Tuesday, 17th May 2022

ಇಲ್ಲಿ ನಾಯಿಯಾಗಿ ಜನಿಸುವುದೇ ಪುಣ್ಯ

ಡಾ.ಮಂಗಳಾ ಪ್ರಿಯದರ್ಶಿನಿ

ಅಮೆರಿಕದಲ್ಲಿ ಮನೆಗೊಂದು ಮಗು ಇರುತ್ತೊ ಇಲ್ಲವೋ ಮುದ್ದು ನಾಯಿಗಳಂತೂ ಇರಲೇ ಬೇಕು.

ಅಮೆರಿಕೆಯಲ್ಲಿ ವಾರಾಂತ್ಯ ಸಂಭ್ರಮ ಹಾಗೂ ಬೌ ಬೌ ಸಮಾವೇಶ – ನಾಯಿ ಸಮಾಗಮ. ಇದು ನಾಯಿಗಳ ಸಂತೋಷ ಕೂಟ, ಬಾರ್ಕಿಂಗ್ ಲಾಟ್ ಪಾಟಿ.
ಪಾ ಎಂದರೆ ನಾಯಿ ಅಂಗಾಲು ಎಂದರ್ಥ. ಅಮೆರಿಕನ್ನರಿಗೆ ವಾರಾಂತ್ಯ ಹಾಗೂ ಪೆಟ್‌ಗಳೆಂದರೆ ಅತೀವ ಆನಂದ. ಸಾಮಾನ್ಯವಾಗಿ ಅವರ ಸಂಭ್ರಮ  ಶುಕ್ರವಾರದ ಸಂಜೆಯಿಂದಲೇ ಸಜ್ಜುಗೊಳ್ಳುತ್ತದೆ. ಅವರಿಗೆ ಖುಷಿ ಪಡಲು ಬೇಂದ್ರೆಯವರು ಹೇಳುವಂತೆ ಕವಿ ಜೀವಕೆ ಬೇಸರ ಕಳೆಯಲು ಒಂದು ಹೂತ ಹುಣಿಸೇ ಮರ ಹೇಗೆ ಸಾಕೋ, ಹಾಗೇ ಸಂಭ್ರಮಿಸಲು ಕಾರಣಗಳನ್ನು ಹುಡುಕುತ್ತಿರುತ್ತಾರೆ. ಇವರಿಗೆ ಹೂ ಅರಳಿದರೆ ಸಂಭ್ರಮ, ಗಿಡ ಮರಗಳಲ್ಲಿ ಹಣ್ಣು ತೂಗಿ ತೊನೆದರೆ ಸಂಭ್ರವ . ಬೇಸಗೆಯಲ್ಲಿ ವಸಂತೋತ್ಸವವನ್ನು ಬಹಳ ಅದ್ಧೂರಿಯಾಗಿ ಬರಮಾಡಿ ಕೊಳ್ಳುತ್ತಾರೆ. ಈ ವಸಂತ ಪರ್ವದಲ್ಲಿ ಟ್ಯುಲಿಪ್, ಲ್ಯಾವೆಂಡರ್, ಮೆರಿಗೋಲ್ಡ, ಗುಲಾಬಿ ಹೂ ಹಬ್ಬಗಳು ಹಾಗೂ ಚೆರ್ರ‍ಿ, ಆಪಲ್, ಸ್ಟ್ರಾಬರಿ , ಫಲ ಹಬ್ಬಗಳು. ರೈತ ಮೇಳಗಳು.

