Monday, 26th October 2020

ವೈದ್ಯರಲ್ಲಿ ದೇವರನ್ನು ಕಾಣುವ ಜನರು

ನಾಡಿಮಿಡಿತ

ವಸಂತ ನಾಡಿಗೇರ

ವೈದ್ಯೋ ನಾರಾಯಣೋ ಹರಿಃ ಈ ಮಾತನ್ನು ಆಗಾಗ ಕೇಳುತ್ತೇವೆ. ವೈದ್ಯನು ನಾರಾಯಣನ ಅಂದರೆ ದೇವರ ಸ್ವರೂಪ ಇದ್ದಂತೆ ಎಂದು ಹೇಳಲು ಇದನ್ನು ಬಳಸುತ್ತೇವೆ. ಹೀಗೆ ಹೇಳುವುದರ ಬಗ್ಗೆ, ಈ ಮಾತಿನ ಅರ್ಥದ ಬಗ್ಗೆ ಬೇರೆ ಬೇರೆ ಅಭಿಪ್ರಾಯಗಳಿವೆ.
ಆ ಇಡೀ ವಾಕ್ಯ ಹೀಗಿದೆ: ಶರೀರೆ ಜರ್ಜರಿತೇ ಭೂತೆ ವ್ಯಾಧಿಗ್ರಸ್ತ ಕಳೇಬರೆ ಔಷಧಂ ಜಾಹ್ನವೀತೋಯಂ ವೈದ್ಯೋ ನಾರಾಯಣೋ ಹರಿಃಇದರ ಅರ್ಥ: ಶರೀರವು ಹಣ್ಣಾಗಿ, ಕಾಯಿಲೆ ಪೀಡಿತವಾಗಿರುವಾಗ ಗಂಗಾಜಲವೇ ಔಷಧ, ನಾರಾಯಣನೇ ವೈದ್ಯ.

ಇದಕ್ಕೆ ನಾನಾ ಅರ್ಥಗಳನ್ನು, ನಾನಾ ಬಗೆಯ ವಿಶ್ಲೇಷಣೆಗಳನ್ನು ಮಾಡಲಾಗಿದೆ. ಆದರೆ ವೈದ್ಯರು ದೇವರ ಸಮಾನ ಎಂಬರ್ಥ ದಲ್ಲಿ ಇದನ್ನು ಹೇಳಲಾಗಿದೆ ಎಂದೇ ಭಾವಿಸಲಾಗಿದೆ. ಹೀಗಾಗಿ ಈ ಅರ್ಥವೇ ಜನಜನಿತವಾಗಿದೆ. ಇದೆಲ್ಲ ಇರಲಿ. ವೈದ್ಯರು ದೇವರ ಸಮಾನ ಎಂದರೆ ಅಥವಾ ವೈದ್ಯರಲ್ಲಿ ದೇವರನ್ನು ಕಾಣುವುದು ಎಂಬುದಕ್ಕೆ ಉದ್ದೇಶವೂ ಇದೆ. ಜನರು ಕಾಯಿಲೆ ಪೀಡಿತ ರಾದಾಗ ಅದನ್ನು ವಾಸಿ ಮಾಡಿಕೊಳ್ಳಲು ವೈದ್ಯರ ಬಳಿ ಹೋಗುವುದುಂಟು.

ಈಗಂತೂ ಡಾಕ್ಟರ್ ನಮ್ಮ ಜೀವನದ ಅವಿಭಾಜ್ಯ ಅಂಗ. ‘ನಾವು ಒಮ್ಮೆಯೂ ವೈದ್ಯರ ಬಳಿ ಹೋಗಿಲ್ಲ, ಮಾತ್ರೆ, ಇಂಜೆಕ್ಷನ್
ತೆಗೆದುಕೊಂಡಿಲ್ಲ’ ಎಂದು ಹಿಂದಿನವರು ಹೆಮ್ಮೆಯಿಂದ ಹೇಳುತ್ತಿದ್ದರು. ಆದರೆ ಈಗ ಬಹಳಷ್ಟು ಮಂದಿಗೆ ಹುಟ್ಟಿದಾಗಿನಿಂದಲೂ ಒಂದಲ್ಲ ಒಂದು ಬಗೆಯ ಕಾಯಿಲೆ. ಹೀಗಿದ್ದ ಮೇಲೆ ವೈದ್ಯರ ಬಳಿ ಹೋಗಲೇಬೇಕಲ್ಲವೆ ? ಮೊದಲಾದರೆ ಒಬ್ಬರು ಫ್ಯಾಮಿಲಿ  ಡಾಕ್ಟರ್ ಅಂತ ಇರುತ್ತಿದ್ದರು.

