Saturday, 14th December 2024

ಮತದಾರರ ಪಟ್ಟಿ ವೀಕ್ಷಕರಿಂದ ಪ್ರಗತಿ ಪರಿಶೀಲನೆ: ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ನಿರ್ದೇಶನ 

ಕಲಬುರಗಿ: ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಜಿಲ್ಲೆಯಲ್ಲಿ ಸ್ವೀಪ್ ಚಟುವಟಿಕೆ ತೀವ್ರಗೊಳಿಸುವಂತೆ ರಾಜ್ಯದ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಕಲಬುರಗಿ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕಿ ಸಲ್ಮಾ ಕೆ. ಫಹಿಂ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಡಿ.ಸಿ.ಕಚೇರಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಅವರು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಇದೂವರೆಗೆ ಕೈಗೊಂಡ ಪ್ರತಿಯೊಂದು ಕಾರ್ಯವನ್ನು ಅಂಕ-ಸಂಖ್ಯೆಯೊಂದಿಗೆ  ಪರಿಶೀಲಿಸಿದ ಅವರು, ಜಿಲ್ಲೆಯಲ್ಲಿ ಟೋಲ್ ಫ್ರೀ ಸಂಖ್ಯೆ 1950ಗೆ ಹೆಚ್ಚಿನ ಸಂಖ್ಯೆಯಲ್ಲಿ ಕರೆ ಬರುತ್ತಿಲ್ಲ. ಇದರ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಅತ್ಯವಶ್ಯಕ ಎಂದರು.

ಮತದಾರರೆ ಸ್ವಯಂ ಮನೆಯಿಂದಲೆ ಅರ್ಜಿ ಹಾಕುವಂತೆ ವೋಟರ್ ಹೆಲ್ಪ್ ಲೈನ್ ತಂತ್ರಾಂಶದ ಬಗ್ಗೆ ಹೆಚ್ಚಿನ ಅರಿವು ಮೂಡಿಸ ಬೇಕು. ಈ ಕುರಿತು ಅಲ್ಲಲ್ಲಿ ಪೋಸ್ಟರ್ ಅಂಟಿಸಬೇಕು. ಇದಲ್ಲದೆ ಸ್ವೀಪ್ ಅರಿವಿಗೆ ವಿಭಿನ್ನ ಕಾರ್ಯಕ್ರಮ ಆಯೋಜಿಸು ವಂತೆಯೂ ಸಲಹೆ ನೀಡಿದರು.

ಡಿ.ಸಿ. ಯಶವಂತ ವಿ. ಗುರುಕರ್ ಮಾತನಾಡಿ, ಕರಡು ಮತದಾರರ ಪಟ್ಟಿ ಪ್ರಕಟಣೆ ನಂತರ (ನ.9) ಇಂದಿನ ವರೆಗೆ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 38,512 ಹೊಸದಾಗಿ ಮತದಾರರ ಪಟ್ಟಿ ಸೇರ್ಪಡೆಗೆ ಅರ್ಜಿ ಬಂದಿವೆ. ಇದರಲ್ಲಿ 18-19 ವರ್ಷದ 17,226 ಯುವ ಮತದಾರರಿದ್ದಾರೆ. ವಿಶೇಷವಾಗಿ ಯುವ ಮಹಿಳಾ ಮತದಾರರನ್ನು ಪಟ್ಟಿಗೆ ಸೇರ್ಪಡೆ ಗೊಳಿಸಲು ಹೆಚ್ಚಿನ ಒತ್ತು ನೀಡಲಾ ಗಿದೆ.