ದುಬಾರಿ ಪ್ರವೇಶ ದರ

ರೈತರು ತಮ್ಮ ಬೆಳೆಗಳನ್ನು ಇಲ್ಲಿ ಪ್ರದರ್ಶಿಸುವುದಷ್ಟೇ ಅಲ್ಲದೆ ಮಾರಾಟ ಮಾಡುತ್ತಾರೆ. ಈ ಮೇಳಗಳಲ್ಲಿ ಅಗ್ಗದಲ್ಲಿ ಹೊಸ ಮಾಲು ದೊರೆಯುತ್ತದೆ ಎಂದು ಭಾವಿಸಿದರೆ ಅದು ಸುಳ್ಳು. ಬೆಲೆ ಮಾತ್ರ ಹಾಗೇ. ಈ ಮೇಳ ಗಳಲ್ಲಿ ನಮ್ಮೂರ ಕಡಲೇ ಕಾಯಿ ಪರಿಷೆ, ಧರ್ಮರಾಯನ ಕರಗದಂತೆ ಉಚಿತ ಪ್ರವೇಶವನ್ನು ನಿರೀಕ್ಷಿ ಸಲೇ ಬೇಡಿ. ದುಬಾರಿ ಟಿಕೇಟ್ಟುಗಳು. ಇಲ್ಲಿ ಯಾವುದೂ ಪುಕ್ಕಟೆಯಲ್ಲ. ಮನರಂಜನೆಗೆ ಖರ್ಚು ಮಾಡಲೇ ಬೇಕು.

ವಾರಾಂತ್ಯದಲ್ಲಿ ಅಮೇರಿಕಾದ ರಸ್ತೆಗಳ ತುಂಬ ಕಾರುಗಳ ಮೆರವಣಿಗೆ. ಕಾರುಗಳಲ್ಲಿ ಗಂಡ, ಹೆಂಡತಿ, ಮಕ್ಕಳು, ತೆರೆದ ಕಿಟಕಿಗಳಲ್ಲಿ ಮುದ್ದು ಪ್ರಾಣಿಗಳು ತಮ್ಮ ತಲೆಗಳನ್ನು ಹೊರ ಹಾಕಿ ಜೋಕಿನಿಂದ ಗಾಳಿ ಸೇವನೆ ಮಾಡುವುದನ್ನು ನೋಡುವುದೇ ಚೆನ್ನ. ಇನ್ನು ವಾಹನದ ತಲೆಯ ಮೇಲೆ ದೋಣಿಯನ್ನು ಬಿಗಿಯಾಗಿ ಕಟ್ಟಿದ್ದರೆ, ತಲೆಗೊಂದರಂತೆ ಗಂಡು, ಹೆಣ್ಣು, ಮರಿ ಸೈಕಲ್ಲುಗಳನ್ನು ಅದರೊಂದಿಗೆ ಪೇರಿಸಿರುತ್ತಾರೆ. ಪುಟ್ಟ ಕಂದಮ್ಮಗಳ ಪ್ರಾಂ, ಹಿರಿಯರು, ಅಂಗವಿಕಲರ ತಳ್ಳು ಗಾಡಿ ಗಳೂ ಸೇರಿರತ್ತವೆ. ಇನ್ನು ಇವರಿಗೆ ಯಾವುದರಲ್ಲೂ ಕಡಿಮೆಯಾಗುವಂತಿಲ್ಲ.

ನದಿ, ಸಮುದ್ರ, ಸರೋವರ ದಡದಲ್ಲೂ ಸೌಕರ್ಯಕ್ಕೆ ಧಕ್ಕೆ ಆಗದಂತೆ ಕುರ್ಚಿ, ಟೇಬಲ್ಲು, ಆಹಾರ ಪದಾರ್ಥಗಳು, ಐಸ್ ಪೆಟ್ಟಿಗೆ, ತಂಪು ಪಾನೀಯ ಹಾಗು ಮದ್ಯದ ಕ್ರೇಟುಗಳು, ಚಾದರ, ಈಜುಡುಗೆಗಳು, ಆಟದ ಸಾಮಾನುಗಳನ್ನು ಕೊಂಡೊಯ್ಯುತ್ತಾರೆ.. ಅವರ ಓಪುಗೆ, ಆಸ್ಥೆಗಳು ಬೆರಗು ಹುಟ್ಟಿಸುವಂತಹದು. ಸಾಲದೂ ಎಂಬಂತೆ ಟ್ರೈಲರ್ ಹೋಂಗಳು. ಮನೆ ಮನೆಯನ್ನೇ ಹೊತ್ತು ದಟ್ಟ ಕಾಡಿನ ನಡುವೆ ನೆಟ್ಟು ತಮ್ಮ ಆತ್ಮೀಯರೊಂದಿಗೆ ಏಕಾಂತ ಸುಖ ಅನುಭವಿಸು ತ್ತಾರೆ. ತಾನು, ತನ್ನವರು ಹಾಗು ಪ್ರಕೃತಿ.