ಕುಟುಂಬದ ಎಲ್ಲ ಸದಸ್ಯರೂ ಅವರ ಬಳಿಗೆ ಹೋಗುತ್ತಿದ್ದರು. ಆ ವೈದ್ಯರಿಗೂ ಅವರೆಲ್ಲರ ಬಗ್ಗೆ ಗೊತ್ತಿರುತ್ತಿತ್ತು. ಹೀಗಾಗಿ ಅವರ ಬಳಿ ಹೋದರೆ ಪೂರ್ವೇತಿಹಾಸ, ದೇಹಪ್ರಕೃತಿ ಇವೆಲ್ಲವನ್ನುನೋಡಿಕೊಂಡು ಚಿಕಿತ್ಸೆ ಮಾಡುತ್ತಿದ್ದರು. ಆದರೆ ಈಗ ರೋಗಕ್ಕೊಬ್ಬ ಡಾಕ್ಟರ್. ಒಂದು ಕಣ್ಣಿಗೆ ಒಬ್ಬ ಡಾಕ್ಟರ್, ಇನ್ನೊಂದು ಕಣ್ಣಿಗೆ ಇನ್ನೊಬ್ಬ ಡಾಕ್ಟರ್ ಎಂಬುದು ಅತಿಶಯೋಕ್ತಿ ಎನಿಸಿದರೂ, ತಮಾಷೆಗಾಗಿ ಹೇಳುವ ಮಾತಾದರೂ, ಈಗಿರುವ ಸ್ಪೆಶಲಿಸ್ಟ್‌ಗಳನ್ನು ನೋಡಿದರೆ ನಮಗೆ ದಿಗಿಲಾಗುತ್ತದೆ.

ಇದರ ನಡುವೆ ನಮಗೆದುರಾಗುವ ಇನ್ನೊಂದು ಸಮಸ್ಯೆಯ ಬಗ್ಗೆ ಪ್ರಸ್ತಾಪಿಸುವುದು ಈ ಪೀಠಿಕೆಯ ಉದ್ದೇಶ. ಈಗಾಗಲೇ ತಿಳಿಸಿರು ವಂತೆ ಕಾಯಿಲೆ ಬಂದಾಗ ಅದನ್ನು ಗುಣಪಡಿಸಿಕೊಳ್ಳಲು ವೈದ್ಯರ ಮೊರೆ ಹೋಗುತ್ತೇವೆ. ಸಾಮಾನ್ಯ ಸ್ವರೂಪದ ಆರೋಗ್ಯ ಸಮಸ್ಯೆಗಳಾದರೆ ಸರಿ. ಆದರೆ ಸ್ವಲ್ಪ ಗಂಭೀರ ಸ್ವರೂಪದ್ದಾಗಿದ್ದರೆ ಸಮಸ್ಯೆ. ಅವರ ಬಳಿ ಹೋಗುವಾಗಲೇ ಅವ್ಯಕ್ತ ದುಗುಡ, ಆತಂಕ, ಭಯ – ಭೀತಿ ಮನೆ ಮಾಡಿರುತ್ತದೆ. ನನಗೆ ಏನಾಗಿದೆಯೋ, ಡಾಕ್ಟರು ಏನು ಹೇಳುತ್ತಾರೋ ಎಂಬ ಕಳವಳ, ಕಸಿವಿಸಿ.

