Wednesday, 11th December 2024

Yash Shetty: ಯಶ್ ಶೆಟ್ಟಿ ಅಭಿನಯದ ನೂತನ ಚಿತ್ರದ ಶೀರ್ಷಿಕೆ ಅನಾವರಣ

Yash Shetty

ಬೆಂಗಳೂರು: ತಮ್ಮ ಅಮೋಘ ಅಭಿನಯದ ಮೂಲಕ ಜನರ ಮನ ಗೆದ್ದಿರುವ ಯಶ್ ಶೆಟ್ಟಿ (Yash Shetty) ನಾಯಕರಾಗಿ ನಟಿಸಿರುವ ನೂತನ ಚಿತ್ರದ ಶೀರ್ಷಿಕೆಯನ್ನು ನಿರ್ದೇಶಕ ಸಿಂಪಲ್ ಸುನಿ ಅನಾವರಣ ಮಾಡಿದರು. ನಂತರ ಸುನಿ ಹಾಗೂ ಚಿತ್ರತಂಡದವರು ಮಾತನಾಡಿದರು.

ʼಜಂಗಲ್‌ ಮಂಗಲ್‌ʼ (Jangal Mangal Movie) ಎಂಬ ಟೈಟಲ್‌ನ ಈ ಚಿತ್ರವು ಅರೆ ಮಲೆನಾಡಿನ ಕಾಡಿನಲ್ಲಿ ನಡೆಯುವ ಕಥೆ. ಅರೆ ಮಲೆನಾಡು ಎಂದರೆ ಘಟ್ಟದ ಮೇಲೆ ಹಾಗೂ ಘಟ್ಟದ ಕೆಳಗೆ ಎರಡು ಸಂಧಿಸುವ ಊರು. ಅಲ್ಲಿ ವಿವಿಧ ಸಂಸ್ಕೃತಿಯ ಜನರು ಇರುತ್ತಾರೆ. ಅಲ್ಲೊಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ನಡೆಯುವ ಪ್ರೇಮಕಥೆಯೂ ಈ ಚಿತ್ರದಲ್ಲಿದೆ‌. ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಚಿತ್ರೀಕರಣ ಸುಬ್ರಹ್ಮಣ್ಯದ ಬಳಿಯ ಕಾಡಿನಲ್ಲೇ ನಡೆದಿದೆ. ಯಶ್ ಶೆಟ್ಟಿ ನಾಯಕನಾಗಿ, ಹರ್ಷಿತಾ ರಾಮಚಂದ್ರ ನಾಯಕಿಯಾಗಿ ಹಾಗೂ ಉಗ್ರಂ ಮಂಜು, ಬಲ ರಾಜವಾಡಿ ಮುಂತಾದವರು ಪ್ರಮುಖ ಪಾತ್ರದಲ್ಲಿದ್ದಾರೆ.

ಪುತ್ತೂರು ಮೂಲದ ನಿರ್ದೇಶಕ ರಕ್ಷಿತ್ ಕುಮಾರ್ ಮಾತನಾಡಿ, ಸದ್ಯ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಇನ್ನೊಂದು ತಿಂಗಳಲ್ಲಿ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಇನ್ನು ನನಗೆ ಹತ್ತು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ನನಗಿರುವ ನಿರ್ದೇಶನದ ಆಸೆಗೆ ನನ್ನ ಸ್ನೇಹಿತರು ಆಸರೆಯಾದರು. ಸಹ್ಯಾದ್ರಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣವಾಗಿದ್ದು, ಸಿಂಪಲ್ ಸುನಿ ನಮ್ಮ ಸಿನಿಮಾವನ್ನು ಅರ್ಪಿಸುತ್ತಿದ್ದಾರೆ ಎಂದರು.

ನಟ ಯಶ್ ಶೆಟ್ಟಿ ಮಾತನಾಡಿ, ಈ ಚಿತ್ರಕ್ಕೆ ಕಥೆಯೇ ನಿಜವಾದ ನಾಯಕ. ನಿರ್ದೇಶಕರು ಮಾಡಿಕೊಂಡಿರುವ ಕಥೆ ಚೆನ್ನಾಗಿದೆ. ಇದು ವಿಭಿನ್ನ ಕಥೆ ಎನ್ನಬಹುದು. ಮೊದಲು ಉಗ್ರಂ ಮಂಜು ಅವರ ಪಾತ್ರ ನಾನು ಮಾಡಬೇಕಿತ್ತು. ಆನಂತರ ಬದಲಾಗಿ ನಿರ್ದೇಶಕರು ಈ ಪಾತ್ರ ನೀಡಿದರು. ಪಾತ್ರ ಹಾಗೂ ಚಿತ್ರ ಎರಡು ಚೆನ್ನಾಗಿದೆ. ತಂಡಕ್ಕೆ ಸಹಕಾರ ನೀಡುತ್ತಿರುವ ಸುನಿ ಅವರಿಗೆ ಧನ್ಯವಾದ ಎಂದರು.

ನಟಿ ಹರ್ಷಿತಾ ರಾಮಚಂದ್ರ ಮಾತನಾಡಿ, ದಿವ್ಯ ಎಂಬ ಮಧ್ಯಮ ವರ್ಗದ ಜವಾಬ್ದಾರಿಯುತ ಕರಾವಳಿ ಹೆಣ್ಣುಮಗಳ ಪಾತ್ರ ನನ್ನದು. ಈ ಹುಡುಗಿಗೆ ಜವಾಬ್ದಾರಿ ಇಲ್ಲದ ಹುಡುಗನ ಜೊತೆ ಪ್ರೀತಿ. ಒಂದು ಕಡೆ ಕುಟುಂಬ, ಮತ್ತೊಂದು ಕಡೆ ಪ್ರೀತಿ. ಈ ಎರಡರಲ್ಲಿ ನನ್ನ ಆಯ್ಕೆ ಏನು? ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂದರು.

ನಿರ್ದೇಶಕ ಸಿಂಪಲ್ ಸುನಿ ಮಾತನಾಡಿ, ನನ್ನ ಕೆಲವು ಚಿತ್ರಗಳಿಗೆ ಈ ಚಿತ್ರದ ಸಂಕಲನಕಾರ ಮಂಜು ಶೇಡ್ಗಾರ್ ಸಂಕಲನ ಮಾಡಿದ್ದಾರೆ. ಅವರಿಂದ ನನಗೆ ಈ ತಂಡದ ಪರಿಚಯವಾಯಿತು. ಈ ಚಿತ್ರಕ್ಕೆ ನಿಮ್ಮ ಸಹಕಾರವಿರಬೇಕು ಎಂದರು. ನಾನು ಸದಾ ನಿಮ್ಮ ಜೊತೆ ಇರುತ್ತೇನೆ ಎಂದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ | Mumtaz Ali Missing case: ಮುಮ್ತಾಜ್‌ ಅಲಿ ಪತ್ತೆಗಿಳಿದ ಈಶ್ವರ ಮಲ್ಪೆ ತಂಡ; ಮಹಿಳೆಯ ಬ್ಲ್ಯಾಕ್‌ಮೇಲ್‌ ಕಾರಣ?

ಸಂಕಲನಕಾರ ಮನು ಶೇಡ್ಗಾರ್ ಹಾಗೂ ಬಂಡವಾಳ ಹೂಡಿರುವ ಪ್ರಜೀತ್ ಹೆಗಡೆ ಅವರು “ಜಂಗಲ್ ಮಂಗಲ್” ಚಿತ್ರವನ್ನು ಬೆಂಬಲಿಸುವಂತೆ ಕೋರದರು.