ಹರಿಯುವ ನದಿ, ಗಡುಸಾಗಿ ನಿಂತ ಗುಡ್ಡ, ಬೆಟ್ಟ, ಉಕ್ಕುವ ಸಾಗರ, ಹಕ್ಕಿಯ ಉಲಿ, ಗಿಡ ಮರಗಳ ಮರ್ಮರ, ಪ್ರಕೃತಿ ಸಾನಿಧ್ಯವೇ ಪರಮಾತ್ಮನ ಸಾನಿಧ್ಯ ಎನ್ನುವವರು. ಇವರ ಈ ಆನಂದ ಮನೆಮಂದಿಯನ್ನೆಲ್ಲ ಒಳಗೊಳ್ಳವಂತಹದು. ವಾರಗಳ ಹಾಲುಗಂದನಿಂದ ಹಿಡಿದು ಎಳೆ ಬಾಣಂತಿ, ಭತ್ತರ ಅಜ್ಜ ಅಜ್ಜಿಯರೂ ಸೇರಿ ಕೊಳ್ಳುತ್ತಾರೆ. ಅಜ್ಜ ಅಜ್ಜಿಯರು ಈ ಸಂತೋಷವನ್ನು ಬೇಡ ಎನ್ನುವವರಲ್ಲ. ತೊಂಭತ್ತರ ಅಜ್ಜಮ್ಮ ಕೆನೆ ಬಣ್ಣದ ಲಂಗ ತೊಟ್ಟು, ಒಂಟೆಳೆ ಮುತ್ತಿನ ಸರ ಧರಿಸಿ ಕಣ್ಣಿಗೆ ತಂಪು ಕನ್ನಡಕ ಏರಿಸಿ ಸಿಂಹಾಸನದ ಮೇಲೆ ರಾಜಮಾತೆ ರಾರಾಜಿಸಿದಂತೆ ತಳ್ಳು ಗಾಡಿಯ ಮೇಲೆ ವಿರಾಜಮಾನಳಾಗಿದ್ದರೆ, ಟೀಕಾಗಿ ಸೂಟು ತೊಟ್ಟ ಹಿರಿಯಜ್ಜ ಮೇರಿಯಮ್ಮನವರ ಕಡೆಗೆ ತುಂಟ ನೋಟ ಬೀರಿ ನಿನ್ನ ಬೆಳ್ಳಿಯ ಕೂದಲಂದ, ನನ್ನ ಕಣ್ಣಿಗದೇನು ಚಂದ, ಮೂಡ ಬೆಳ್ಳಿಯ ಥಳಕು ಮಂದ, ನನ್ನ ಮೇರಿ ಎಂದು ಶ್ರೀಯವರ ಗೀತೆಯ ನ್ನೇನೊ ಕಿವಿಯಲ್ಲಿ ಹೇಳಿದಂತೆ, ಮೇರಿಯಮ್ಮನವರೇನೋ ನಾಚಿ ಕೆಂಪಾದಂತೆ ಯಾಕೋ ಅವರಿಬ್ಬರನ್ನು ನೋಡಿದಾಗ ಅನ್ನಿಸಿತ್ತು.

ಹಿರಿಯಜ್ಜ, ಅಜ್ಜಿಯರಿದ್ದರೆ ವಾಹನವನ್ನು ಹೂಗಳಿಂದ ಚಂದವಾಗಿ ಅಲಂಕರಿಸಿ, ಗ್ರ್ಯಾಂಡ್ ಪೇರೆಂಟ್ಸ ಆರ್ ಆನ್ ವೇ ಎಂದು ತುತ್ತೂರಿ, ಪೀಪಿಗಳನ್ನೂದುತ್ತಾ
ಸಾಗುವ ಮೊಮ್ಮಕ್ಕಳ ಬಳಗವೂ ಉಂಟು. ಶನಿವಾರವೆಂದರೆ ತುಂಬು ಮಜಾ ದಿನ. ಯಾರೊಬ್ಬರೂ ಮನೆಯಲ್ಲಿರುವುದಿಲ್ಲ.