ಆದರೆ ವೈದ್ಯರು ಪರೀಕ್ಷೆ ಮಾಡಿದ ಮೇಲೆ ಅದನ್ನು ನಮಗೆ ಯಾವ ರೀತಿಯಲ್ಲಿ ತಿಳಿಯಪಡಿಸುತ್ತಾರೆ ಎಂಬುದರ ಮೇಲೆ ಅದು ನಮ್ಮ ಮೇಲೆ ಪರಿಣಾಮ ಬೀರುವ ಪರಿಯ ನಿರ್ಧಾರವಾಗುತ್ತದೆ. ನಾನು ಕಣ್ಣು, ಹಲ್ಲು ಹೀಗೆ ಬಗೆ ಬಗೆಯ ಡಾಕ್ಟರ್ ಬಳಿಗೆ ಹೋಗಿದ್ದೇನೆ. ಹಾಗೆಂದು ನನ್ನದೇನೂ ಹೆಚ್ಚುಗಾರಿಕೆ ಇಲ್ಲ. ಸಾಕಷ್ಟು ಮಂದಿ ಹೋಗಿರುತ್ತಾರೆ. ಹಲ್ಲು ನೋವೆಂದು ಡಾಕ್ಟರ್ ಬಳಿ ಹೋದೆವು ಎಂದುಕೊಳ್ಳೋಣ. ಪರೀಕ್ಷೆ ಮಾಡಿದ ಅವರು, ‘ಯಾಕಿಷ್ಟು ತಡಮಾಡಿ ಬಂದಿರಿ ಎಂದು ಕೇಳಿದರೆ ನಮ್ಮ
ನೋವು ಮತ್ತಷ್ಟು ಉಲ್ಬಣಗೊಳ್ಳುತ್ತದೆ. ಈ ಹಲ್ಲನ್ನು ತಕ್ಷಣ ಕೀಳಬೇಕು. ಅಷ್ಟೇ ಅಲ್ಲ. ಇನ್ನೂ ನಾಲ್ಕು ಅಲುಗಾಡುತ್ತಿವೆ. ಅವೂ ಅಷ್ಟೇನೇ, ಈಗಲೇ ತೆಗಿಸ್ತೀರಾ?’ ಎಂದು ಕೇಳಿದರೆ ಏನೋ ಒಂದು ನೆಪ ಹೇಳಿ ಎಸ್ಕೇಪ್ ಆಗುತ್ತೇವೆ. ಇನ್ನೊಬ್ಬರ ಬಳಿ ಹೋದಾಗ
ಅವರ ವರ್ಷನ್ ಬೇರೆಯದೇ ಆಗಿರುತ್ತದೆ.

‘ಮಾತ್ರೆ ಕೊಡುತ್ತೇನೆ. ಕಡಿಮೆ ಆಗದಿದ್ದರೆ ಮತ್ತೆ ನೋಡೋಣ’ ಅಂದಾಗ ಏನೋ ನೆಮ್ಮದಿ. ಮೊದಲಿನ ಡಾಕ್ಟರ್ ಅವರ ಹಲ್ಲನ್ನೇ ಉದುರಿಸೋಣ ಅನ್ನುವಷ್ಟು ಕೋಪ ಬರುತ್ತದೆ. ಹಲ್ಲು ತೆಗೆದಾದ ಮೇಲೆ ಮುಂದಿನ ಪ್ರಕ್ರಿಯೆಗಳೂ ಇರುತ್ತವೆ. ಕ್ಲಿಪ್ ಹಾಕುವುದು, ಬ್ರಿಜ್, ಇಂಪ್ಲಾಂಟ್ – ಈ ಥರ ಏನೇನೋ. ಆದರೆ ಅವುಗಳನ್ನುಸಮಾಧಾನದ ರೀತಿಯಲ್ಲಿ ಹೇಳಿ ಅವರಿಗೇ ಆಯ್ಕೆ ಕೊಡುವುದು ಒಳಿತು. ಆದರೆ ಹೀಗೇ ಮಾಡಿ, ಹೀಗೆ ಮಾಡದಿದ್ದರೆ ಸಮಸ್ಯೆಯಾಗುತ್ತದೆ ಎಂದು ಹೇಳುವುದು, ಹೆದರಿದವರ ಮೇಲೆ ಕಪ್ಪೆ ಎಸೆದ
ಪರಿಸ್ಥಿತಿಯಾಗುತ್ತದೆ. ಕಣ್ಣಿನ ವಿಚಾರದಲ್ಲೂ ಹಾಗೆಯೇ. ಡಾಕ್ಟರ್ ಬಳಿ ಹೋಗಿ ಪರೀಕ್ಷೆ ಮಾಡಿದಾಗ, ‘ನಿಮಗೆ ನಂಬರ್
ಬಂದಿದೆ, ಕನ್ನಡಕ ಹಾಕ್ಕೊಬೇಕಾಗುತ್ತೆ’ ಎನ್ನುತ್ತಾರೆ.

