್ಲೆಯಲ್ಲಿ ಲಸಿಕೆ ನೀಡಿಕೆಗೆ 5,525 ಸೆಂಟರ್ ಸ್ಥಾಪಿಸಿದ್ದು, 4,000 ಸಿಬ್ಬಂದಿ ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಡಿಸೆಂಬರ್ ಮೊದಲನೇ ವಾರದಲ್ಲಿ ಶಾಲಾ ಮಟ್ಟದಲ್ಲಿಯೇ ಕ್ಯಾಂಪ್ ಆಯೋಜಿಸಿ ಲಸಿಕೆ ನೀಡಲು ಮಕ್ಕಳ ವೈದ್ಯರನ್ನು, ಸಿಬ್ಬಂದಿ ಗಳನ್ನು ಶಾಲೆಗೆ ನಿಯೋಜಿಸಲಾಗುತ್ತಿದೆ. ಅಭಿಯಾನದ ಅಂಗವಾಗಿ ಒಂದು ಡೋಸ್ ನೀಡಲಾಗುತ್ತಿದ್ದು, ಇದರಿಂದ ಮಕ್ಕಳಲ್ಲಿ ರೋಗ ನಿರೋಧ ಶಕ್ತಿ ವೃದ್ಧಿಸಲಿದೆ. ಇನ್ನೂ ಆಸ್ಪತ್ರೆಯ ಓ.ಪಿ.ಡಿ.ಗೆ ಬರುವ ಮಕ್ಕಳ ಪಾಲಕರಿಗೆ ತಿಳುವಳಿಕೆ ನೀಡಿ ಲಸಿಕೆ ನೀಡುವ ಕಾರ್ಯಕ್ಕೆ ವೈದ್ಯರು ಮುಂದಾಗಬೇಕು ಎಂದರು.
ವಿಶ್ವ ಆರೋಗ್ಯ ಸಂಸ್ಥೆಯ ಸರ್ವಲೆನ್ಸ್ ಅಧಿಕಾರಿ ಡಾ. ಅನೀಲಕುಮಾರ ತಾಳಿಕೋಟಿ ಅವರು ಲಸಿಕೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸುತ್ತಾ ಮಾತನಾಡಿ, ಡಿ.5 ರಿಂದ 25ರ ವರೆಗೆ ಮೂರು ವಾರಗಳ ಕಾಲ ಲಸಿಕಾ ಅಭಿಯಾನ ನಡೆಯಲಿದೆ. ಅಭಿಯಾನದ ಅಂಗವಾಗಿ ಡಿಸೆಂಬರ್ ಮೊದಲನೇ ವಾರದಲ್ಲಿ ಶಾಲಾ ಮಟ್ಟದಲ್ಲಿ 6-15 ವರ್ಷದ (1 ರಿಂದ 10ನೇ ತರಗತಿ) 5.18 ಲಕ್ಷ ಮಕ್ಕಳಿಗೆ ಮತ್ತು 2 ಮತ್ತು 3ನೇ ವಾರದಲ್ಲಿ ಸಿ.ಹೆಚ್.ಸಿ, ಪ್ರಾಥಮಿಕ ಆರೋಗ್ಯ ಕೇಂದ್ರ, ವಸತಿ ನಿಲಯ, ಅಂಗನವಾಡಿಗಳಲ್ಲಿ ಉಳಿದ 1-6 ವರ್ಷದ 1.94 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
ಇದಕ್ಕಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದು, ವ್ಯಾಕ್ಸಿನೇಟರ್ ಗಳಿಗೆ ತರಬೇತಿ ನೀಡಲಾಗಿದೆ. ಇದಲ್ಲದೆ ದಡಾರ, ರುಬೆಲ್ಲಾವನ್ನು ಡಿಸೆಂಬರ್ 2023ಕ್ಕೆ ಎಲಿಮಿನೇಟ್ ಮಾಡಲು ಭಾರತ ಸರ್ಕಾರ ನಿರ್ಧರಿಸಿರುವ ಕಾರಣ ಸಾಮಾನ್ಯ ಲಸಿಕಾಕರಣದಲ್ಲಿ ಎಂ.ಆರ್-1, ಎಂ.ಆರ್-2 ಲಸಿಕಾಕರಣ ಶೇ.95ಕ್ಕೂ ಹೆಚ್ಚು ಗುರಿ ಸಾಧಿಸಿ ದಲ್ಲಿ ಇದು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಆರ್.ಸಿ.ಹೆಚ್ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್, ಕೆ.ಬಿ.ಎನ್. ವಿಶ್ವವಿದ್ಯಾಲಯದ ಡೀನ್ ಡಾ.ಸಿದ್ದೇಶ ಶಿರವಾರ, ಕೆ.ಬಿ.ಎನ್. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಮೊಹಮ್ಮದ್ ಮೊಯಿನುದ್ದಿನ್, ಹೆಚ್.ಓ.ಡಿ ಡಾ.ಸಿದ್ದಲಿಂಗ ಚೇಂಗಟಿ, ವೈದ್ಯರಾದ ಡಾ. ಪಿ.ಎಸ್.ಶಂಕರ, ಡಾ. ವೀರಭದ್ರಪ್ಪ, ಡಾ. ಶಂಕರ, ಡಾ. ರೋಹಿತ್ ಭಂಡಾರಿ, ಡಾ. ಸಂದೀಪ್, ಡಾ. ಗಚ್ಚಿನಮನಿ, ಡಾ. ಅನುರೂಪ ಶಹಾ ಸೇರಿದಂತೆ ಇನ್ನಿತರ ಮಕ್ಕಳ ವೈದ್ಯರು, ಕೆ.ಬಿ.ಎನ್. ವೈದ್ಯಕೀಯ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಇಂಡಿಯನ್ ಪೀಡಿಯಾಟ್ರಿಕ್ ಅಸೋಷಿಯೇಷನ್ ಅಧ್ಯಕ್ಷ ಡಾ. ವಿನೋದ ಉಪಳಾಂವಕರ್ ಸ್ವಾಗತಿಸಿ ನಿರೂಪಿಸಿದರು. ಪಿ.ಜಿ. ವಿದ್ಯಾರ್ಥಿನಿ ನವ್ಯಾ ವಂದಿಸಿದರು.