ನಾಯಿ ಪ್ರೀತಿ

ಇನ್ನು ಇವರ ಪ್ರಾಣಿ ಪ್ರೀತಿಯಂತೂ ಅಸಾಧಾರಣವಾದುದು. ಮನೆಗೊಂದು ಮುದ್ದು ಮರಿ ಇರಲೇ ಬೇಕು. ಸಾಮಾನ್ಯವಾಗಿ ನಾಯಿ ಸಾಕುತ್ತಾರೆ. ಅನೇಕರು ಬೆಕ್ಕನ್ನು ಸಾಕುತ್ತಾರೆ. ಈ ನಾಯಿ ಗಳಾದರೋ ವೈವಿಧ್ಯಮಯ. ಕಲ್ಪಿಸಿಕೊಳ್ಳಲೂ ಸಾಧ್ಯವಿರದ ನಾನಾ ರೂಪಿಗಳು, ಜಾತಿಗಳ . ಕೆಲವು ಸಿಂಹದಂತೆ, ಕೆಲವು ಕರಡಿಯಂತೆ, ಕರುವಂತೆ, ಕುರಿಯಂತೆ, ತೋಳದಂತೆ, ಅಂಗೈಯಲ್ಲಿ ಕೂಡುವ ಗೊಂಬೆಯಂತೆ, ಕೋಣದಂತೆ ನೂರಿನ್ನೂರು ಪೌಂಡ್ ತೂಗುವ ಹೌಂಡುಗಳೂ ಉಂಟು.

ಉಡವೂ ಸಾಕುಪ್ರಾಣಿ
ಅಮೆರಿಕನ್ನರು ಪೆಟ್‌ಗಳೆಂದರೆ ನಾಯಿ, ಬೆಕ್ಕುಗಳಲ್ಲಷ್ಟೇ ತೃಪ್ತರಲ್ಲ. ಕುರಿ, ಕೋಳಿ, ಗಿಣಿ ಗೊರವಂಕ ಗಳಲ್ಲದೆ ಹದ್ದು, ಗಿಡುಗ, ಉಡ, ತೋಳಗಳನ್ನೂ ಸಾಕುತ್ತಾರೆ. ಗೆಳತಿಯೊಬ್ಬರು ತಮ್ಮ ಸ್ನೇಹಿತರ ಮನೆಯಲ್ಲಿ ಸಾಕಿರುವ ಹೆಬ್ಬಾವನ್ನು ಹೊರಲಾರದೆ ಹೊತ್ತು ಕೊಂಡು ಭಯ, ಭಾರ ಗಳಿಂದ ಸುಸ್ತಾಗಿರುವ ಪಟ ಕಳಿಸಿದ್ದರು. ಕ್ಲಿಯೋಪಾತ್ರ ಕರಿನಾಗರಗಳನ್ನು ಸಾಕಿ ಕೊಂಡಿದ್ದಳಂತೆ. ಇಲ್ಲಿನ ಪೆಟ್ ಅಂಗಡಿಯಲ್ಲಿ ಬಿಂದಾಸಾಗಿ ಸ್ವಲ್ಪ ವೇಗವಾಗಿಯೆ ಇಡೀ ಅಂಗಡಿಯನ್ನು ಸುತ್ತುವ ಆಮೆ ಇದೆ.