ಇಷ್ಟು ಚಿಕ್ಕ ವಯಸ್ಸಿಗೆ ಹೇಗೆ ಇದು ಸಾಧ್ಯ. ಜತೆಗೆ ಮಕ್ಕಳಿಗೂ ಮನಸ್ಸಿರುವುದಿಲ್ಲ. ಆಯ್ತು ಎಂದು ಅಲ್ಲಿಂದ ಹೊರಬರುತ್ತೇವೆ. ಯಾವುದಕ್ಕೂ ಇರಲಿ ಎಂದು ಬೇರೊಬ್ಬರ ಬಳಿ ಹೋದರೆ ಚಾಳೀಸಿನ ಅಗತ್ಯ ಇಲ್ಲ ಎಂದು ಅವರು ತಣ್ಣಗೆ ಹೇಳಿದರೆ, ಯಾರನ್ನು ನಂಬುವುದು? ಅದೇ ರೀತಿ ಕಣ್ಣು ಪರೀಕ್ಷೆ ಮಾಡಿಸಿಕೊಂಡು ಕನ್ನಡಕದ ಅಂಗಡಿಗೆ ಹೋದಾಗ, ಬಹುತೇಕ ಕಡೆ ಅವರೂ ಒಮ್ಮೆ ಟೆಸ್ಟ್ ಮಾಡುತ್ತಾರೆ.

‘ನಿಮ್ಮದು ಈ ನಂಬರ್ ಅಲ್ಲವೇ ಅಲ್ಲ ಸರ್. ಬೇಕಾದರೆ ಇನ್ನೊಮ್ಮೆ ಡಾಕ್ಟರ್ ಬಳಿ ಹೋಗಿ ಬನ್ನಿ’ ಎಂದು ಖಡಾಖಂಡಿತವಾಗಿ ಹೇಳಿದರು. ಯಾವುದಕ್ಕೂ ಇರಲಿ ಎಂದು ಮತ್ತೊಮ್ಮೆ ಡಾಕ್ಟರ್ ಬಳಿ ಹೋದಾಗ ಮತ್ತೆ ಚೆಕ್ ಮಾಡಿ ಬೇರೆ ನಂಬರ್ ಬರೆದು ಕೊಡುವುದೇ? ಅದು ಕನ್ನಡಕದ ಅಂಗಡಿಯವನು ಹೇಳಿದ್ದೇ ಆಗಿತ್ತು. ಡಾಕ್ಟರನ್ನು ನಂಬುವುದೋ, ಇಲ್ಲ ಟೆಕ್ನೀಷಿಯನ್ನನನ್ನಾ?
ನಮ್ಮ ದೃಷ್ಟಿ ಹೇಗಾದರೂ ಇರಲಿ. ವೈದ್ಯರ ಕುರಿತಾದ ದೃಷ್ಟಿಕೋನ ಬದಲಾಗಿದ್ದಂತೂ ನಿಜ.

