Friday, 20th September 2024

ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್; ಏಳನೇ ಆವೃತ್ತಿ ಉದ್ಘಾಟನೆ

• ʼಗಡಿಗಳನ್ನು ಮೀರಿದʼ ಪರಿಕಲ್ಪನೆಯ ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್‌ನ ಏಳನೇ ಆವೃತ್ತಿಯನ್ನು ಬೆಂಗಳೂರಿನ ವೈಟ್‌ಫೀಲ್ಡ್‌ನ ʼವಿಆರ್‌ ಬೆಂಗಳೂರುʼನಲ್ಲಿ ಶುಕ್ರವಾರ ಉದ್ಘಾಟಿಸಲಾಯಿತು

ಬೆಂಗಳೂರು: ಯುಜ್ ಆರ್ಟ್ಸ್ ಫೌಂಡೇಷನ್‌ ಬೆಂಬಲದ ಸಾರ್ವಜನಿಕ ಕಲಾ ಉತ್ಸವ ʼವೈಟ್‌ಫೀಲ್ಡ್‌ ಆರ್ಟ್‌ ಕಲೆಕ್ಟಿವ್‌ʼ ನ ಏಳನೇ ಆವೃತ್ತಿಯನ್ನು ಶುಕ್ರವಾರ (ಏಪ್ರಿಲ್‌ 5) ಇಲ್ಲಿ ಉದ್ಘಾಟಿಸಲಾಯಿತು. ಈ ಕಲಾ ಉತ್ಸವದ ʼಗಡಿಗಳನ್ನು ಮೀರಿದʼ ಪರಿಕಲ್ಪನೆಯು, ಕಲಾವಿದರ ದೃಷ್ಟಿ, ಕಲ್ಪನೆ ಮತ್ತು ಕಲಾತ್ಮಕ ಪ್ರತಿಭೆಯನ್ನು ಪ್ರತಿಬಿಂಬಿಸುವ ನವೀನ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ರಚಿಸಲು ಪ್ರೇರೇಪಿಸುತ್ತದೆ. ಒಂದು ತಿಂಗಳ ಕಾಲ ನಡೆಯುವ ಈ ಉತ್ಸವವನ್ನು ಖ್ಯಾತ ಕೊಳಲು ವಾದಕ ಮತ್ತು ಎರಡು ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ಪಂಡಿತ್‌ ಪ್ರವೀಣ್ ಗೋಡ್ಖಿಂಡಿ ಅವರು ಉದ್ಘಾಟಿಸಿದರು.

‘ಕಲಾ ಕಾರ’ ಅನಾವರಣ ಹಾಗೂ ಸಾಂಪ್ರದಾಯಿಕ ದೀಪ ಬೆಳಗಿಸುವ ಕಾರ್ಯಕ್ರಮದೊಂದಿಗೆ ಸಮಾರಂಭ ಆರಂಭವಾಯಿತು. ಅದರ ನಂತರ ವಿವೃತ್ತಿ ಡ್ಯಾನ್ಸ್ ಕಂಪನಿಯ ಕಲಾವಿದರ ‘ಸಂಗಮಂ’ ಶೀರ್ಷಿಕೆಯ ಸಮ್ಮೋಹನಗೊಳಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ ಮತ್ತು ಪಂಡಿತ್‌ ಪ್ರವೀಣ್‌ ಗೋಡ್ಖಿಂಡಿ ಅವರ ಕೊಳಲು ವಾದನವು ಕೇಳುಗರನ್ನು ಹೊಸ ಭಾವಲೋಕಕ್ಕೆ ಕರೆದುಕೊಂಡು ಹೋಯಿತು.

ಉತ್ಸವದಲ್ಲಿ 100ಕ್ಕೂ ಹೆಚ್ಚು ಕಲಾ ಸ್ಥಾಪನೆಗಳು, ಶಿಲ್ಪಗಳು, ವರ್ಣಚಿತ್ರಗಳು ಮತ್ತು ಛಾಯಾಚಿತ್ರಗಳನ್ನು ಪ್ರದರ್ಶಿಸಲಾಗು ತ್ತದೆ. ಕಲಾ ಸ್ಥಾಪನೆಗಳನ್ನು (ಆರ್ಟ್‌ ಇನ್‌ಸ್ಟಾಲೇಷನ್ಸ್‌) ಕರ್ನಾಟಕ ಚಿತ್ರಕಲಾ ಪರಿಷತ್ತು, ಬೆಂಗಳೂರು ಸ್ಕೂಲ್ ಆಫ್ ಡಿಸೈನ್ ವಿದ್ಯಾರ್ಥಿಗಳು ಮತ್ತು ಇತರ ಹಿರಿಯ ಕಲಾವಿದರು ಸಿದ್ಧಪಡಿಸಿದ್ದಾರೆ.

ಯುನೆಸ್ಕೊ ಮತ್ತು ಐಕಾನಿಕ್ ವುಮೆನ್ ಪ್ರಾಜೆಕ್ಟ್‌ನಂತಹ ಸಂಸ್ಥೆಗಳ ಜೊತೆಗೆ ಸಾರಾ ಅರಕ್ಕಲ್ ಗ್ಯಾಲರಿ ಮತ್ತು ರೆಡ್ ಲೈನ್ ಗ್ಯಾಲರಿ- ವೈಟ್‌ಫೀಲ್ಡ್ ಆರ್ಟ್ ಕಲೆಕ್ಟಿವ್ ಜೊತೆಗೆ ಕೈಜೋಡಿಸಿವೆ. ಕಲಾ ಕಾರ್ ಅನ್ನು ಬಹುಬಗೆಯ ಕಲಾವಿದ ಪ್ರದೀಪ್ ಕುಮಾರ್ ಅವರ ಸಹಯೋಗದೊಂದಿಗೆ ರಚಿಸಲಾಗಿದೆ.