ಒಟ್ಟಿನಲ್ಲಿ ಇವರು ಪೆಟ್ ಪ್ರಿಯರು. ಹದಿನೈದು ಡಾಲರುಗಳಿಗೆ ಇಪ್ಪತ್ತೈದು ಪೌಂಡಿನ ಬಾಸುಮತಿ ಅಕ್ಕಿ ದೊರೆತರೆ, ಮಗಳು ಸಾಕಿರುವ ಶುದ್ಧ ತಳಿಯ ಸೈಬೀರಿ ಯನ್ ಹಸ್ಕಿ ಕ್ಯುಪಿಡ್‌ಗೆ ಎಂಭತ್ತೆರೆಡು ಡಾಲರುಗಳ ಆರಿಜಿನ್ ಊಟ ಬೇಕು. ಬೇರೇನೂ ತಿನ್ನದೆ ಉಪವಾಸ ಬೀಳುತ್ತಾನೆ. ಅಮೆರಿಕೆಯಲ್ಲಿ ನಾಯಿಯಾಗಿ ಹುಟ್ಟು ವುದು ಪುಣ್ಯವೇ ಸರಿ. ಏಕೆಂದರೆ ದುಡಿಮೆಯ ಸಾಕಷ್ಟು ಭಾಗವನ್ನು ಈ ಮುದ್ದು ಕಂದಮ್ಮಗಳಿಗೆ ಮಡಗ ಬೇಕು. ನಾನೇನೋ ನನ್ನ ಮಗಳ ಈ ತೆವಲುಗಳನ್ನು ಗಮನಿಸಿ ಅವಳು ನಿಜವಾಗಿಯೂ ಹುಚ್ಚಿ ಎಂದು ಭಾವಿಸಿದ್ದೆ. ಕ್ರಮೇಣ ತಿಳಿದು ಕಾಣಲು ಶುರು ಮಾಡಿದ ಸತ್ಯವೆಂದರೆ ಪಕ್ಕದ ಮನೆಯಬ್ಬ ಲ್ಯಾಬ್ರಾರ್ಡರ್ ಹುಚ್ಚ, ಅಕ್ಕದ ಮನೆಯಬ್ಬ ಟೆರಿಯರ್ ಹುಚ್ಚ, ಎದುರು ಮನೆಯಲ್ಲಿ ಬೊಂಬೆಯಂತಹ ಟಾಯ್ ಪೂಡಲ್ ಹುಚ್ಚ, ಆಚೆ ರಸ್ತೆಯಲ್ಲಿ ಚಹಾದ ಕಪ್ಪನೊಳಗೆ ಬೆಚ್ಚಗೆ ಅಡಗಿ ಕೊಳ್ಳುವ ಟೀ ಕಪ್ ಪೂಡಲ್ ಹುಚ್ಚಿ ….. ಅಮೆರಿಕದ ತುಂಬೆಲ್ಲ ಹುಚ್ಚರು ಕಾಣ ತೊಡಗಿದರು.

ಪ್ರಾಚೀನ ತಳಿ
ಸಲೂಕಿ ನಾಯಿ ಜಗತ್ತಿನ ಅತ್ಯಂತ ಪ್ರಾಚೀನ ತಳಿಗಳಂದು. ಇದು. ಕ್ರಿಸ್ತ ಪೂರ್ವ 7000 ದಲ್ಲಿ ಕಾಣಿಸಿ ಕೊಂಡ ನಾಯಿ ಯಂತೆ. ರಸ್ತೆಯಲ್ಲಿ ಈ ನಾಯಿ ನಡೆದು ಹೋಗುತ್ತಿದ್ದಾಗ ನನಗೆ ಬೆರಗು ಹುಟ್ಟಿಸಿತ್ತು. ಈ ತಳಿ ಇಜಿಪ್ಷಿಯನ್ನರ ಪ್ರೀತಿಯ ನಾಯಿಯಾಗಿತ್ತು. ಈ ಶ್ವಾನ ಪುರಾಣ ಹೇಳಿದವಳು ನನ್ನ ಮಗಳೆ. ಕ್ಯುಪಿಡನ ಡೇ ಕೇನರ್‌ಲ್ಲಿ ಕಂಡ ಚೌಚೌ ಅಂತೂ ಥೇಟ್ ಸಿಂಹವೇ. ಅ ಕಂಡದ್ದು ನೂರು ಪೌಂಡು ತೂಗುವ ಎದೆ ನಡುಗಿಸುವ ಬರ್ನೀಸ್ ಮೌಂಟನ್ ಡಾಗ್. ಕುದುರೆ ಮರಿಯಂತಿರುವ ಗ್ರೇಟ್ ಡೇನ್ ಪ್ರಪಂಚದ ಅತಿ ಉದ್ದ ನಾಯಿ. ಇವೆಲ್ಲವೂ ಅಮೆರಿಕನ್ನರ ಒಲವುಗಳು. ಅಮೆರಿಕದಲ್ಲಿ ಮನೆಗೊಂದು ಮಗು ಇರುತ್ತೊ ಇಲ್ಲವೋ ಮುದ್ದು ನಾಯಿಗಳಂತೂ ಇರಲೇ ಬೇಕು.