ಇನ್ನೊಂದು ಪ್ರಸಂಗ. ನಮ್ಮ ಬಂಧುವೊಬ್ಬರನ್ನು ಕಣ್ಣಿನ ಡಾಕ್ಟರ್ ಬಳಿ ಕರೆದೊಯ್ದಿದ್ದೆ. ‘ಪೊರೆ ಬಂದಿದೆ. ಆಪರೇಶನ್ ಮಾಡಿಸಬೇಕು’ ಎಂದರು. ಆಯಿತು ಎಂದು ಬಂದೆವು. ಸಹಜ ಉದಾಸೀನ ಇರುತ್ತಲ್ಲ. ಮತ್ತೆ ಒಂದು ವರ್ಷ ಅತ್ತಕಡೆ ತಲೆ ಹಾಕಲಿಲ್ಲ. ಪುನಃ ಹೋದಾಗ, ‘ಆಪರೇಶನ್ ಮಾಡಿಸಿ’ ಎಂದು ಹೇಳಿದರು. ಸಾಧ್ಯವಾದರೆ ಎರಡು ಮೂರು ತಿಂಗಳಲ್ಲೇ ಆದರೆ ಒಳ್ಳೆಯದು. ಅದಾಗಿಯೂ ನಾಲ್ಕೆ ದು ತಿಂಗಳು ಕಳೆದವು. ಆದರೂ ಕಣ್ಣಿನ ವಿಚಾರ. ಯಾಕೆ ನಿರ್ಲಕ್ಷ್ಯ ಎಂದು ಮತ್ತೊಮ್ಮೆ ಹೋದಾಗ ಮತ್ತೊಬ್ಬ ವೈದ್ಯರಿದ್ದರು. ಯಥಾಪ್ರಕಾರ ಮೊದಲಿನಿಂದ ತಪಾಸಣೆ. ಕೊನೆಗೆ ಆಪರೇಶನ್ ಮಾಡಿಸಿ ಎಂಬ ಸಲಹೆ.
ಅದು ಸರಿ. ಆದರೆ ಇದು ಅರ್ಜೆಂಟ್ ಇದೆಯಾ, ಯಾವಾಗ ಮಾಡಿಸಬಹುದು. ಅಥವಾ ಇನ್ನಷ್ಟು ಸಮಯ ಮುಂದೂಡಬಹುದೆ? ಎಂದು ಕೇಳಿದೊಡನೆ ಆ ಮಹಿಳಾಮಣಿ ಮೂರನೇ ಕಣ್ಣು ತೆಗೆದುಬಿಟ್ಟಿತು.

‘ಯಾವಾಗ ಬೇಕಾದರೂ ಮಾಡಿಸಿ. ಮಾಡಿಸಲು ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಿ. ಬೇಕಾದರೆ ಕಣ್ಣು ಕುರುಡಾದ ಮೇಲೆ ಬನ್ನಿ’ ಎಂದೆಲ್ಲ ಅಂಧಾದುಂಽ ಯಾಗಿ ಬಾಣ ಬಿಟ್ಟರು. ಆಯಿತು ಎಂದು ಅಲ್ಲಿಂದ ಹೊರಬಂದವರೇ ಈಗ ನಿಜವಾಗಲೂ ಎಮರ್ಜೆನ್ಸಿ
ಇರಬಹುದು ಅಂದುಕೊಂಡು ಕೌನ್ಸೆಲರ್‌ರನ್ನು ಭೇಟಿ ಮಾಡಿದೆವು. ಅಲ್ಲಿಗೂ ಬಿಡದೆ, ಇದು ಎಮರ್ಜೆನ್ಸಿನಾ ಎಂದು ಅವರನ್ನೂ ಕೇಳಿಯೇ ಬಿಟ್ಟೆವು. ಆಕೆ, ತಣ್ಣಗೆ,‘ನನ್ನ ಅನುಭವದಲ್ಲಿ ಅಂಥ ಅರ್ಜೆಂಟ್ ಏನೂ ಇಲ್ಲ’ ಎಂದಾಗ ಅವಾಕ್ಕಾದೆವು.