34,533 ಡಿಲಿಟ್ ಮಾಡಿದ್ದು, ತಿದ್ದುಪಡಿ, ವರ್ಗಾವಣೆ ಕೋರಿ 7,477 ಅರ್ಜಿ ಸಲ್ಲಿಕೆ ಯಾಗಿವೆ. ಬಿ.ಎಲ್.ಓ.ಗಳು ಮನೆ-ಮನೆಗೆ ತೆರಳಿ ದಾಖಲೆಗಳನ್ನು ಪಡೆದು ಗರುಡಾ ತಂತ್ರಾಂಶದ ಮೂಲಕ ಸ್ಥಳದಲ್ಲಿಯೇ ಅರ್ಜಿ ಅಪ್ಲೋಡ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಆಧಾರ್ ಸಂಖ್ಯೆಗೆ ವೋಟರ್ ಐ.ಡಿ ಲಿಂಕ್ ಕಾರ್ಯ ಶೇ.63ರಷ್ಟಾಗಿದೆ ಎಂದು ಮಾಹಿತಿ ನೀಡಿದರು.

ಬಿ.ಎಲ್.ಓ. ಗಳಿಗೆ ಚುನಾವಣಾ ಆಯೋಗದ ನಿರ್ದೇಶನದಂತೆ ಕಿಟ್ ಬ್ಯಾಗ್ ನೀಡಬೇಕು ಎಂದು ಮತದಾರರ ಪಟ್ಟಿ ವೀಕ್ಷಕಿ ಸಲ್ಮಾ ಕೆ. ಫಹಿಂ ಅವರು ಡಿ.ಸಿ.ಗೆ ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ.ಗಿರೀಶ್ ಡಿ. ಬದೋಲೆ ಮಾತನಾಡಿ, ಕರಡು ಮತದಾರರ ಪಟ್ಟಿ ಪ್ರಕಟವಾದ ಕೂಡಲೆ ಸ್ವೀಪ್ ಭಾಗವಾಗಿ ಕಲಬುರಗಿ ನಗರದಲ್ಲಿ ಬೃಹತ್ ಜಾಥಾ ಆಯೋಜಿಸಿದೆ. ಇದಲ್ಲದೆ ಶಾಲಾ ಮಕ್ಕಳಿಂದ ರಂಗೋಲಿ, ಚಿತ್ರಕಲಾ ಸ್ಪರ್ಧೆ ಸಹ ಆಯೋಜಿಸಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಸ್ವೀಪ್ ಚಟುವಟಿಕೆ ನಡೆದಿವೆ ಎಂದರು.

ಸಭೆಯಲ್ಲಿ ಸಹಾಯಕ ಆಯುಕ್ತರಾದ ಮಮತಾ ಕುಮಾರಿ, ಕಾರ್ತಿಕ್ ಸೇರಿದಂತೆ ತಾಲೂಕಿನ ತಹಶೀಲ್ದಾರರು ಇದ್ದರು.

ಇ.ವಿ.ಎಂ. ವೇರ್ ಹೌಸ್ ವೀಕ್ಷಣೆ, ಪಾಲಿಕೆಗೆ ಭೇಟಿ: ಡಿ.ಸಿ.ಕಚೇರಿ ಆವರಣದಲ್ಲಿರುವ ಇ.ವಿ.ಎಂ. ವೇರ್ ಹೌಸ್ ಗೆ ಮತದಾರರ ಪಟ್ಟಿ ವೀಕ್ಷಕಿ ಸಲ್ಮಾ ಕೆ. ಫಹೀಂ ಭೇಟಿ ನೀಡಿ ವೀಕ್ಷಿಸಿದರು. ನಂತರ ಡಿ.ಸಿ. ಯಶವಂತ ವಿ. ಗುರುಕರ್, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ಗಿರೀಶ್ ಡಿ. ಬದೋಲೆ, ಸಹಾಯಕ ಆಯುಕ್ತೆ ಮಮತಾ ಕುಮಾರಿ ಅವರೊಂದಿಗೆ ಪಾಲಿಕೆ ಕಚೇರಿಗೆ ಭೇಟಿ ನೀಡಿ ಪರಿಷ್ಕರಣೆ ಕಾರ್ಯ ಕುರಿತು ಕಲಬುರಗಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಕ್ರಮವಾಗಿ ಸಾವಿತ್ರಿ ಸಲಗರ್, ಶ್ರೇಯಾಂಕಾ ಅವರಿಂದ ಮಾಹಿತಿ ಪಡೆದರು.