ಈ ಮುದ್ದು ಪ್ರಾಣಿಗಳನ್ನು ಪ್ರಾಣ ಸಮಾನವಾಗಿ ಕಾಪಾಡಿ ಕೊಳ್ಳುತ್ತಾರೆ. ಅವುಗಳಿಗೆ ಹೊತ್ತಿಗೆ ಸರಿಯಾಗಿ ಆಹಾರ, ನಡವಳಿಕೆ ಕುರಿತಂತೆ ತರಬೇತಿ, ಸೋಷಿಯಲೈಸೇಷನ್ನಿಗಾಗಿ ಡೇಕೇರ್, ವೈದ್ಯರ ತಪಾಸಣೆ, ಎಕ್ಸ್ ರೇ, ರೋಗ ನಿರೋಧಕ ಚುಚ್ಚು ಮದ್ದುಗಳು, ಟ್ರೀಟ್‌ಗಳು, ವ್ಯಾಯಾಮಗಳು ತಪ್ಪದೇ
ನಡೆಯ ಬೇಕ . ಈ ನಾಯಿಗಳು ಕಚ್ಚುವುದೇ ಇಲ್ಲ. ಇವು ಸ್ನೇಹ ಜೀವಿಗಳು.

ಇವು ಗುರಾಯಿಸುವುದಿಲ್ಲ
ಇಂದು ಮಿಷಿಗನ್ನಿನ ನಮ್ಮ ನೋವೈ ಬಡಾವಣೆಯ ಪೆಟ್ ಅಂಗಡಿಯಲ್ಲಿ ಪೆಟ್ ಗಳ ಸ್ನೇಹ ಮಿಲನ. ತನ್ನ ಅಂಗಡಿಯ ಗ್ರಾಹಕ ಶುನಕಗಳು ಹಾಗೂ ಅವರ ಪೋಷಕರಿಗೆ ಪ್ರೀತಿಯ ಆಹ್ವಾನ. ಇದೇ ಬಾರ್ಕಿಂಗ್ ಲಾಟ್. ಬಂದ ಮುದ್ದು ಮರಿಗಳಿಗೆಲ್ಲ ಒಂದೊಂದು Goodie Bag. ಅದರ ತುಂಬ ಟ್ರೀಟುಗಳು, ಬೊಂಬೆ, ನಾಯಿ ಚಿತ್ರ ಹೊತ್ತ ಟವಲು, ಚರ್ಮಕ್ಕೆ ಬೇಕಾದ ಮುಲಾಮು, ಪುಟ್ಟ ಬಾಚಣಿಗೆ ….. ತಿನ್ನಲು ಐಸ್ ಕ್ರೀಂ, ಬಿಸ್ಕತ್ತುಗಳು, ಉಚಿತವಾಗಿ ಉಗುರುಗಳ
ಟ್ರಿಮ್ಮಿಂಗ್.