ಯಾವುದಕ್ಕೂ ಆಪರೇಶನ್ ಮಾಡುವ ವೈದ್ಯರನ್ನು ಭೇಟಿ ಮಾಡಿಸಿ ಎಂದಾಗ ಅವರು ಒಪ್ಪಿದರು. ಆ ಡಾಕ್ಟರನ್ನು ಕಂಡಾಗ ಸೀನ್
ಕಂಪ್ಲೀಟ್ ಚೇಂಜ್. ಆ ಕೌನ್ಸೆಲರ್ ಹೇಳಿದ್ದನ್ನೇ ಅವರೂ ಪುನರುಚ್ಚರಿಸಿದರು. ಅಂಥ ಯಾವ ತುರ್ತೂ ಇಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ ಅವರು, ಏನು ಎತ್ತ, ಏನೇನು ಪ್ರೊಸಿಜರ್ ಎಂಬಿತ್ಯಾದಿ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಶಿಕ್ಷಕರು ಪಾಠ ಮಾಡುವಂತೆ ವಿವರಿಸಿದರು. ‘ಅಲ್ಲಾ, ಆ ವೈದ್ಯರು ಹೀಗೆ ಹೇಳಿದರಲ್ಲ’ ಎಂದು ನಾವೂ ಪಟ್ಟು ಬಿಡದೆ ಕೇಳಿದಾಗ, ಅವರು
ನೀಡಿದ ವಿವರಣೆ ಕೇಳಿ ಮತ್ತಷ್ಟು ದಂಗಾಗುವ ಸರದಿ ನಮ್ಮದಾಗಿತ್ತು. ‘ನಿನ್ನೆ ಹೇಳಿದವರು ರೆಟಿನಾ ಸ್ಪೆಷಲಿಸ್ಟ್, ನಾನು ಕ್ಯಾಟ ರ‍್ಯಾಕ್ಟ್ ತಜ್ಞೆ. ಬಹುಶಃ ಅವರ ಬಳಿ ಅಂಥ ಪೇಷೆಂಟ್‌ಗಳೇ ಬಂದಿರಬಹುದು. ಹೀಗಾಗಿ ಈ ರೀತಿ ಹೇಳಿರಬಹುದು’.

ಆಗ, ಕಣ್ಣಿನಲ್ಲೂ ಕಣ್ಣು ಕಣ್ಣು ಬಿಡುವಂಥ ವಿಚಾರಗಳಿರುತ್ತವೆ ಎಂಬುದರ ಅರಿವಾಯಿತು. ನಮ್ಮ ಕಣ್ಣಂತೂ ತೆರೆಯಿತು.
ಈ ರೀತಿ, ರೋಗಿಗಳನ್ನು ಗಾಬರಿ ಬೀಳಿಸುವಂಥ ವೈದ್ಯರೂ ಇರುತ್ತಾರೆ. ಹಾಗೆಯೇ ಸಮಾಧಾನಚಿತ್ತದಿಂದ ಎಲ್ಲವನ್ನೂ ಅರಹುವ ಡಾಕ್ಟರ್‌ಗಳೂ ಇರುತ್ತಾರೆ. ಈಗಾಗಲೇ ತಿಳಿಸಿರುವಂತೆ ಸಾಮಾನ್ಯ ಆರೋಗ್ಯ ಸಮಸ್ಯೆಗಳಾದರೆ ಸರಿ. ಆದರೆ ಗಂಭೀರ ಸ್ವರೂಪದ
ಕಾಯಿಲೆಗಳಿದ್ದರೆ ರೋಗಿಗಳಿಗೆ ಅದನ್ನು ಹೇಳುವ ವಿಧಾನ ಬಹುಮುಖ್ಯವಾಗಿರುತ್ತದೆ. ಇದು ಅಪಾಯ ಎಂದು ಮುಖದ ಮೆಲೆ ಹೇಳಿಬಿಟ್ಟರೆ ನಾಳೆ ಸಾಯುವವರು ಇಂದೇ ಸಾಯಬಹುದು. ಅಳ್ಳೆದೆ ಇರುವವರ ವಿಚಾರದಲ್ಲಂತೂ ಬಹಳ ಹುಷಾರಾಗಿರಬೇಕು. ಒಂದೊಮ್ಮೆ ಕಾಯಿಲೆ ಗಂಭೀರ ಸ್ವರೂಪದ್ದಾದರೂ, ‘ಹೆದರಬೇಡಿ, ಈಗ ಇದಕ್ಕೆ ಪರಿಣಾಮಕಾರಿ ಚಿಕಿತ್ಸೆ ಇದೆ.

