Friday, 18th June 2021

ಯಾರದ್ದೋ ಮಾತು ಕೇಳಿ ಪ್ರತಿಭಟನೆ ನಡೆಸಿದರೆ ಬಲಿಪಶುಗಳಾಗುವುದು ನೀವೇ: ಸಿಎಂ ಬಿಎಸ್’ವೈ

ಬೆಂಗಳೂರು: ಯಾರದ್ದೋ ಮಾತು ಕೇಳಿಕೊಂಡು ಪ್ರತಿಭಟನೆ ನಡೆಸಿದರೆ ಬಲಿಪಶುಗಳಾಗುವುದು ನೀವೇ. ಯಾವುದೇ ಕಾರಣ ಕ್ಕೂ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಪುನರುಚ್ಚರಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ತಕ್ಷಣವೇ ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕೆಂದು ಮನವಿ ಮಾಡಿದರು.

ಈಗಿನ ಸ್ಥಿತಿಯಲ್ಲಿ ಸಾರಿಗೆ ಸಿಬ್ಬಂದಿಗೆ 6ನೇ ವೇತನ ಆಯೋಗ ಜಾರಿ ಮಾಡಲು ಆಗುವುದಿಲ್ಲ. ಹಠಕ್ಕೆ ಬಿದ್ದು ಪ್ರತಿಭಟನೆ ನಡೆಸ ಬೇಡಿ. ನಿಮ್ಮ ಹಿತ ಕಾಪಾಡಲು ಸರ್ಕಾರ ಬದ್ದವಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೋರಿದರು. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಮುಷ್ಕರ ನಡೆಸುವುದರಲ್ಲಿ ಅರ್ಥವೇ ಇಲ್ಲ. ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ. ತಕ್ಷಣವೇ ಮುಷ್ಕರ ಕೈಬಿಟ್ಟು ಬಸ್‍ಗಳ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಹೇಳಿದರು.

ನಾವು ಸರ್ಕಾರದ ಬೊಕ್ಕಸದಿಂದಲೇ ಸಾರಿಗೆ ನೌಕರರಿಗೆ 2300 ಕೋಟಿ ರೂ. ಸಂಬಳ ನೀಡಿದ್ದೇವೆ. ಇದು ನಿಮಗೆ ಅರ್ಥವಾಗುವು ದಿಲ್ಲವೆಂದರೆ ಏನು ಮಾಡಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.

ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ.85ರಷ್ಟು ಹಣ ಸರ್ಕಾರಿ ನೌಕರರ ಸಂಬಳ, ಪಿಂಚಣಿ ಮತ್ತಿತರ ಕಾರ್ಯಗಳಿಗೆ ನೀಡು ತ್ತಿದ್ದೇವೆ. ಶೇ.15ರಷ್ಟು ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಬಳಸುತ್ತಿದ್ದೇವೆ. ಯಾವ ಕಾರಣಕ್ಕಾಗಿ ನೀವು ಪ್ರತಿಭಟನೆ ನಡೆಸು ತ್ತಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಕೈ ಮುಗಿದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ. ಯಾರದೋ ಮಾತು ಕೇಳಿ ಪ್ರತಿಭಟನೆ ನಡೆಸಬೇಡಿ. 8 ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ನಿಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವುದು ಹಾಗೂ 6ನೇ ವೇತನ ಆಯೋಗ ನೀಡಲು ಸಾಧ್ಯವಿಲ್ಲ. ಈಗಾಗಲೇ ಈಡೇರಿಸಿರುವ ಬೇಡಿಕೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳಿದ್ದರೆ ತಕ್ಷಣವೇ ಸರಿಪಡಿಸುತ್ತೇವೆ. ನಮ್ಮ ಮಾತಿನಲ್ಲಿ ನಂಬಿಕೆ ಇಡಬೇಕೆಂದು ಮನವಿ ಮಾಡಿದರು.

ನೌಕರರ ಸಂಘಟನೆಗಳ ಜೊತೆ ಮಾತುಕತೆ ನಡೆಸುತ್ತೀರ ಎಂಬ ಪ್ರಶ್ನೆಗೆ ಯಾರ ಜೊತೆ ಮಾತನಾಡಬೇಕು, ಮಾತುಕತೆಗೆ ಬನ್ನಿ ಎಂದರೂ ಬರುವುದಿಲ್ಲ. ಇಷ್ಟಾದ ನಂತರ ಅವರ ಜೊತೆ ಏನಿದೆ ಚರ್ಚಿಸಲು? ಏನೇ ಸಮಸ್ಯೆಗಳಿದ್ದರೂ ಇತ್ಯರ್ಥ ಮಾಡಿಕೊಳ್ಳೋಣ. ಮೊದಲು ಕರ್ತವ್ಯಕ್ಕೆ ಹಾಜರಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ತಿಳಿಸಿದರು.

ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್‌ ಬುಕ್‌ ಪೇಜ್‌ ಲೈಕ್‌ ಮಾಡಿ

Leave a Reply

Your email address will not be published. Required fields are marked *