ಹತ್ತಾರು ನಾಯಿಗಳು ತಮ್ಮ ಪೋಷಕರೊಂದಿಗೆ ಶಿಸ್ತಾಗಿ ಭಾಗವಹಿಸಿದ್ದವು. ಎಲ್ಲ ಅಡಿಗಳುದ್ದದ ಕಾರುಗಳಿಂದ ಇಳಿದ ಶ್ವಾನ ನಾರಾಯಣರು. ಅಷ್ಟೊಂದು ನಾಯಿ ಸಂತೆ ನೆರೆದಿದ್ದರೂ ಯಾವುದೂ ಯಾವುದನ್ನೂ ಗುರಾಯಿಸುತ್ತಿರಲಿಲ್ಲ, ಬೊಗಳುತ್ತಿಲ್ಲ, ಕಚ್ಚುತ್ತಿಲ್ಲ. ಅಲ್ಲಿದ್ದ ನಾಯಿಗಳು, ಅವುಗಳ ಹೆಸರುಗಳೂ ತುಂಬ
ಆಕರ್ಷಕ . ಕುಕೀ, ಲಂಡನ್, ಫಿನಿಗನ್, ಕೋಕೋ, ಬೆಲ್ಲಾ, ಎವರೆಸ್ಟ್, ಸ್ನೊ, ಕೋಡ, ಸಿಂಬ, ಅಪೋಲೋ …….  ಅದೆಷ್ಟೊ ಪ್ರೀತಿಯಿಂದ ಇಟ್ಟ ಹೆಸರುಗಳು. ಅವು ಅಲ್ಲಿ ನೆರೆದಿದ್ದ ಅಮ್ಮ, ಅಪ್ಪಂದಿರಿಗೆ ಸನ್ನಿ, ಬೇಬಿ, ಹನಿ, ಪಂಪ್ಕಿನ್, ಕಪ್ ಕೇಕ್, ಸ್ವೀಟ್ ಹಾರ್ಟುಗಳೆ.

ಈ ಮೇಳದಲ್ಲಿ ನಾಯಿಗಳ ಮೆರವಣಿಗೆ. ಅವುಗಳ ನೆಪದಲ್ಲಿ ಪೋಷಕರ ಮಿಲನವೂ ಆಗಿತ್ತು. ಅದೇ ವರ್ಷ ಬೇಬಿ ನರ್ಸರಿಗೆ ಮಕ್ಕಳನ್ನು ಸೇರಿಸಿದ ತಂದೆ ತಾಯಿಗಳ ಮನಸ್ಸು ಅವರದಾಗಿತ್ತು. ಪರಸ್ಪರರಲ್ಲಿ ತಮ್ಮ ಮಕ್ಕಳ ಆರೋಗ್ಯ, ಬುದ್ಧಿವಂತಿಕೆಯ ಬಗೆಗೆ ಮಾತುಕತೆ. ನಮ್ಮವನಂತೂ ಪರಮ ಭಾಗವತನಾಗಿ ಕುಣಿದಾಡಿದ. ಅವನ ಪ್ರೀತಿಯ ಗೆಳತಿ ಕೋಕೋ ವಿಶ್ವ ಸುಂದರಿ ಪಟ್ಟ ಪಡೆದಿದ್ದಳು. ಕ್ಯುಪಿಡನಂತೂ ಈ ಮೇಳದಲ್ಲಿ ಎಲ್ಲರ ಬಾಯಲ್ಲೂ ಜೇನ ಹನಿಯಾಗಿ ಮೆರೆದಾಡಿದ. ನನಗೂ ಈ ನಡುವೆ ಅವನು ಹಸ್ಕಿ ಎನ್ನುವುದೇ ಮರೆತು ಹೋಗಿದೆ. ಭಗವಂತನ ಅತಿಥಿಯಾಗಿ ಅವನು ನಮ್ಮ ಮನೆಯ ಮುದ್ದು ಕಂದಮ್ಮ ನಾಗಿದ್ದಾನೆ.

ಅಮೆರಿಕನ್ನರ ಜೀವನ ಪ್ರೀತಿ, ಬದುಕನ್ನು ಸಂಭ್ರಮಿಸುವ ಪರಿ, ಪ್ರಕೃತಿ ಪ್ರೇಮ, ಶುನಕ ಪ್ರೇಮ, ಉಕ್ಕುವ ಉತ್ಸಾಹಗಳಿಗೆ ನಮೋ ನಮಃ.