ನಾನು ಟ್ರೀಟ್‌ಮೆಂಟ್ ಕೊಡ್ತೇನೆ. ಧೈರ್ಯವಾಗಿರಿ’ ಎಂದರೆ ಎಷ್ಟೋ ನಿರಾಳವಾಗುತ್ತದೆ. ಹೀಗೆ, ದವಾಖಾನೆ ಅಥವಾ ನರ್ಸಿಂಗ್ ಹೋಮ್‌ಗೆ ಹೋಗುತ್ತಿದ್ದಂತೆ ಇರೋ ಬರೋ ಟೆಸ್ಟ್‌ಗಳನ್ನೆಲ್ಲ ಮಾಡಿಸಿ ದಂಗು ಬಡಿಸುವ ವೈದ್ಯರು ಒಂದು ಕಡೆ. ಇವರು ಬರೆದು ಕೊಟ್ಟ ಟೆಸ್ಟ್‌ಗಳ ಪಟ್ಟಿಯನ್ನುನೋಡಿಯೇ ಎದೆ ಅರ್ಧ ಧಸಕ್ಕೆಂದಿರುತ್ತದೆ. ಆದರೆ ವೈದ್ಯರಿಗೆ ರೋಗಿಗಳ ಈ ಡವಡವ ಅರ್ಥವಾಗ
ಬೇಕಲ್ಲ? ಅವರಿಗೇನು. ಎಲ್ಲರೂ ಒಂದೇ. ನಾವು ಹತ್ತರ ಕೂಡ ಹನ್ನೊಂದನೆಯವರು.

ಇದಕ್ಕೆ ವ್ಯತಿರಿಕ್ತವಾಗಿ ಇನ್ನೊಂದು ಕೆಟಗರಿಯ ಡಾಕ್ಟರ್ ಇರುತ್ತಾರೆ. ಅವರು ಅತಿ ಲಘುಸ್ವಭಾವದವರು. ರೋಗಿಗಳು ಕೇಳಿದರೆ,
ಕೇಳಿದ್ದಕ್ಕಷ್ಟೇ ಉತ್ತರ ಹೇಳುವಂಥವರು. ಡಾಕ್ಟ್ರೇ, ನನಗೆ ಹೀಗಾಗುತ್ತಿದೆ ಎಂದರೆ, ‘ಹೌದಾ, ಹಾಗಾದರೆ ಯಾವುದಕ್ಕೂ ಒಂದು ಟೆಸ್ಟ್ ಮಾಡಿಸಿಬಿಡಿ ನೋಡೋಣ’ ಅನ್ನುವಂಥವರು. ಕಾಯಿಲೆಯ ಬಗ್ಗೆ ಒಂದಷ್ಟು ಮಾಹಿತಿ, ಜ್ಞಾನ ಇದ್ದವರಾದರೆ ಇವು ಗಳನ್ನೆಲ್ಲ ಕೆದಕಿ ಕೇಳಬಹುದು. ಆದರೆ ಏನೂ ಗೊತ್ತಿಲ್ಲದವರಿಗೆ ವೈದ್ಯರೇ ದಿಕ್ಕಾಗಬೇಕು. ವೈದ್ಯರೆಂದರೆ ದೇವರು ಎನ್ನುವುದು ಈ ಕಾರಣಕ್ಕಾಗಿಯೇ. ಅವರ ಮೇಲೆ ಭರವಸೆ ಇಟ್ಟು, ಭಾರ ಹಾಕಿ ಬಂದ ಜನರಿಗೆ ಅವರು ಸೂಕ್ತ ಚಿಕಿತ್ಸೆಗೆ ಮುನ್ನ, ಸೂಕ್ತ ತಿಳಿವಳಿಕೆ
ಕೊಡಬೇಕಾಗುತ್ತದೆ. ರೋಗಿಗಳಲ್ಲಿ ಭರವಸೆ ಮೂಡಿಸಬೇಕಾಗುತ್ತದೆ.

ಆಶಾಭಾವವನ್ನು ಚಿಗುರಿಸಬೇಕಾಗುತ್ತದೆ. ಇಂಥ ವೈದ್ಯರು ಇಲ್ಲ ಎಂದೇನೂ ಅಲ್ಲ. ಅದಕ್ಕಾಗಿಯೇ ಅನೇಕ ಸಲ ‘ಡಾಕ್ಟರ್
ಕೈಗುಣ ಚೆನ್ನಾಗಿದೆ’ ಎಂದು ಹೇಳುವುದುಂಟು. ಬಹುಶಃ ರೋಗಿಗಳನ್ನು ನಿರ್ವಹಿಸುವ ಬಗೆಯನ್ನು ವೈದ್ಯರಿಗೆ ಶಿಕ್ಷಣದಲ್ಲಿ ಕಲಿಸಿ ರುತ್ತಾರೆ ಅನ್ನಿಸುತ್ತದೆ. ಆದರೂ ಬೇರೆ ಬೇರೆ ಮನೋಭಾವದ ವೈದ್ಯರಿದ್ದಾಗ ಬೇರೆ ಬೇರೆ ರೀತಿಯ ಪ್ರತಿಕ್ರಿಯೆ ಬರುವುದೋ ಏನೋ
ಗೊತ್ತಿಲ್ಲ. ಕಣ್ಣಿಗೊಬ್ಬರು, ಕಿವಿಗೊಬ್ಬರು, ಕೈಗೊಬ್ಬರು, ಕಾಲಿಗೊಬ್ಬರು ಡಾಕ್ಟರ್ ಆದ ಮೇಲೆ ವೈದ್ಯರು – ರೋಗಿಗಳ ಮಧ್ಯೆ ಮೊದಲಿನ ಪ್ರೀತಿ ವಿಶ್ವಾಸದ ಕೊರತೆ ಅನೇಕ ಬಾರಿ ಎದ್ದು ಕಾಣುತ್ತಿದೆ. ಹೀಗಾದಾಗ ವೈದ್ಯರಲ್ಲಿ ನಾರಾಯಣನನ್ನು ಕಾಣುವ, ಇಲ್ಲವೆ ವೈದ್ಯರನ್ನೇ ನಾರಾಯಣ ಎಂದು ಭಾವಿಸುವ ಜನರ ಸಂಖ್ಯೆಯೂ ಕಡಿಮೆಯಾಗುತ್ತದೆ.

ಕೋವಿಡ್‌ನ ಈ ಕಾಲದಲ್ಲಿ ಸುಮ್ ಸುಮ್ನೆ ಪಾಸಿಟಿವ್ ಎಂದು ಹೇಳಲಾಗುತ್ತಿದೆ ಎಂಬ ಮಾತುಗಳು ಜೋರಾಗಿ ಕೇಳಿಬರುತ್ತಿರುವ,  ಲಕ್ಷಾನುಗಟ್ಟಲೆ ಬಿಲ್ಮಾಡುವ ಕೆಲವು ಆಸ್ಪತ್ರೆಗಳ ಧೋರಣೆಯನ್ನು ಗಮನಿಸುವಾಗಲೂ, ‘ಎಲ್ಲಿ ವೈದ್ಯ ನಾರಾಯಣ’ ಎಂದು ಕೇಳಬೇಕು ಎನಿಸುತ್ತದೆ. ಅಂಥ ನಾರಾಯಣ ಸ್ವರೂಪಿ ವೈದ್ಯರ ಸಂಖ್ಯೆ ಹೆಚ್ಚಾಗಲಿ.

ನಾಡಿಶಾಸ್ತ್ರ
ವೈ ಎಂದು ಕೇಳಿದರೆ
ವೈದ್ಯರಿಗೆ ಕೋಪ
ಯೆಸ್ ಎಂದರೆ
ಜನರಿಗೆ ತಾಪ
ಇದೆಂಥ ಕೂ

Leave a Reply

Your email address will not be published. Required fields are marked *